Connect with us

LATEST NEWS

ದಿನಕ್ಕೊಂದು ಕಥೆ- ತುಂಡು ಕಾಗದ

ತುಂಡು ಕಾಗದ

ಮಳೆಯೊಂದು ಹನಿಗಳ ಹೊತ್ತು ಮರ,ಗಿಡ ,ಹುಲ್ಲು, ಬಳ್ಳಿ ,ಮನೆಗಳ ಮೇಲೆ ಸುರಿದು ಮಣ್ಣ ಮುತ್ತಿಕ್ಕುವ ಗಳಿಗೆ ಸನ್ನಿಹಿತವಾಗುವ ಸೂಚನೆ ನೀಡಲು ಡಂಗುರದವ ಕಪ್ಪು ಮೋಡಗಳೊಂದಿಗೆ ಬಂದು ಅಲ್ಲಲ್ಲಿ ಚಿತ್ತಾಕರ್ಷಕ ರೇಖೆ ಮೂಡಿಸಿ ಚಿತ್ತಾರ ಬಿಡಿಸುತ್ತಿದ್ದ ನಭದಲ್ಲಿ .ಅದಕ್ಕೆ ತಾಳ ಹಿಡಿದು ಗುಡುಗು ದನಿಗೂಡಿಸಿದರೆ, ಗಾಳಿ ತರಂಗವನ್ನ ಜನರ ಶ್ರವಣಗಳಿಗೆ ತಲುಪಿಸಲು ಸುಳಿದಾಡುತ್ತಿತ್ತು. ಗಾಳಿಯೊಂದಿಗಿನ ಗುದ್ದಾಟವೋ ,ನೆಲ ಬಿಟ್ಟೇಳುವ ಭಯವೋ ಮರ-ಗಿಡಗಳು ತಲೆಯನ್ನಾಡಿಸುತ್ತಿದ್ದವು.

ಮನೆ ಸೇರುವ ದಾವಂತದಲ್ಲಿರೂ ನನ್ನ ಮುಖಕ್ಕೆ ಹಾಳೆಯೊಂದು ಹಾರಿಬಂದು ಅಪ್ಪಳಿಸಿತು. ತ್ಯಜಿಸಬೇಕೆನ್ನುವಷ್ಟರಲ್ಲಿ ಹೋ ಬರವಣಿಗೆಯ ಸಾಲುಗಳಿವೆ. ಮುಂದಿಲ್ಲ, ಹಿಂದಿಲ್ಲದ ಮಧ್ಯದ ಸಾಲುಗಳು ಕಬ್ಬಿನ ದಂಡಿನಂತೆ. ರುಚಿಯೋ ಕಹಿಯೋ ತಿಂದು ನೋಡಬೇಕಲ್ಲ .ಮಳೆ‌ ಮನೆ ತಲುಪಿಸುವ ಸೂಚನೆ‌ ನೀಡದ ಕಾರಣ ಸೂರೊಂದಕ್ಕೆ ನುಗ್ಗಿದೆ. ಒಂದೆರಡು ಗೀಚುಗಳೊಂದಿಗೆ
“ಬೇಡಿದಾಗ ಕೈಹಿಡಿಯದವ, ಮುಕ್ತಾಯದ ಗೆರೆಯಲ್ಲಿ ಫಲಕ ಹಿಡಿದಿರೋದ್ಯಾಕೆ?.

“ಬಿಸಿಲ ಝಳಕ್ಕೆ ಬೆವರು ಹರಿದರೂ ನೆರಳಿಲ್ಲದೇ ಬಸವಳಿದಿದ್ದೆ. ನೆರಳಾದಾಗ ಗಾಳಿ ಹಾಕಲು ಬಂದಿರೋದ್ಯಾಕೆ?. ಕತ್ತಲ ದಾರಿಯಲ್ಲಿ ಎಡವಿ ದಾರಿಕಾಣದ ಬೆಳಕಿನ ಜ್ಯೋತಿಯಾಗಿ ನಿಲ್ಲದ ನೀನು ಚಂದಿರನ ಹುಣ್ಣಿಮೆಗೆ ದೀಪವಿಡಿದು ನಗೋದ್ಯಾಕೆ ?.
ಭಾರವೆಲ್ಲ ಪಾದದ ಮೇಲಿರಲು ಗಂಟಲಲ್ಲಿ ನೀರುಬಿಡಲು ಹನಿಯು ಸಿಗದ ಸ್ಥಿತಿಯಲ್ಲಿ ಕಾಲದೂಡಿದವನು, ನೀರೊಳಗೆ ಈಜುತ್ತಿರುವಾಗ ಶರತ್ತಿನೊಂದಿಗೆ ಓಡಿ ಬಂದಿದ್ಯಲ್ಲೋ? ” ಮತ್ತೆ ಮುಂದಿನ ಸಾಲುಗಳು ಅರ್ಥವಾಗಿಲ್ಲ…

“ಮತ್ತೆ ಹಿಂದೆ ಹೋಗೆಂದರೆ ಕ್ಯಾಲೆಂಡರ್ ತಿರುಗಿಸಬಹುದು ಗಡಿಯಾರದ ಮುಳ್ಳನ್ನೂ ಕೂಡ, ಆದರೆ ….?” ಮುಗಿದತ್ತು.
ಅಲ್ಪವಿರಾಮವೋ.. ಪೂರ್ಣವಿರಾಮವೋ.. ಗೊತ್ತಿಲ್ಲ.ಇಲ್ಲಿ ನಾ ಸ್ವೀಕರಿಸಬೇಕಾದ್ದೇನು?ವೈರಾಗ್ಯವೋ,ಚೈತನ್ಯವೋ.. ಮಳೆಯ ಹನಿಗಳು ಮೈಗೆ ಮುತ್ತಿಕ್ಕಿ ಪುಳಕಿತಗೊಳಿಸಿದರೆ, ನೋವಿನಿಂದ ಭೂಗರ್ಭ ಸೀಳಿ ಮತ್ತೆ ಭೂಮಿಗುರುಳಿದ ಮರ
ಭಯಗೊಳ್ಳುವಂತೆ ಮಾಡಿತು ….

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *