LATEST NEWS
ಆನೆ ಗುಂಪೊಂದನ್ನು ಕೆಣಕಿದ ಜನರು..ಯುವಕನನ್ನು ತುಳಿದು ಸಾಯಿಸಿದ ಸಿಟ್ಟಿಗೆದ್ದ ಆನೆ

ಗುವಾಹಟಿ: ಶಾಂತವಾಗಿ ತಮ್ಮಷ್ಟಕ್ಕೆ ರಸ್ತೆ ದಾಟುತ್ತಿದ್ದ ಆನೆಗುಂಪೊಂದನ್ನು ಕೆಣಕಲು ಹೋಗಿ ವ್ಯಕ್ತಿಯೊಬ್ಬ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಜುಲೈ 25 ರಂದು ಈ ಘಟನೆ ನಡೆದಿದ್ದು ಪ್ಯಾಸ್ಕಲ್ ಮುಂಡಾ ಕಾಡಾನೆ ದಾಳಿಗೆ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಅಸ್ಸಾಂನ ನುಮಲಿಘಡದ ಮೊರೊಂಗಿ ಟೀ ಎಸ್ಟೇಟ್ ಬಳಿ ಎನ್ಎಚ್ 39ರಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಗಳ ಹಿಂಡು ಹಾದುಹೋಗುತ್ತಿದ್ದಾಗ ಕಾರ್ಮಿಕರ ಮತ್ತು ದಾರಿಹೋಕರ ಗುಂಪೊಂದು ಮುಖಾಮುಖಿಯಾಗಿದೆ.

ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡಿರುವ ವೈರಲ್ ವಿಡಿಯೋದಲ್ಲಿ, ಶಾಂತವಾಗಿ ರಸ್ತೆ ದಾಟುತ್ತಿದ್ದ ಆನೆಗಳಿಗೆ ಕೀಟಲೆ ಮಾಡುತ್ತಿರುವುದು ಕಾಣಬಹುದು. ಇದರಿಂದ ರೊಚ್ಚಿಗೆದ್ದ ಕಾಡಾನೆಯೊಂದು ಯುವಕರ ಗುಂಪನ್ನು ಹಿಂಬಾಲಿಸಿದೆ. ಈ ವೇಳೆ ಆಯಾತಪ್ಪಿ ಕೆಳಗೆ ಬಿದ್ದ ಯುವಕನನ್ನು ಕಾಡಾನೆ ತುಳಿದು ಹಾಕಿದೆ.