KARNATAKA
ಯಕ್ಷಗಾನದ ಹಿರಿಯ ಪ್ರಸಾದನ ತಜ್ಞ ಹಂದಾಡಿ ಬಾಲಕೃಷ್ಣ ನಾಯಕ್ ಇನ್ನಿಲ್ಲ…!!
ಉಡುಪಿ : ಯಕ್ಷಗಾನದ ಹಿರಿಯ ಪ್ರಸಾದನ ತಜ್ಞ ಹಂದಾಡಿ ಬಾಲಕೃಷ್ಣ ನಾಯಕ್ (76) Handadi Balakrishna Nayak ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಶ್ರೀ ಗಜಾನನ ಯಕ್ಷಗಾನ ವೇಷಭೂಷಣ ಸಂಸ್ಥೆಯ ಸಂಸ್ಥಾಪಕ, ಬಡಗುತಿಟ್ಟಿನ ಪ್ರಸಾದನ ತಜ್ಞರೂ ಆಗಿರುವ ಬಾಲಕೃಷ್ಣ ನಾಯಕ್ ಎಚ್. ಸುಬ್ಬಣ್ಣ ಭಟ್ ಮತ್ತು ಇಂದು ನಾಯಕ್ ಇವರ ಜೊತೆಯಲ್ಲಿ ಬಡಗುತಿಟ್ಟಿನ ವೇಷಭೂಷಣಗಳನ್ನು ವಿವಿಧ ಸಂಘ ಸಂಸ್ಥೆಗಳಿಗೆ ಒದಗಿಸುತ್ತಾ, ಬಳಿಕ ಸ್ವಂತ ಸಂಸ್ಥೆಯನ್ನು ಸ್ಥಾಪಿಸಿದ್ರು. ತಮ್ಮ ಅಪೂರ್ವ ಕಲಾಪ್ರತಿಭೆ ಹಾಗೂ ಸರಳ ಸಜ್ಜನಿಕೆಯಿಂದ ಎಲ್ಲ ಸಂಘ ಸಂಸ್ಥೆಗಳಿಗೂ ಅನಿವಾರ್ಯ ಎಂಬಂತೆ ಬಾಳಿದ ಧೀಮಂತರು. ಬಡಗುತಿಟ್ಟಿನ ಕಿರೀಟ ಹಾಗೂ ವೇಷಭೂಷಣಗಳ ತಯಾರಿಕೆಯಲ್ಲಿ ಸಿದ್ಧಹಸ್ತರಾಗಿದ್ದರು.
ದೇಶವಿದೇಶಗಳಲ್ಲಿ ನೂರಾರು ಮಂದಿಗೆ ಬಡಗುತಿಟ್ಟಿನ ಪಾರಂಪರಿಕ ವೇಷಭೂಷಣ ಸಿದ್ಧಪಡಿಸಿಕೊಟ್ಟ ಕೀರ್ತಿ ಬಾಲಕೃಷ್ಣ ನಾಯಕ್‍ರದ್ದು. ತನ್ನ ಮೂವರು ಪುತ್ರರೂ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಈ ಕುಟುಂಬದ ವಿಶೇಷತೆಯಾಗಿದೆ. ಇವರ ಕಲಾ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ, ಯಕ್ಷಗಾನ ಕಲಾರಂಗ ಹಾಗೂ ಕಳೆದ ವರ್ಷ ಉಡುಪಿಯಲ್ಲಿ ಜರಗಿದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಗೌರವಿಸಲಾಗಿತ್ತು.
ಉಡುಪಿಯ ಯಕ್ಷಶಿಕ್ಷಣ ಅಭಿಯಾನ ಯಶಸ್ವಿಯಾಗುವಲ್ಲಿ ಬಾಲಕೃಷ್ಣ ನಾಯಕ್‍ರ ಕೊಡುಗೆ ಮಹತ್ತರವಾದುದು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಯಕ್ಷಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರೂ, ಉಡುಪಿಯ ಶಾಸಕರೂ ಆದ ಯಶಪಾಲ್ ಸುವರ್ಣ, ಸ್ಥಾಪಕ ಟ್ರಸ್ಟಿ ಕೆ.ರಘುಪತಿ ಭಟ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಬ್ರಹ್ಮಾವರದ ಅಜಪುರ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪದ್ಮನಾಭ ಗಾಣಿಗ ಹಾಗೂ ಸದಸ್ಯರು ತೀರ್ವ ಸಂತಾಪ ಸೂಚಿಸಿದ್ದಾರೆ.