LATEST NEWS
ದಿನಕ್ಕೊಂದು ಕಥೆ- ಹೋಲಿಸುವುದೇತಕೆ

ಹೋಲಿಸುವುದೇತಕೆ
ನನ್ನದು ನೇರ ಪ್ರಶ್ನೆ. ಸುತ್ತಿಬಳಸಿ ಮಾತನಾಡುವುದಿಲ್ಲ .ನೀವು ಒಂದು ವಾಕ್ಯ ಪ್ರಯೋಗಿಸುತ್ತಾ ಇರುತ್ತೀರಿ “ಹೂವಿನ ಜೊತೆಗೆ ನಾರು ಸ್ವರ್ಗ ಸೇರುತ್ತೆ” ಅಂತ. ನಾನೇ ಆ ನಾರು. ನನಗಿಲ್ಲಿ ಅರ್ಥವಾಗದ್ದು ನನ್ನನ್ನ ಯಾಕೆ ಹೋಲಿಸುತ್ತಾ ಇದ್ದೀರಿ. ಜೊತೆಗೆ ನನ್ನ ಸಣ್ಣವನಾಗಿ ಮಾಡ್ತಿದ್ದೀರಿ.
ನಾನು ನನ್ನ ಕೆಲಸಗಳನ್ನು ಅತ್ಯುತ್ತಮವಾಗಿ ನಿಭಾಯಿಸುತ್ತೇನೆ. ಇದು ಮಾನವರಾದ ನಿಮಗೆ ಅಭ್ಯಾಸವಾಗಿಬಿಟ್ಟಿದೆ ಅಲ್ವಾ. ನಿಮಗೆ ಇನ್ನೊಂದಿಷ್ಟು ಉದಾಹರಣೆ ಕೊಡುತ್ತೇನೆ .ಹೆಣ್ಣುಮಕ್ಕಳು ಮುಟ್ಟಾದರೆ ಕಾಗೆ ಮುಟ್ಟಿದೆ ಅನ್ನುತ್ತೀರಿ. ಅದ್ಯಾಕೆ ಕಾಗೆ ನಿಕೃಷ್ಟ.

ಅದರ ಗೂಡಲ್ಲಿ ಕದ್ದು ಮೊಟ್ಟೆ ಇಡೋ ಕೋಗಿಲೆ ಶ್ರೇಷ್ಠ ನಿಮಗೆ .ಕಾಗೆ ಸಿಕ್ಕ ಚಿಕ್ಕ ಚೂರನ್ನು ಹಂಚಿ ತಿನ್ನುತ್ತದೆ .ಆದರೂ ಅದಕ್ಕೆ ಬೆಲೆ ಇಲ್ಲ. ಪೌಷ್ಟಿಕವಾದ ಹಾಲು ಕೊಡುವ ಎಮ್ಮೆಗೆ ಬೆಲೆ ಇಲ್ಲ .ಇದೆಲ್ಲವೂ ನನಗೆ ಉತ್ತರ ಸಿಗದ ಪ್ರಶ್ನೆಗಳು .ಶ್ರೇಷ್ಠತೆಯ ವ್ಯಸನದಿಂದ ತುಂಬಾ ಕಳೆದುಕೊಂಡಿಲ್ಲವೆ.
ಮೊದಲು ಹೇರಿಕೊಂಡಿರುವ ಬಟ್ಟೆ ,ವಿಚಾರ, ಶ್ರೇಷ್ಠತೆಯ ವ್ಯಸನ, ಪಾರದರ್ಶಕತೆ ಎಲ್ಲವನ್ನು ಕಳಚಿಟ್ಟು ಸರಳವಾಗಿ ಸಹಜವಾಗಿ ಅಂತಃಕರಣದಿಂದ ಮಗುವಿನ ಸಹಜತೆಯಲ್ಲಿ ಒಮ್ಮೆ ಬದುಕಿ ನೋಡಿ .ಅದರ ರುಚಿ ಅದ್ಭುತ. ಹೋಲಿಸುವುದೇತಕೆ?…
ಧೀರಜ್ ಬೆಳ್ಳಾರೆ