Connect with us

    LATEST NEWS

    ದಿನಕ್ಕೊಂದು ಕಥೆ- ಹೀಗೊಬ್ಬ ಅವನು

    ಹೀಗೊಬ್ಬ ಅವನು

    ಸಂಜೆಯ ದಾರಿಯಲ್ಲಿ ಮನೆಯ ನಾಯಿಯೊಂದಿಗೆ ಸುತ್ತೋಕೆ ಹೊರಬಿದ್ದೆ. ತಿರುಗಿ ಬರುವಾಗ ಮಳೆಹನಿಯುತ್ತಿತ್ತು.ಬೀದಿ ದೀಪದ ಬೆಳಕಿನಲ್ಲಿ ಹನಿಗಳು ಮಿನುಗುತ್ತಾ ಇಳಿಯುತ್ತಿದ್ದವು. ಒದ್ದೆಯಾಗುವುದನ್ನು ತಪ್ಪಿಸಲು ಖಾಲಿ ಬಸ್ಸು ನಿಲ್ದಾಣದಲ್ಲಿ ನಿಂತವನಿಗೆ, ಎದುರಿನ ತಗಡಿನ ಶೀಟಿನ ರಾಜಿಯ ಮನೆಯ ಮುಂದೆ ಒಂದಷ್ಟು ನಾಯಿಗಳು ಗುಂಪು ಸೇರಿದ್ದವು ಅದನ್ನು ಗಮನಿಸಿದ.

    ಅವಳು ರೊಟ್ಟಿ ನೀಡುತ್ತಿದ್ದಾಳೆ. ನಾಯಿಗಳು ರೊಟ್ಟಿಯನ್ನು ಬಯಸಿ ನಿಂತಿಲ್ಲ ಅವಳ ಪ್ರೀತಿಯ ಸವರುವಿಕೆಗೆ ಕಾಯುತ್ತಿದ್ದಾವೆ. ಆಕೆ ಐಶ್ವರ್ಯವಂತಳಲ್ಲ. ಕುಡುಕ ಗಂಡ ದಿನದ ದುಡಿಮೆ ಹೊಟ್ಟೆಗಿಳಿಸಬೇಕು. ಹೀಗಿದ್ದರು ಪ್ರೀತಿ ಹಂಚಿದ್ದಾಳೆ.ಹಿಂದೊಮ್ಮೆ ನನ್ನ ಅಮ್ಮನ ಒಂದಷ್ಟು ಸೀರೆಗಳನ್ನು ಅವಳಿಗೆ ನೀಡಿದ್ದಾಗ ಪ್ರೀತಿಯಿಂದ ಸ್ವೀಕರಿಸಿದ್ದಾಳೆ. ನಂತರ ದಿನವೂ ಪ್ರೀತಿಯಿಂದ ನಗುತ್ತಾಳೆ, ಕುಶಲೋಪರಿ ವಿಚಾರಿಸುತ್ತಾಳೆ.

    ನಾನು ಎಲ್ಲಾದ್ರೂ ಹೊರಟಾಗ “ಏನು ಚೆನ್ನಾಗಿ ಕಾಣ್ತಿಯಲ್ಲಾ ನನ್ನಪ್ಪ ,ದೇವರು ಚೆನ್ನಾಗಿಟ್ಟಿರಲಿ” ಎಂದು ತುಂಬು ಮನಸ್ಸಿನಿಂದ ಹಾರೈಸುತ್ತಾಳೆ. ತನಗಿಂತ ಎತ್ತರದಲ್ಲಿರುವವರನ್ನ ಸಂತಸದ ಕಣ್ಣಿನಿಂದ ನೋಡುತ್ತಾಳೆ, ಕೆಳಗಿರುವವರನ್ನು ಪ್ರೀತಿಯಿಂದ ಆತುಕೊಳ್ಳುತ್ತಾಳೆ. ಮನೆಯವರ ಬದುಕು ಕಟ್ಟುತ್ತಿದ್ದಾಳೆ.

    ಅವಳ ನೋವಿನಲ್ಲೂ ಒಂದು ಘನತೆಯಿದೆ. ನಾವು ಹುಚ್ಚು ಪೈಪೋಟಿಯಲ್ಲಿ ಮುಳುಗಿರುವಾಗ ,ನಾವು ಶ್ರೇಷ್ಠರು ಎಂದು ಬಿಂಬಿಸುವಾಗಲ್ಲೆಲ್ಲಾ ಆಕೆ ಕಣ್ಮುಂದೆ ಕಾಣುತ್ತಾಳೆ. ನಾಯಿಪಾಡು ಅರ್ಥೈಸಿಕೊಂಡ ಅವಳೇ ಸರ್ವೋತ್ತಮಳು ಅಲ್ಲವೇ?. ಮಳೆ ನಿಲ್ಲುವ ಸೂಚನೆ ಕಂಡಿತು. ಮನೆಯ ಕಡೆಗೆ ಹೆಜ್ಜೆ ಹಾಕಿದೆವು ನಾನು ಮತ್ತು ನಾಯಿ…

    Share Information
    Advertisement
    Click to comment

    You must be logged in to post a comment Login

    Leave a Reply