KARNATAKA
ಚೈತ್ರಾ ಹೆಸರಿನ ಜೊತೆ ಕುಂದಾಪುರ ಬಳಸದಂತೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ
ಬೆಂಗಳೂರು ಸೆಪ್ಟೆಂಬರ್ 23: ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ವಂಚನೆ ಮಾಡಿದ ಹಿಂದೂ ಕಾರ್ಯಕರ್ತೆ ಚೈತ್ರಾ ಹೆಸರಿನ ಮುಂದೆ ಇರುವ ಕುಂದಾಪುರ ಪದವನ್ನು ಬಳಸದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಿ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಶನಿವಾರ ಏಕಪಕ್ಷೀಯ ಮಧ್ಯಂತರ ಆದೇಶ ಮಾಡಿದೆ.
ಹಿಂದೂ ಪೈರ್ ಬ್ರ್ಯಾಂಡ್ ನಾಯಕಿ ಚೈತ್ರಾ ಬಿಜೆಪಿ ಟಿಕೆಟ್ ನೀಡುವುದಾಗಿ ಉದ್ಯಮಿಯೊಬ್ಬರಿಗೆ ಕೋಟಿಗಟ್ಟಲೆ ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದು, ಆಕೆಯ ಹೆಸರಿನ ಮುಂದೆ ಕುಂದಾಪುರ ಎಂಬ ಊರಿನ ಹೆಸರಿದೆ. ಈ ಹಿನ್ನಲೆ ಚೈತ್ರಾ ಸಂಬಂಧಿಸಿದ ಸುದ್ದಿಗಳನ್ನು ಮಾಡುವಾಗ ಕುಂದಾಪುರ ಪದ ಬಳಸದಂತೆ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಬೆಂಗಳೂರಿನ ಬಸವನಗುಡಿಯಲ್ಲಿ “ಕಾಫಿ ಶಾಪ್” ಹೋಟೆಲ್ ಮಾಲೀಕ ಕುಂದಾಪುರ ಮೂಲದ ಗಣೇಶ್ ಶೆಟ್ಟಿ ಕೇಸ್ ಹಾಕಿದ್ದರು.
ಇದೀಗ ಮೂಲ ದಾವೆಯ ವಿಚಾರಣೆಯನ್ನು ಬೆಂಗಳೂರಿನ 7ನೇ ಹೆಚ್ಚುವರಿ ಸಿಟಿ ಸಿವಿಲ್ ದಲ್ಲಿ ವಿಚಾರಣೆ ಬಂದಿದೆ. ಇದೀಗ ಸುದ್ದಿ ವಾಹಿನಿ, ಮಾಧ್ಯಮದಲ್ಲಿ ಕುಂದಾಪುರ ಹೆಸರು ಉಲ್ಲೇಖ ಮತ್ತು ಪ್ಯಾನಲ್ ಚರ್ಚೆ ನಡೆಸುವುದಕ್ಕೆ ಮುಂದಿನ ಆದೇಶದವರೆಗೆ ತಾತ್ಕಾಲಿಕ ನಿರ್ಬಂಧ ಆದೇಶ ಮಾಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.