LATEST NEWS
ಮುಕ್ಕೋಟಿ ದೇವರುಗಳು ವಾಸ ಮಾಡುವ ಮೂಕ ಪ್ರಾಣಿಯನ್ನು ಬೀದಿಪಾಲು ಮಾಡಿದ ಬಿಜೆಪಿ – ಮಾಜಿ ಮೇಯರ್ ಕವಿತಾ ಸನಿಲ್
ಮಂಗಳೂರು ಮಾರ್ಚ್ 6: ಸರಕಾರಿ ಅತಿಕ್ರಮಣ ಜಾಗವನ್ನು ತೆರವು ಮಾಡಿಸುವ ನೆಪದಲ್ಲಿ ಮುಕ್ಕೋಟಿ ದೇವರುಗಳು ವಾಸ ಮಾಡುವ ದನಕರುಗಳನ್ನು ಬಿಜೆಪಿಯವರು ಬೀದಿಪಾಲು ಮಾಡಿದ್ದಾರೆ ಎಂದು ಮಾಜಿ ಮೇಯರ್ ಕವಿತಾ ಸನಿಲ್ ಆರೋಪಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಸಂದರ್ಭ ಗೋವುಗಳ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ ಈಗ ಗೋವುಗಳನ್ನು ಬೀದಿ ಪಾಲು ಮಾಡಿದ್ದು, ಬಿಜೆಪಿಯ ಸಂಸದ, ಶಾಸಕರು ಮೌನವಾಗಿದ್ದು, ಆ ಮೂಕ ಪ್ರಾಣಿಗಳ ರೋದನ ಕೇಳುವವರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಸ್ಟ್‌ಗಾರ್ಡ್ ತರಬೇತಿ ಕೇಂದ್ರ ಸ್ಥಾಪನೆಗೆ ಯಾವುದೇ ಆಕ್ಷೇಪವಿಲ್ಲ. ಸರ್ಕಾರಿ ಜಾಗ ಅತಿಕ್ರಮಣವಾಗಿದ್ದರೆ ತಪ್ಪಿತಸ್ಥರ ಮೇಲೆ ಕ್ರಮ ವಹಿಸಬೇಕಿತ್ತು. ದನಕರುಗಳನ್ನು ಯಾವುದಾದರೂ ಗೋಶಾಲೆಗಳಿಗೆ ಸ್ಥಳಾಂತರಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕಟ್ಟಡ ತೆರವುಗೊಳಿಸಬಹುದಿತ್ತು. ಅದು ಬಿಟ್ಟು ಮೂಕ ಪ್ರಾಣಿಗಳನ್ನು ಬೀದಿಗೆ ಹಾಕುವವರು ನಕಲಿ ಗೋಪ್ರೇಮಿಗಳಲ್ಲದೆ ಮತ್ತಿನ್ನೇನು ಎಂದು ಪ್ರಶ್ನಿಸಿದ ಕವಿತಾ ಸನಿಲ್, ಕಾಂಗ್ರೆಸ್ ಆಡಳಿತದಲ್ಲಿದ್ದು, ಈ ರೀತಿ ಮಾಡಿದ್ದರೆ ಈಗಾಗಲೇ ಜಿಲ್ಲೆ ಹೊತ್ತಿ ಉರಿಯುವಂತೆ ಈ ನಕಲಿ ಗೋಪ್ರೇಮಿಗಳು ಮಾಡುತ್ತಿದ್ದರು ಎಂದರು.
ಇದೇ ಗೋಶಾಲೆಗೆ ಸಚಿವರು, ಶಾಸಕರು ಭೇಟಿ ನೀಡಿ ಗೋ ಪೂಜೆಯನ್ನೂ ನೆರವೇರಿಸಿದ್ದಾರೆ ಎಂದು ಹಳೆ ಫೋಟೋ ಪ್ರತಿಯನ್ನು ತೋರಿಸಿ ಮಾತನಾಡಿದ ಕವಿತಾ ಸನಿಲ್, ಈಗ ಕಳೆದೆರಡು ದಿನಗಳಿಂದ ಬೀದಿಯಲ್ಲಿ ಅಡ್ಡಾಡುತ್ತಿರುವ ಗೋವುಗಳನ್ನು ನೋಡಲು ಯಾರೊಬ್ಬರೂ ಯಾಕೆ ಭೇಟಿಯಾಗಿಲ್ಲ. ಅವುಗಳಿಗೆ ಪರ್ಯಾಯ ವ್ಯವಸ್ಥೆ ಯಾಕೆ ಕಲ್ಪಿಸಿಲ್ಲ ಎಂದು ಪ್ರಶ್ನಿಸಿದರು.