ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ತಂದೆ ಮಗಳು ಸಾವು

ಬಂಟ್ವಾಳ ಜೂನ್ 11: ತೋಟದಲ್ಲಿ ಮುರಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ತುಳಿದ ಪರಿಣಾಮ ತಂದೆ ಮಗಳು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಬಾರಕಿನಡಿ ಎಂಬಲ್ಲಿ ಇಂದು ಸಂಜೆ ಸಂಭವಿಸಿದೆ.

ಮೃತರನ್ನು ಬಾರಕಿನಡಿ ನಿವಾಸಿಗಳಾದ 63 ವರ್ಷದ ಗೋಪಾಲಕೃಷ್ಣ ಶೆಟ್ಟಿ, ಮತ್ತು ಅವರ ಮಗಳು 20 ವರ್ಷದ ದಿವ್ಯಾಶ್ರಿ ಎಂದು ಗುರುತಿಸಲಾಗಿದೆ. ಇಂದು ಸಂಜೆ ಗೋಪಾಲಕೃಷ್ಣ ಶೆಟ್ಟಿ ಮಗಳು ದಿವ್ಯಾಶ್ರೀ ಯೊಂದಿಗೆ ಹುಲ್ಲು ತರಲೆಂದು ತೋಟಕ್ಕೆ ತೆರಳಿದ್ದ ಸಂದರ್ಭ ತೋಟದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.

ಗೋಪಾಲಕೃಷ್ಣ ಅವರು ಚೆನ್ನೈತ್ಯೋಡಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದು, ದಿವ್ಯಾಶ್ರೀ ಅವರು ಹುಟ್ಟು ವಿಕಲಾಂಗ ಯುವತಿಯಾಗಿದ್ದಾರೆ. ಹಳೆಯದಾದ ತಂತಿಗಳನ್ನು ಮೆಸ್ಕಾಂ ಇಲಾಖೆ ಬದಲಿಸದೆ ಇರುವುದು ಈ ದುರ್ಘಟನೆಗೆ ಮೂಲ ಕಾರಣವೆಂದು ಸ್ಥಳೀಯರು ಆರೋಪಿಸಿದ್ದು, ಮೆಸ್ಕಾಂ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

16 Shares

Facebook Comments

comments