LATEST NEWS
ದಿನಕ್ಕೊಂದು ಕಥೆ- ನ್ಯಾಯದ ಹೋರಾಟ
ನ್ಯಾಯದ ಹೋರಾಟ
ಬೆಳಗಿನ ಜಾವ ಸೂರ್ಯ ಏಳೋಕೆ ಮುಂಚೆ ಒಂದಷ್ಟು ಓಡುವ ಅಭ್ಯಾಸ ನನ್ನದು. ದಿನಕ್ಕೊಂದು ಹಾದಿ ಹಿಡಿದು ಸುಮ್ಮನೆ ಹೋಗುತ್ತೇನೆ. ದಿಕ್ಕುಗಳ ಅರಿವಿಲ್ಲ ತಿರುಗಿ ತಲುಪಬೇಕಾದದ್ದು ಮಾತ್ರ ಎಲ್ಲಿಗೆ ಅಂತ ತಿಳಿದಿದೆ .ಆ ದಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಗಿದಾಗ ಅಲ್ಲೊಂದು ಸಣ್ಣ ಗುಂಪು ಫಲಕಗಳನ್ನು ಹಿಡಿದು ಧಿಕ್ಕಾರ ಕೂಗುತ್ತಿತ್ತು. ಇಷ್ಟು ಮುಂಜಾನೆ ಯಾರೋ ?ಯಾಕೋ ಗೊತ್ತಿಲ್ಲ ?.ತುಂಬಾ ಜರೂರತ್ತು ಇತ್ತು ಅಂತ ಕಾಣುತ್ತದೆ !.
ಆದರೂ ಕುತೂಹಲದಿಂದ ಮಾತಿಗಿಳಿದೆ .ಅಲ್ಲಿರುವವರ ಪರವಾಗಿ ಎದ್ದುನಿಂತು ಸ್ವರ ಸಂಪಾದಿಸಿ ಒಬ್ಬ ಮಾತಾಡಿದ. “ನೋಡಿ ಮನುಷ್ಯ ಸರ್ ನಿಮ್ಮ ಅಭಿವೃದ್ಧಿ ಬಗ್ಗೆ ನಮಗೆ ತಕರಾರಿಲ್ಲ .ನಾವು ಅದರ ನಡುವಿನಿಂದಲೇ ಸಾಗಿ ಇಲ್ಲಿಗೆ ಬಂದಿದ್ದೇವೆ .ನಮ್ಮದು ಭೇದಭಾವವಿಲ್ಲದ ಪಂಗಡ. ಹಲವು ಊರಿನವರು ಒಂದಾಗಿದ್ದೇವೆ.
ನಮ್ಮ ಬದುಕಿಗೆ ಇದ್ದ ಕೆಲವು ಮರಗಳು ,ಒಂದೆರಡು ಮಹಲುಗಳನ್ನು ನೀವು ಕಡಿದು ರಸ್ತೆಯೋ ,ಮನೆಯೋ, ಮಾಡಿದ್ದೀರಾ .ನಾವೆಲ್ಲಿಗೆ ಸಾಗಬೇಕು. ಯಾರನ್ನಾದರೂ ಬೀದಿಗೆ ತಂದು ಅಭಿವೃದ್ಧಿ ಮಾಡೋದೇನಿದೆ?. ದೆವ್ವಗಳಾದ ನಮಗೂ ಒಂದು ಬದುಕಿಲ್ಲವೇ?. ಅದಲ್ಲದೆ ಮೊದಲಿನ ಹಾಗೆ ನಮಗೆ ಈಗ ಯಾರು ಗೌರವ ಕೊಡುತ್ತಿಲ್ಲ . ಭಯಪಡುತ್ತಿಲ್ಲ.ನಿಮ್ಮ ಚಲನಚಿತ್ರ ,ಧಾರವಾಹಿಯಲ್ಲಿ ನಿಮಗಿಷ್ಟವಾದ ಹಾಗೆ ಚಿತ್ರಿಸಿದ್ದೀರಿ .ನಮ್ಮಲ್ಲೊಂದು ಮಾತು ಕೇಳಿಲ್ಲ. ನಾವು ಎದುರು ಬಂದರೂ ಯಾರೂ ನಂಬುತ್ತಿಲ್ಲ.
ಇಷ್ಟು ದಿನ ಸಹಿಸಿ ಈಗ ಅಸಹನೆಯ ಕಟ್ಟೆ ಒಡೆದಿದೆ. ಪರಿಹಾರ ಸಿಗದೇ ಹೋಗೋದಿಲ್ಲ .ಇನ್ನು ಇರೋದು ಕೆಲವೇ ಕ್ಷಣ .ಮತ್ತೆ ಬಿಸಿಲಲ್ಲಿ ಕಾಯೋಕೆ ನಮಗಾಗಲ್ಲ.ಸುಸ್ತಾಗುತ್ತೆ ?ರಾತ್ರಿ ಮತ್ತೆ ಬರುತ್ತೇವೆ. ಇಲ್ಲಿರುವವರಿಗೆ ಮೊದಲು ಅರಿವಾಗಬೇಕಲ್ಲಾ. ಯಾಕೆಂದರೆ ಇದೇ ನಮ್ಮ ಮೂಲ ಜಾಗ .ಅದಕ್ಕೆ ಇಲ್ಲಿಂದಲೇ ಹೋರಾಟ ಆರಂಭ.”ನನಗೆ ನಂಬಿಕೆ ಉಂಟಾಗಲಿಲ್ಲ ಆದರೂ ಭಯ ಮೆಲ್ಲನೆ ಇಣುಕಿತು. ಕಾಲಿಗೆ ಬುದ್ಧಿ ಹೇಳಿದ .ಸೂರ್ಯ ಎದ್ದು ಆಕಳಿಕೆ ತೆಗೆಯಲಾರಂಭಿಸಿದ….
ಧೀರಜ್ ಬೆಳ್ಳಾರೆ