LATEST NEWS
ಬೆಳಗ್ಗೆ ಬೇಗನೆ ಎದ್ದೇಳುವುದು ಹೇಗೆ? – 10 ಆಯುರ್ವೇದ ಸಲಹೆಗಳು
ಯಾವುದೇ ಆಯುರ್ವೇದ ಪಠ್ಯ ಪುಸ್ತಕವನ್ನು ತೆರೆದರೆ, ನೀವು ಕಾಣಬಹುದಾದ ಪ್ರಧಾನ ಸಲಹೆಗಳಲ್ಲೊಂದು ಮುಂಜಾನೆ ಬೇಗನೆ ಎದ್ದೇಳುವುದು. ಆಯುರ್ವೇದವು ಸೂರ್ಯೋದಯಕ್ಕೆ 45 ನಿಮಿಷಗಳ ಮೊದಲು “ಬ್ರಾಹ್ಮೀ ಮುಹೂರ್ತ”ದಲ್ಲಿ ಎಚ್ಚರಗೊಳ್ಳಲು ಸಲಹೆ ನೀಡುತ್ತದೆ. ನಾವೆಲ್ಲರೂ ಮುಂಜಾನೆ ಸಮಯದ ಶಾಂತತೆ ಮತ್ತು ಸೊಬಗನ್ನು ಆನಂದಿಸುವ ಕನಸು ಕಾಣುತ್ತಿದ್ದರೂ, ಈ ಕಾರ್ಯವನ್ನು ಸಾಧಿಸುವುದಕ್ಕೋಸ್ಕರ ನಮ್ಮ ದಿನಚರಿಯನ್ನು ಹೊಂದಿಸಲು ಸತತವಾಗಿ ಪ್ರಯತ್ನಿಸಬೇಕು. ಈ ಕುರಿತು ಕೆಲವು ಸಲಹೆಗಳು ಇಲ್ಲಿವೆ.
ನಿಮ್ಮ ಗುರಿಯನ್ನು ಹೊಂದಿಸಿ: ನಿಮ್ಮ ಮನಸ್ಸಿನಲ್ಲಿರುವ ಸಮಯವನ್ನು ನಿರ್ಧರಿಸಿ. ಐದು ಗಂಟೆ…ಆರು ಗಂಟೆ…ಆರೂವರೆ? ಸಮಯವನ್ನು ನಿಗದಿಪಡಿಸಿ ಮತ್ತು ನಿಗದಿಪಡಿಸಿದ ಸಮಯದಲ್ಲಿ ಎಚ್ಚರಗೊಳ್ಳಲು ನಿಮ್ಮ ಎಲ್ಲಾ ಮಾನಸಿಕ ಶಕ್ತಿಯನ್ನು ಕೇಂದ್ರೀಕರಿಸಿ.
ರಾತ್ರಿ ಟಿವಿ, ಫೋನ್ ಮತ್ತು ಲ್ಯಾಪ್ಟಾಪ್ ಅನ್ನು ಸ್ವಿಚ್ ಆಫ್ ಮಾಡಿ. ಟಿವಿ ಮತ್ತು ಫೋನ್ ರಾತ್ರಿ ನಿಮ್ಮ ನಿದ್ರೆಯ ಸಮಯವನ್ನು ವಿಳಂಬಗೊಳಿಸುವ ಎರಡು ದೊಡ್ಡ ಅಡೆತಡೆಗಳು. ಕನಿಷ್ಠ ಪಕ್ಷ 10 ಗಂಟೆಗಾದರೂ ಅವುಗಳನ್ನು ಆಫ್ ಮಾಡಲು ದೃಢ ನಿರ್ಧಾರವನ್ನು ಮಾಡಿ.
ಈ ವಿಚಾರವನ್ನು ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ. ನೀವು ಅದನ್ನು ಇತರರಿಗೆ ತಿಳಿಸಿದರೆ, ಅವರು ನಿಮ್ಮನ್ನು ಗೇಲಿ ಮಾಡಬಹುದು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅನುಮಾನಿಸಬಹುದು. ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರುವುದು ಮುಖ್ಯ.
