LATEST NEWS
ಹಿರಿಯ ಸರಳ ಸಜ್ಜನಿಕೆಯ ರಾಜಕಾರಣಿ ಮಾಜಿ ಸಚಿವ ಬಿ.ಎ ಮೊಹಿದ್ದೀನ್ ವಿಧಿವಶ
ಹಿರಿಯ ಸರಳ ಸಜ್ಜನಿಕೆಯ ರಾಜಕಾರಣಿ ಮಾಜಿ ಸಚಿವ ಬಿ.ಎ ಮೊಹಿದ್ದೀನ್ ವಿಧಿವಶ
ಮಂಗಳೂರು ಜುಲೈ 10: ಹಿರಿಯ ಸರಳ ಸಜ್ಜನಿಕೆಯ ರಾಜಕಾರಣಿ ಮಾಜಿ ಸಚಿವ ಬಿ.ಎ ಮೊಹಿದ್ದೀನ್ ಇಂದು ನಿಧನರಾಗಿದ್ದಾರೆ. ಇಂದು ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಉಸಿರಾಟದ ತೊಂದರೆ ಸೇರಿದಂತೆ ವಯೋ ಸಹಜ ಕಾಯಿಲೆಯಿಂದ ಮೊಯಿದ್ದೀನ್ ಅವರು ಬಳಲುತ್ತಿದ್ದರು. ಮೂಲತಃ ಮಂಗಳೂರು ನಿವಾಸಿಗಳಾಗಿದ್ದು, ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮಂಗಳೂರಿನ ಬಜ್ಪೆ ಮೂಲದವರಾಗಿದ್ದು ಜನತಾ ಪರಿವಾರದಲ್ಲಿ ಸಕ್ರೀಯ ರಾಜಕರಣಿಯಾಗಿದ್ದರು. ದೇವರಾಜ್ ಅರಸ್ ನಿಕಟವರ್ತಿಯಾಗಿದ್ದ ಬಿ ಎ ಮೊಹಿದ್ದೀನ್ ಅವರು 1978ರಲ್ಲಿ ಬಂಟ್ವಾಳ ಕ್ಷೇತ್ರದ ಶಾಸಕರಾಗಿದ್ದರು.
ಕಿರು ಪರಿಚಯ
1938 ಮೇ 5 ಯಲ್ಲಿ ಮಂಗಳೂರಿನ ಬಜ್ಪೆಯಲ್ಲಿ ಅಬ್ದುಲ್ ಖಾದರ್ ಹಲೀಮಾ ದಂಪತಿಗೆ ಜನಿಸಿದ್ದ ಅಬ್ದುಲ್ ಖಾದರ್ ಮೊಯ್ದೀನ್ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ 1959- 1961 ಬಿಎಸ್ಸಿ ಪೂರ್ಣಗೊಳಿಸಿದ್ದರು. 1962 ಮೇ 25ರಂದು ಖತೀಜಾ ಜತೆ ಮದುವೆಯಾಗಿದ್ದ ಮೊಯಿದಿನ್ ದಂಪತಿಗಳಿಗೆ ಹಲೀಮಾ ಶಾಹಿನ್, ಎ.ಕೆ. ಮುಷ್ತಾಕ್, ಫಾತಿಮಾ ಸಬೀನಾ, ಆಸಿಫ್ ಮಸೂದ್ ನಾಲ್ವರು ಮಕ್ಕಳಿದ್ದು ಕುಟುಂಬಕ್ಕೆ ಚಿಕ್ಕಮಗಳೂರಿನಲ್ಲಿ ಕೃಷಿ ಹಾಗೂ ಮಂಗಳೂರಿನಲ್ಲಿ ಉದ್ಯಮವನ್ನು ಹೊಂದಿದ್ದಾರೆ.
1969ರಲ್ಲಿ ಸಕ್ರೀಯ ರಾಜಕರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ಸಕ್ರೀಯ ರಾಜಕರಣಕ್ಕೆ ಧುಮುಕಿದ್ದರು. 1975 ರಿಂದ 1980 ರವರೆಗೆ ದೇವರಾಜ್ ಅರಸ್ ನೇತೃತ್ವದಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1978ರಂದು ಬಂಟ್ವಾಳ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ವಿಧಾನ ಸಭೆ ಪ್ರವೇಶಿದ್ದರು.
ಆ ನಂತರ ಟಿಕೆಟ್ ದೊರಕಿಲ್ಲವೆಂದು ಜೆಡಿಎಸ್ ಸೇರಿದ್ದ ಬಿ.ಎ.ಮೊಯ್ದೀನ್ 1990-2002ರವೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. 1994-1995ರವರೆಗೆ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಿಸಿದ್ದ ಮೊಯಿದಿನ್ 1995- 1999ರವರೆಗೆ ಸಣ್ಣ ಕೈಗಾರಿಕೆ ಹಾಗೂ ಉನ್ನತ ಶಿಕ್ಷಣ ಸಚಿವರಾಗಿದ್ದರು. 2007ರಲ್ಲಿ ಮತ್ತೆ ಐವನ್ ಡಿಸೋಜಾ ನೇತೃತ್ವದಲ್ಲಿ ಕಾಂಗ್ರೆಸ್ ಮರಳಿದ್ದರು. ಫೆಡರೇಷನ್ ಆಫ್ ಮುಸ್ಲಿಂ ಎಜುಕೇಶನಲ್ ಇನ್ಸ್ ಸ್ಟಿಟ್ಯೂಟ್ ನ ಅಧ್ಯಕ್ಷರಾಗಿದ್ದ ಬಿ.ಎ.ಮೊಯ್ದೀನ್ ರಷ್ಯಾ, ಹವಾನಾದ ಕ್ಯೂಬಾ, ಚೀನಾದ ಶಾಂಗೈನಲ್ಲಿ ಶಾಂತಿ ಸಭೆ, ಸಮಾವೇಶಗಳಲ್ಲಿ ಭಾಗಿಯಾಗಿದ್ದಾರೆ.
ಇಂದು ಅಪರಾಹ್ನ ಪಾರ್ಥಿವ ಶರೀರ ಮಂಗಳೂರಿಗೆ ಆಗಮಿಸಲಿದ್ದು, ಹುಟ್ಟೂರು ಬಜ್ಜೆಯಲ್ಲಿ ಸಂಜೆ ಅಂತ್ಯಕ್ರೀಯೆ ನಡೆಯಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.