Connect with us

LATEST NEWS

ಮುಂಬೈ – ಹಡಗಿನಲ್ಲಿ ರೇವ್ ಪಾರ್ಟಿ ಸೂಪರ್ ಸ್ಟಾರ್ ಮಗ ಸೇರಿದಂತೆ 10 ಮಂದಿ ವಶಕ್ಕೆ

ಮುಂಬೈ ಅಕ್ಟೋಬರ್ 03: ಮುಂಬೈನ ಕರಾವಳಿಯಲ್ಲಿ ಕ್ರೂಸ್ ಹಡಗೊಂದಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಹಿಂದಿ ಸೂಪರ್ ಸ್ಟಾರ್ ಒಬ್ಬರ ಮಗ ಸೇರಿದಂತೆ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.


ನೂರಾರು ಮಂದಿ ಪ್ರಯಾಣಿಕರಿದ್ದ ಹಡಗು ಗೋವಾ ಕಡೆಗೆ ಸಾಗುವುದಿತ್ತು. ಹಡಗಿನಲ್ಲಿ ಪಾರ್ಟಿ ನಡೆಯುತ್ತಿರುವ ಮಾಹಿತಿಯನ್ನು ಆಧರಿಸಿ ಸಮೀರ್‌ ವಾಂಖೆಡೆ ನೇತೃತ್ವದ ಎನ್‌ಸಿಬಿಯ ತಂಡವು ಹಡಗಿನಲ್ಲಿ ಶೋಧ ಕಾರ್ಯ ನಡೆಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಿವುಡ್‌ ಸೂಪರ್‌ಸ್ಟಾರ್‌ ಒಬ್ಬರ ಮಗನನ್ನೂ ಸಹ ಎನ್‌ಸಿಬಿ ವಶಕ್ಕೆ ಪಡೆದಿರುವ ಸಾಧ್ಯತೆ ಇರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.


ದಾಳಿಯ ವೇಳೆ ಕೊಕೇನ್‌, ಹಶೀಶ್‌ ಹಾಗೂ ಎಂಡಿಎಂಎ ಸೇರಿ ಹಲವು ರೀತಿಯ ನಿಷೇಧಿತ ಮಾದಕ ದ್ರವ್ಯಗಳು ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ವರದಿಗಳು ತಿಳಿಸಿವೆ. ದಾಳಿ ವೇಳೆ ಕೆಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. 8-10 ಮಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಎನ್’ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರು ಹೇಳಿದ್ದಾರೆ. ಇದೇ ವೇಳೆ ಪಾರ್ಟಿಯಲ್ಲಿ ಸೆಲೆಬ್ರಿಟಿಗಳಿದ್ದರೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ತನಿಖೆ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಈ ಹಂತದಲ್ಲಿ ಯಾವುದೇ ರೀತಿಯ ಹೇಳಿಕೆಯನ್ನೂ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.