LATEST NEWS
ಮುಸ್ಲಿಮರ ಜೊತೆ ವ್ಯಾಪಾರ ಮಾಡದಂತೆ ಕರೆ – ವಿಎಚ್ ಪಿ ಮಖಂಡ ಶರಣ್ ಪಂಪ್ವೆಲ್ ವಿರುದ್ದ ಎಫ್ಐಆರ್
ಮಂಗಳೂರು ಅಕ್ಟೋಬರ್ 18: ಮಂಗಳಾದೇವಿ ದೇವಸ್ಥಾನದ ಸಮೀಪದ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಹಿಂದೂ ವ್ಯಾಪಾರಸ್ಥರ ಅಂಗಡಿಗಳಿಗೆ ಭಗವಾಧ್ಬಜ ಕಟ್ಟಿ ಮುಸ್ಲಿಮರ ಜೊತೆ ವ್ಯಾಪಾರ ಮಾಡದಂತೆ ಕರೆ ಕೊಟ್ಟಿದ್ದ ವಿಶ್ವಹಿಂದೂ ಪರಿಷತ್ ದಕ್ಷಿಣಕನ್ನಡ ಜಿಲ್ಲಾ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ವಿರುದ್ದ ಎಫ್ಐಆರ್ ದಾಖಲಾಗಿದೆ.
ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ವಿಎಚ್ ಪಿ ಮುಖಂಡ ಶರಣ್ ಪಂಪ್‌ವೆಲ್ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಮಂಗಳಾದೇವಿ ದೇವಸ್ಥಾನಕ್ಕೆ ತೆರಳಿ ವಠಾರದಲ್ಲಿರುವ ಹಿಂದೂ ವ್ಯಾಪಾರಿಗಳ ಅಂಗಡಿಗಳ ಮೇಲೆ ಕೇಸರಿ ಧ್ವಜವನ್ನು ನೆಟ್ಟಿದ್ದರು. ಅಲ್ಲದೆ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಹಿಂದೂಗಳು ತಮಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಹಿಂದೂ ವ್ಯಾಪಾರಿಗಳ ಅಂಗಡಿಗಳಿಂದ ಮಾತ್ರ ಪಡೆದುಕೊಳ್ಳುವಂತೆ ಹೇಳಿಕೆ ನೀಡಿದ್ದರು. ಈ ಕೃತ್ಯವು ಭಿನ್ನಕೋಮಿನ ನಡುವೆ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿರುವುದಾಗಿದೆ. ಅದರಂತೆ ದಕ್ಷಿಣ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಎಸ್ಸೈ ಮನೋಹರ್ ಪ್ರಸಾದ್‌ರ ದೂರಿನ ಮೇಲೆ ಶರಣ್ ಪಂಪ್‌ವೆಲ್ ಮತ್ತಿತರರ ವಿರುದ್ಧ ಪಾಂಡೇಶ್ವರ ಪೊಲೀಸರಿಂದ ಐಪಿಸಿ 153A, 34 ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಎಫ್ಐಆರ್ ಮಾಡಿದ್ದಾರೆ.
ಇನ್ನು ಶರಣ್ ಪಂಪ್ ವೆಲ್ ಹೇಳಿಕೆ ವಿರುದ್ದ ಇಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಜಾತ್ರಾ ವ್ಯಾಪಾರಸ್ಥರು, ಬೀದಿ ವ್ಯಾಪಾರಿಗಳು ಹಾಗೂ ಡಿವೈಎಫ್ಐ, ಎಡಪಂಥೀಯ ಸಂಘಟನೆಗಳ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತ್ತು, ಅಲ್ಲದೆ ಸಚಿವ ದಿನೇಶ್ ಗುಂಡೂರಾವ್ ಎದುರು ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಅಸಮಾಧಾನ ವ್ಯಕ್ತಪಡಿಸಿದ್ದರು, ಶರಣ್ ಪಂಪ್ ವೆಲ್ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಲು ಆಗ್ರಹಿಸಿದ್ದರು. ಆ ಬಳಿಕ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಕರೆದು ಕಾನೂನು ಕ್ರಮಕ್ಕೆ ಸೂಚಿಸಿದ್ದ ದಿನೇಶ್ ಗುಂಡೂರಾವ್ ಸೂಚಿಸಿದ್ದರು. ಇದರ ಬೆನ್ನಲ್ಲೇ ಇದೀಗ ಶರಣ್ ಪಂಪ್ವೆಲ್ ವಿರುದ್ದ ಎಫ್ಐಆರ್ ದಾಖಲಾಗಿದೆ.