ರಾತ್ರಿಯಲ್ಲಿ ಲಘುವಾದ ಆಹಾರ ಸೇವಿಸಿ – ರಾತ್ರಿಯಲ್ಲಿ ಜೀರ್ಣವಾಗಲು ಕಷ್ಟಕರವಾದ ಆಹಾರವನ್ನು ಸೇವಿಸಬೇಡಿ. ಸಿಹಿತಿಂಡಿಗಳು, ಸುಲಭದಲ್ಲಿ ಜೀರ್ಣವಾಗದ ಮತ್ತು ಹುರಿದ ಆಹಾರ ಪದಾರ್ಥಗಳು, ಹೆಪ್ಪುಗಟ್ಟಿದ ಆಹಾರ ಪದಾರ್ಥಗಳು ಇತ್ಯಾದಿಗಳಿಂದ ದೂರವಿರಿ, ಏಕೆಂದರೆ ಬೆಳಿಗ್ಗೆ ಶರೀರದಲ್ಲಿ ಲಘುತ್ವವನ್ನು ಅನುಭವಿಸಲು ರಾತ್ರಿಯಲ್ಲಿ ಲಘು ಭೋಜನ ಮಾಡುವುದು ಬಹಳ ಮುಖ್ಯ, ಇದು ಬೆಳಗ್ಗೆ ಬೇಗನೆ ಎಚ್ಚರಗೊಳ್ಳಲು ಸಹಾಯ ಮಾಡುತ್ತದೆ.
ರಾತ್ರಿಯಲ್ಲಿ ಅರ್ಧ ಗ್ಲಾಸ್ ನೀರು ಕುಡಿಯಿರಿ – ಈ ರೀತಿ ಮಾಡುವುದರಿಂದ, ಮುಂಜಾನೆ ಹೊತ್ತಿಗೆ ನಿಮ್ಮ ಮೂತ್ರಕೋಶವು ತುಂಬಿರುತ್ತದೆ ಮತ್ತು ಇದರಿಂದ ನೀವು ಬೇಗನೆ ಎಚ್ಚರಗೊಳ್ಳಲು ಸಹಾಯವಾಗುತ್ತದೆ. ಆದರೆ ಈ ಸಲಹೆ ಮಧುಮೇಹ ರೋಗಿಗಳಿಗೆ ಮತ್ತು ಆಗಾಗ್ಗೆ ಮೂತ್ರ ವಿಸರ್ಜನೆಯ ಸಮಸ್ಯೆ ಇರುವ ಜನರಿಗೆ ಸೂಕ್ತವಲ್ಲ.
ಅಲರಾಂ ಅನ್ನು ನಿಮ್ಮ ಹಾಸಿಗೆಯಿಂದ ಸ್ವಲ್ಪ ದೂರದಲ್ಲಿ ಇರಿಸಿ. ಇದರಿಂದ ಅಲರಾಂ ಆಫ್ ಮಾಡಿ ಮತ್ತೆ ನಿದ್ರಿಸುವಂತೆ ಮಾಡುವುದನ್ನು ತಪ್ಪಿಸಬಹುದು.
ಮೊದಲ ಅರ್ಧ ಘಂಟೆಯ ನಂತರ, ನಿಮಗೆ ಆರಾಮದಾಯಕ ಅನುಭವವುಂಟಾಗುತ್ತದೆ – ಆರಂಭದಲ್ಲಿ, ನೀವು ನಿಗದಿತ ಸಮಯದಲ್ಲಿ ಅಂದರೆ ಬೆಳಗ್ಗೆ ಬೇಗನೆ ಎದ್ದಾಗ, ನೀವು ತಲೆಸುತ್ತು, ತಲೆ ಭಾರ ಮತ್ತು ಆಲಸ್ಯತನವನ್ನು ಅನುಭವಿಸುವಿರಿ. ಆ ಸಮಯದಲ್ಲಿ, ಪುನಃ ಮಲಗಿ ನಿದ್ರಿಸುವ ಬದಲು, ಕನಿಷ್ಠ, ಸ್ನಾನಗೃಹಕ್ಕೆ ಹೋಗಲು ಪ್ರಯತ್ನಿಸಿ, ಹಲ್ಲುಜ್ಜಿಕೊಳ್ಳಿ, ನಂತರ ದಿನಪತ್ರಿಕೆ ಓದಿ, ವ್ಯಾಯಾಮ/ಯೋಗ ಅಭ್ಯಾಸವನ್ನು ಮಾಡಿ ಮತ್ತು ಆರಂಭಿಕ ಅರ್ಧ ಘಂಟೆಯವರೆಗೆ ಸ್ವಲ್ಪ ಶ್ರಮದಿಂದ ಎಚ್ಚರವಾಗಿರಲು ಪ್ರಯತ್ನಿಸಿ. ಮೊದಲ ಅರ್ಧ ಘಂಟೆಯ ನಂತರ, ಇದು ಆಶ್ಚರ್ಯಕರವಾಗಿ ಸುಲಭವಾಗುತ್ತದೆ.
