LATEST NEWS
ಸೈನೈಡ್ ಮೋಹನ್ ನ 17 ನೇ ಕೊಲೆ ಆರೋಪ ಸಾಭೀತು
ಸೈನೈಡ್ ಮೋಹನ್ ನ 17 ನೇ ಕೊಲೆ ಆರೋಪ ಸಾಭೀತು
ಮಂಗಳೂರು ಜುಲೈ 12: ಇಡೀ ರಾಜ್ಯವನ್ನೆ ಬೆಚ್ಚಿ ಬಿಳಿಸಿದ್ದ ಸೈನೈಡ್ ಕಿಲ್ಲರ್ ಮೋಹನ್ ನ 17 ನೇ ಯುವತಿಯ ಕೊಲೆ ಆರೋಪ ನ್ಯಾಯಾಲಯದಲ್ಲಿ ಸಾಭೀತಾಗಿದ್ದು, ಜುಲೈ 18ಕ್ಕೆ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.
ಕಾಸರಗೋಡು ಪೈವಳಿಕೆ ಗ್ರಾಮದ 26 ವರ್ಷದ ಯುವತಿಯ ಕೊಲೆ ಪ್ರಕರಣ ಇದಾಗಿದ್ದು 2006ರ ಜೂನ್ 21 ರಂದು ಮಡಿಕೇರಿಯ ಲಾಡ್ಜೊಂದರಲ್ಲಿ ಯುವತಿಯ ಅತ್ಯಾಚಾರ ಗೈದು ಕೊಲೆ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಸೈನೈಡ್ ಮೋಹನ್ ತನ್ನ ಹೆಸರು ಸುಧಾಕರ್ ಹಾಗೂ ತಾನು ವಿಮಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಯುವತಿಯಲ್ಲಿ ಸುಳ್ಳು ಹೇಳಿ ವಿವಾಹಕ್ಕೆ ಗಂಡು ನೋಡುವ ಉದ್ದೇಶದಿಂದ ಮಂಗಳೂರಿಗೆ ಅತ್ತೆಯೊಂದಿಗೆ ಬಂದಿದ್ದ ಯುವತಿಯನ್ನು ಮಡಿಕೇರಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ.
ಸ್ಟೇಟ್ ಬ್ಯಾಂಕ್ ನಲ್ಲಿ ಆಕೆಯೊಂದಿಗೆ ಬಸ್ ಹತ್ತಿ ಹೋದ ಬಳಿಕ ಅತ್ತೆಗೆ ಅವರು ಎಲ್ಲಿ ಹೋಗಿದ್ದಾರೆಂಬ ಮಾಹಿತಿ ಇರಲಿಲ್ಲ. 2009ರ ಅಕ್ಟೋಬರ್ 21ರಂದು ಬಂಟ್ವಾಳ ದಲ್ಲಿ ಮೋಹನ್ ಬಂಧನವಾದ ಬಳಿಕವೇ ಈ ಯುವತಿಯ ಕೊಲೆ ಪ್ರಕರಣ ಬಯಲಿಗೆ ಬಂದಿತ್ತು. ಮಡಿಕೇರಿಯಲ್ಲಿ ಕಾಸರಗೋಡಿನ ಯುವತಿಯನ್ನು ಸೈನೈಡ್ ತಿನ್ನಿಸಿ ತಾನೇ ಕೊಲೆ ಮಾಡಿರುವುದಾಗಿ ಮೋಹನ್ ಪೊಲೀಸರ ಮುಂದೆ ಒಪ್ಪಿದ್ದ.
ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಮೋಹನ್ ಕುಮಾರ್ ನನ್ನು ಯುವತಿಯ ಅತ್ತೆ ಗುರುತು ಪತ್ತೆ ಹಚ್ಚಿದ್ದರು. ಈ ಸಂದರ್ಭ ಅತ್ತೆ ಮೋಹನ್ ಗೆ ಹೊಡೆಯಲು ಬಂದಿದ್ದು, ಈ ಸಾಕ್ಷಿಯನ್ನು ತನಿಖೆಗೆ ಬಳಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ 41 ಸಾಕ್ಷಿ, 50 ದಾಖಲೆ ಹಾಗೂ 42 ಸೊತ್ತುಗಳನ್ನು ಪರಿಶೀಲನೆ ನಡೆಸಲಾಗಿತ್ತು. ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿತ್ತು. ಪ್ರಸ್ತುತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಮೋಹನ್ ಕುಮಾರ್ ನನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಯಿತು.
ನ್ಯಾಯಾಧೀಶೆ ಸೈಯಿದುನ್ನೀಸಾ ಶಿಕ್ಷೆ ಪ್ರಮಾಣದ ತೀರ್ಪನ್ನು ಜುಲೈ.18 ರಂದು ಕಾಯ್ದಿರಿಸಿದ್ದಾರೆ.ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಒ.ಎಂ.ಕ್ರಾಸ್ತಾ ವಾದಿಸಿದ್ದರು.