ತಣ್ಣೀರಿನ ಸ್ನಾನ ಮಾಡಿ – ತಣ್ಣೀರಿನ ಸ್ನಾನ ಮಾಡುವುದರಿಂದ ನಿಮ್ಮ ಚುರುಕುತನ ಮತ್ತು ಏಕಾಗ್ರತೆ ಸುಧಾರಿಸುತ್ತದೆ.
ಎಚ್ಚರವಾದ ನಂತರ, ಹೆಚ್ಚು ಹೊತ್ತು ಹಾಸಿಗೆಯಲ್ಲಿ ಇರಬೇಡಿ – ಎಚ್ಚರವಾದ ಕೂಡಲೇ, ಹಾಸಿಗೆಯಿಂದ ಎದ್ದೇಳಿ ಮತ್ತು ಅದರಿಂದ ದೂರವಿರಿ. ಹಾಸಿಗೆಯಲ್ಲಿ ಇದ್ದುಕೊಂಡೇ ಆ ದಿನದ ಯೋಜನೆಗಳನ್ನು ಮಾಡುವುದು ಸರಿಯಲ್ಲ. ಹೀಗೆ ಮಾಡುವುದರಿಂದ ಅದು ನಿಮ್ಮನ್ನು ಮತ್ತೆ ನಿದ್ರೆಗೆ ತಳ್ಳಬಹುದು.
ಅಸಮಂಜಸವಾದ ಗುರಿಗಳನ್ನು ಇಟ್ಟುಕೊಳ್ಳಬೇಡಿ. ನೀವು ಸಾಮಾನ್ಯವಾಗಿ 8 ಗಂಟೆಗೆ ಎದ್ದರೆ, ನೇರವಾಗಿ 5 ಗಂಟೆಗೆ ಎದ್ದೇಳುವ ಗುರಿಯನ್ನು ಇಟ್ಟುಕೊಳ್ಳಬೇಡಿ. ಬದಲಾಗಿ, ಏಳು ಗಂಟೆಯನ್ನು ಗುರಿಯಾಗಿಸಿ ಮತ್ತು ಕ್ರಮೇಣ ದಿನ ಕಳೆದಂತೆ ಸುಧಾರಿಸಿ.
ನೆನಪಿಡಿ – ಆರಂಭಿಕ ದಿನಗಳಲ್ಲಿ ನೀವು ಎದುರಿಸುತ್ತಿರುವ ಎಲ್ಲಾ ತೊಂದರೆಗಳು ಕೇವಲ ತಾತ್ಕಾಲಿಕ. ಆದರೆ ನೀವು ಆನಂದಿಸುವ ಮಾನಸಿಕ ಮತ್ತು ಆರೋಗ್ಯ ಪ್ರಯೋಜನಗಳು ಶಾಶ್ವತವಾಗಿರುತ್ತವೆ.
ಲೇಖಕರು: ಡಾ. ಜನಾರ್ಧನ ವಿ ಹೆಬ್ಬಾರ್
ಆಯುರ್ವೇದ ವೈದ್ಯರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಈಝೀ ಆಯುರ್ವೇದ ಆಸ್ಪತ್ರೆ, ಮಂಗಳೂರು
ಈ ಲೇಖನವನ್ನು ಡಾ. ಜನಾರ್ಧನ ವಿ ಹೆಬ್ಬಾರ್ ಅವರು ಬರೆದ “ಸುಗಮ ಜೀವನಕ್ಕಾಗಿ ಆಯುರ್ವೇದ” ಎಂಬ ಪುಸ್ತಕದಿಂದ ಆರಿಸಲಾಗಿದೆ. ಈ ಪುಸ್ತಕವನ್ನು ಖರೀದಿಸಲು ಈ ಕೆಳಗಿನ QR ಕೋಡ್ ಅನ್ನು ಸ್ಕ್ಯಾನ್ ಮಾಡಿ: