Connect with us

    DAKSHINA KANNADA

    ಕೊರೊನಾ ಸತ್ಯ ಮಿಥ್ಯಗಳ ಅನಾವರಣ – ಡಾ। ಕೃಷ್ಣ ಪ್ರಕಾಶ

    ಲೇಖಕರು : ಡಾ ಕೃಷ್ಣ ಪ್ರಕಾಶಶಿವಂ ಚಿಕಿತ್ಸಾಲಯ‘ ,ಪುತ್ತೂರು , ಪ್ರೊ ಮತ್ತು ಕಾಯಚಿಕಿತ್ಸಾ ವಿಭಾಗ ಮುಖ್ಯಸ್ಥರು, ಕೆ. ವಿ.ಜಿ. ಆಯುರ್ವೇದ ಕಾಲೇಜು, ಸುಳ್ಯ    

                            

    ಸಮಾಜ ಹಾಗು ರಾಷ್ಟ್ರಪರ ಅತ್ಯಂತ ನೈಜ  ಕಾಳಜಿಯುಳ್ಳ ಕೇಂದ್ರ ಸರಕಾರವಾಗಿದ್ದರೂ ಅಜ್ಞಾನದಿಂದಾಗಿ ಕೊರೋನಾ ವಿರುದ್ಧ ತೆಗೆದುಕೊಂಡ ಪ್ರತೀ ನಿರ್ಣಯಗಳು ಮತ್ತು  ಹೆಜ್ಜೆಗಳು ತಪ್ಪಾಗಿದೆ ಎಂದು ಬರೆಯಲು ದುಃಖವಾಗುತ್ತಿದೆ.

    ಕಳೆದ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಿರುವ ಶಬ್ದಗಳಾದ ಲಾಕ್  ಡೌನ್,  ಸೀಲ್ ಡೌನ್ , ಕ್ವಾರಂಟೈನ್, ಮಾಸ್ಕ್ , ಸ್ಯಾನಿಟೈಸರ್, ಪಾಸಿಟಿವ್, ನೆಗೆಟಿವ್ ಇತ್ಯಾದಿಗಳು “ಹುಚ್ಚಾಟ” ವೆನಿಸುತ್ತಿದ್ದು , ಎಲ್ಲ ಕ್ಷೇತ್ರಗಳಿಗೂ ಇದರಿಂದಾದ ಹಾನಿಯ ಅಪಾರ.

    ಕಳೆದ ಇಪ್ಪತ್ತೇಳು  ವರ್ಷಗಳ ಚಿಕಿತ್ಸಾನುಭವ ಮತ್ತು ಇಪ್ಪತ್ತೆರಡು  ವರ್ಷಕ್ಕೂ ಹೆಚ್ಚಿನ ಅಧ್ಯಾಪನದ (ಆಯುರ್ವೇದ ಕಾಲೇಜಿನಲ್ಲಿ ) ಅನುಭವದ ಆಧಾರದಲ್ಲಿ ತಡವಾಗಿಯಾದರೂ ಅನಿವಾರ್ಯವೆನಿಸಿದ್ದರಿಂದ ಕೆಲವು ಕಟು ಸತ್ಯವನ್ನು ಮುಂದಿಡುತ್ತಿದ್ದೇನೆ. ಈ ನನ್ನ ಪ್ರಯತ್ನವು ಪ್ರವಾಹದ ವಿರುದ್ಧ ಈಜಲು ಹೊರಟಂತಾಗಬಹುದೆಂಬ ಶಂಕೆಯೂ ಇದೆ.

    ಮಾರ್ಚ್ ಕೊನೆಯ ವಾರದಲ್ಲಿ ಗಮನಕ್ಕೆ ಬಂದ ಲಕ್ಷಣಾನುಸಾರ ಕೊರೋನಾ ಎಂಬುದು ನಮ್ಮ ದೇಶದ ಮಟ್ಟಿಗೆ ತೀರಾ ಸಾಮಾನ್ಯ ಜ್ವರವೆಂದು ನಿರ್ಣಯಕ್ಕೆ ಬಂದೆ. ಈ ಸರಳವಾದ ಸತ್ಯವನ್ನು ಅರ್ಥಾತ್ ಸುಲಭವಾಗಿ ರೋಗ ನಿರ್ಣಯಿಸಿ ಸುಲಭ ಚಿಕಿತ್ಸೆ ಮೂಲಕ ನಿವಾರಿಸಬಹುದೆಂದು ಸಂದರ್ಭ ಸಿಕ್ಕಿದಾಗಲೆಲ್ಲ ಆನ್ಲೈನ್ ಕ್ಲಾಸುಗಳಲ್ಲಿ ಮತ್ತು ವೆಬಿನಾರ್ ಗಳಲ್ಲಿ ಹೇಳುತ್ತಲೇ ಬಂದೆ. ಈ ನನ್ನ ನಿಲುವು ಮತ್ತಷ್ಟು ಬಲಗೊಂಡಿದೆ ವಿನಃ ಇಂದಿಗೂ ಯಾವುದೇ ವ್ಯತ್ಯಾಸವಾಗಿಲ್ಲ. ಏಪ್ರಿಲ್ ಮೊದಲ ವಾರದಿಂದ  ಇಂದಿನವರೆಗೂ ಸೂಕ್ಷ್ಮವಾಗಿ ಗಮನಿಸಿದಂತೆ ಒಂದು ನಗ್ನ ಸತ್ಯವನ್ನು  ಮಹಾಜನತೆ ಒಪ್ಪಿಕೊಳ್ಳಬಹುದು ನಂಬಿದ್ದೇನೆ.  ಅದೇನೆಂದರೆ ಪ್ರಾರಂಭದಲ್ಲಿ ಸಾವಿನ ಸಂಖ್ಯೆಗಿಂತಲೂ ನಾಲ್ಕು ಪಟ್ಟು ಹೆಚ್ಚು  ಗುಣಮುಖರಾದವರು ಇರುತ್ತಿದ್ದರು. ಈ ಸಂಖ್ಯೆ ಬೆಳೆಯುತ್ತಾ ಹೋಗಿ ಸಾವಿನ ಹತ್ತು ಪಟ್ಟು , ಈಗ ಇಪ್ಪತ್ತು ಪಟ್ಟಿಗಿಂತಲೂ ಹೆಚ್ಚಿನ ರೋಗಿಗಳು ಗುಣಮುಖರಾಗುತ್ತಿದ್ದಾರೆ. ಅರ್ಥಾತ್ ಮೇಲೆ ಹೇಳಿದಂತೆ ಇದು ಸುಲಭವಾಗಿ ವಾಸಿಯಾಗುವ ರೋಗವೆನ್ನುವುದು ಸ್ಪಷ್ಟವಾಯಿತು. ಮಾತ್ರವಲ್ಲ ಕೊರೊನಾದಿಂದ ವಾಸಿಯಾದವರೆಲ್ಲರೂ ಅನ್ಯ ಜ್ವರಕ್ಕಿರುವ ಔಷಧದಿಂದ ಎನ್ನುವುದೂ ಅಷ್ಟೇ ಸತ್ಯವಾಗಿದೆ. ಈ ಕಾರಣದಿಂದ ಕೊರೊನಾಕ್ಕೆ ಹೆದರಿ ಸರಕಾರ ತೆಗೆದುಕೊಂಡ ಮೇಲೆ ಹೇಳಿದ ಕ್ರಮಗಳನ್ನು ಶುದ್ಧ ಮೂರ್ಖತನವೆನ್ನಬೇಕಾಗುತ್ತದೆ.

    ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಡವಿದ್ದೆಲ್ಲಿ ?

    ಕೊರೊನಾಕ್ಕೆ ಸಂಬಂಧಿಸಿದಂತೆ ರೋಗದ ನಿರ್ಣಯ ಹಾಗೂ ಚಿಕಿತ್ಸೆಯಲ್ಲಿ ( Diagnosis & treatment ) ನಿಖರವಾದ ಜ್ಞಾನವಿರದವರನ್ನು ಪೂರ್ಣವಾಗಿ ನಂಬಿದ್ದು ದೊಡ್ಡ ದುರಂತವೆಂದೇ(Big blunder) ನನ್ನ ಖಚಿತ ಅಭಿಪ್ರಾಯ. ಕಳೆದ ಜುಲೈ ಒಂದರಂದು (ವೈದ್ಯರ ದಿನಾಚರಣೆ) ಕರ್ನಾಟಕದ ಪ್ರಮುಖ ದಿನ ಪತ್ರಿಕೆಯ ಒಳ ಪುಟದಲ್ಲಿ ತಜ್ಞ ವೈದ್ಯರೊಬ್ಬರ ಲೇಖನ ಪ್ರಕಟವಾಗಿತ್ತು. ಈ ಆಧುನಿಕ ತಜ್ಞ ವೈದ್ಯರ ಲೇಖನದ ಭಾಗವನ್ನು ಇಲ್ಲಿ ಸಮರ್ಥನೆಗಾಗಿ ಕೊಡುತ್ತಿದ್ದೇನೆ. “ನಾವಿನ್ನೂ ಈ ವೈರಸ್ ನ ಗುಣಗಳ  ಬಗ್ಗೆ ಹಾಗೂ ಅದನ್ನು ಸರಿಯಾದ ಮಾರ್ಗದಲ್ಲಿ ಎದುರಿಸುವುದು ಹೇಗೆ ಎನ್ನುವುದನ್ನು ಕಲಿಯುತ್ತಲೇ ಇದ್ದೇವೆ.” ಅಂದರೆ ಸರಕಾರವು ಒಂದು ಬಲಿಷ್ಠವಾದ ,ಬೃಹತ್ ಗಾತ್ರದ, ಬಹುಪಯೋಗಿ ಅಣೆಕಟ್ಟಿನ ನಿರ್ಮಾಣಕ್ಕಾಗಿ ಕಲಿಯುತ್ತಿರುವ ಸಾಮಾನ್ಯ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನ ಅಭಿಪ್ರಾಯವನ್ನು ಹಿಂದು ಮುಂದು ನೋಡದೆ ಒಪ್ಪಿ, ಅಪ್ಪಿ,ತಪ್ಪಾಗಿ ಪಾಲಿಸಿದೆ ಎಂದೇ ತಿಳಿಯಬೇಕಾಗುತ್ತದೆ. ಸರಕಾರದ ಪರಿಸ್ಥಿತಿಯು ಸಂಸ್ಕೃತದ ಪ್ರಸಿದ್ಧ ವಾಕ್ಯದಂತೆ “ಕುರುಡನಿಂದ ತೋರಿಸಲಾದ ದಾರಿಯಲ್ಲಿ ಸಾಗುತ್ತಿರುವ ಕುರುಡನಂತಾಗಿದೆ” ಎಂದು ಕಳೆದ ನಾಲ್ಕು ತಿಂಗಳುಗಳಿಂದ ಪದೇ ಪದೇ ಅನ್ನಿಸುತ್ತಿದೆ “ಅಂಧೇನೈವ ನೀಯಮಾನಾ ಯಥಾಂಧಾಃ”.

    ರೋಗದ ಪತ್ತೆಗೆ ಸಂಬಂಧಿಸಿದ ತಪ್ಪುನಡೆ :

    ಯಾವುದೇ ವೈದ್ಯ ಪದ್ಧತಿಯು ರೋಗ ನಿರ್ಣಯಕ್ಕೆ ಪ್ರಧಾನವಾಗಿ ಉಪಕರಣಗಳು ಮತ್ತು ಪ್ರಯೋಗಾಲಯದಲ್ಲಿ ನಡೆಯುವ ಗಣಿತ, ಯಂತ್ರ, ತಂತ್ರಜ್ಞಾನಾಧಾರಿತ ವರದಿಯನ್ನು (Laboratory report)ಅವಲಂಬಿಸಿದೆಯೋ ಆ ವೈದ್ಯಕೀಯ ಪದ್ಧತಿ ಅಥವಾ ವೈದ್ಯರು ಸೋಲುತ್ತಾರೆಂಬುದು ನಿಸ್ಸಂಶಯ. ಈ ತಂತ್ರಜ್ಞಾನಾಧಾರಿತ ವರದಿಗಳಲ್ಲಿ ಕೊರತೆ ಮತ್ತು  ಲೋಪದೋಷಗಳು ಇರುವುದರಿಂದ ವೈಜ್ಞಾನಿಕವೆಂದುಕೊಂಡ (?)ಆಧುನಿಕ ತಜ್ಞರು ದಾರಿ ತಪ್ಪಿದ್ದರಲ್ಲಿ (Misguided)ಸಂಶಯವಿಲ್ಲ.ಈ ಕಾರಣದಿಂದಲೇ ಈಗ ಕಂಡು ಬರುವ ಪಾಸಿಟಿವ್, ನೆಗೆಟಿವ್ ವರದಿಗಳು ಹಾಸ್ಯಾಸ್ಪದವಾಗುತ್ತಿರುವುದು ನನಗೇನೂ ಆಶ್ಚರ್ಯ ತಂದಿಲ್ಲ. ಮುಂದಿನ ದಿನಗಳಲ್ಲಿ ಕೊರೋನಾ ರೋಗ ಪತ್ತೆಗೆ ಈಗ ಬಳಸುತ್ತಿರುವ ಪರೀಕ್ಷಾ ವಿಧಾನವು ವಿಶ್ವಾಸಾರ್ಹನತೆಯನ್ನು ಕಳೆದುಕೊಂಡು ಕಸದ ಬುಟ್ಟಿ ಸೇರಿದರೂ ಆಶ್ಚರ್ಯವಿಲ್ಲ.

    ಆಯುರ್ವೇದದಲ್ಲಿ ಪ್ರಯೋಗಾಲಯದ ವರದಿಗಳಿಗೆ ಸ್ಥಾನವೇ ಇಲ್ಲ. ಅಲ್ಲದೆ ಅಂಕೆ ಸಂಖ್ಯೆಗಳಿಗೂ ಮಹತ್ವವಿಲ್ಲ. ರೋಗ ನಿರ್ಣಯ ಹಾಗೂ ಸಾಧ್ಯಾಸಾಧ್ಯತೆಗಳು (Prognosis) ಸಂಪೂರ್ಣವಾಗಿ ಲಕ್ಷಣವನ್ನೇ (Signs and symptoms)ಅವಲಂಬಿಸಿದೆ. ಲಕ್ಷಣ ಆಧಾರಿತ ಮಾನದಂಡವು(Diagnostic criteria) ಎಂದಿಗೂ ಅಪವಾದ ಅಥವಾ ಲೋಪದೋಷರಹಿತವಾಗಿದೆಯೆಂದು ಸಾವಿರಾರು ವರ್ಷಗಳಿಂದ ಇಂದಿಗೂ ಪದೇ ಪದೇ ಸಾಬೀತಾಗುತ್ತಲೇ ಇದೆ.

    ” ಲೈಂಗಿಕೀ ತು ನ ಸರ್ವಥಾ ವ್ಯಭಿಚರತಿ “- ಶ್ರೀಕಂಠದತ್ತ

    ಆಧುನಿಕ ವೈದ್ಯಕೀಯ ಪದ್ಧತಿಯ ಶಸ್ತ್ರಚಿಕಿತ್ಸಾ (Surgery) ವಿಭಾಗವು ಅದ್ಭುತ ಪ್ರಗತಿ ಮತ್ತು ಸಾಧನೆಯನ್ನು ಮಾಡಿದ್ದು ಈ ಕಾರಣದಿಂದ ಅತ್ಯಂತ ಗೌರವಾದರಗಳಿಗೆ ಯೋಗ್ಯವಾಗಿದೆ. ಆದರೆ ಔಷಧ ಚಿಕಿತ್ಸಾ ವಿಭಾಗವು ( Medicinal treatment ) ಬಹಳ ಹಿಂದೆ ಬಿದ್ದಿದೆ ಎನ್ನುವುದು ಸ್ಪಷ್ಟ. ಅಲ್ಲದೆ ರೋಗದ ಲಕ್ಷಣಗಳ ಪತ್ತೆ ಮತ್ತು ಕ್ರೋಡೀಕರಣವು ಸಾಕಷ್ಟು ಆಗಿಲ್ಲವೆಂದೇ ನನ್ನ ಅನಿಸಿಕೆ. ಉದಾಹರಣೆಗೆ ಕೊರೋನಾ ಒಳಗೊಂಡಂತೆ ಯಾವುದೇ ಜ್ವರದ ರೋಗಿಯಲ್ಲಿ ಬಾಯಿರುಚಿಯು ಸರಿಯಿಲ್ಲದಿದ್ದರೆ (ಹೆಚ್ಚಿನ ಮೈ ಬಿಸಿ ಇಲ್ಲದಿದ್ದರೂ, ಇದ್ದರೂ) ಆತನಿಗೆ ಜ್ವರ ಬಿಟ್ಟಿಲ್ಲವೆಂದೇ ಅರ್ಥವೆಂದು ಮಾರ್ಚ್‌ನಲ್ಲಿ (ಕೊರೋನಾ ಪ್ರಾರಂಭದ ಸಮಯ) ಒಂದು ವೆಬಿನಾರ್ ನಲ್ಲಿ ಹೇಳಿದ್ದೆ. ಸುಮಾರು ಒಂದು ತಿಂಗಳ ನಂತರ ಅಮೇರಿಕಾದ ವೈದ್ಯ ವಿಜ್ಞಾನಿಗಳಿಗೆ ಜ್ಞಾನೋದಯವಾಗಿ ಬಾಯಿರುಚಿ ಇಲ್ಲದಿರುವುದನ್ನು ಕೊರೋನಾಕ್ಕೆ ಸಂಬಂಧಿಸಿದ ಪತ್ತೆಯಾದ ಹೊಸ ಲಕ್ಷಣವೆಂದು ಪ್ರಕಟಿಸಿದರು. ಇದರ ಆಧಾರದಿಂದ ಆಧುನಿಕ ವೈದ್ಯಕವು ಲಕ್ಷಣವನ್ನು ರೋಗಿಯಿಂದ ಕೇಳಿ ತಿಳಿಯುವಲ್ಲಿ ಅಂದರೆ ಪ್ರಶ್ನೆ ಪರೀಕ್ಷೆಯಲ್ಲಿ (Interrogation)ಎಷ್ಟು ಹಿಂದೆ ಬಿದ್ದಿದೆಯೆನ್ನುವುದು ಸ್ಪಷ್ಟವಾಗುತ್ತದೆ.

    ಆಯುರ್ವೇದ ವೈದ್ಯರುಗಳ ಕರುಣಾಜನಕ ಕಥೆ :

    ಇತ್ತೀಚೆಗಿನ ಕೆಲ ವರ್ಷಗಳ ಅವಲೋಕನ ಹಾಗೂ ಸ್ನಾತಕೋತ್ತರ (M.D) ವಿದ್ಯಾರ್ಥಿಗಳಿಗೆ ಪರೀಕ್ಷಕನಾಗಿದ್ದ ಅನುಭವದ ಆಧಾರದಲ್ಲಿ ಹೇಳುವುದೇನೆಂದರೆ, ಈಗಿನ ಕಾಲೇಜುಗಳಿಂದ ಹೊರ ಬರುತ್ತಿರುವ ಬಹುತೇಕ ಆಯುರ್ವೇದ  ವೈದ್ಯರುಗಳು ಆಯುರ್ವೇದ ಪದವಿ ಹೊಂದಿದ ಆದರೆ ಆಧುನಿಕ ವೈದ್ಯ ಪದ್ಧತಿಯ ಅಂಧ ಅನುಯಾಯಿಗಳಷ್ಟೆ. ಎರಡೂ ವೈದ್ಯ ಪದ್ಧತಿಗಳ ಅರ್ಧಂಬರ್ಧ ಜ್ಞಾನದ ಕಲಬೆರಕೆಯಿಂದಾದ ವಿಚಿತ್ರ ರೀತಿಯ ನಿರುಪಯುಕ್ತ ಸಂಕರ ತಳಿಯಷ್ಟೆ. ಇನ್ನೂ ಸರಳವಾಗಿ ಹೇಳುವುದಾದರೆ ಆಯುರ್ವೇದದ ಹೆಲ್ಮೆಟ್ ಧರಿಸಿದ ಆದರೆ ಅಲೋಪತಿ ಮೆದುಳು(ತಲೆ) ಹೊಂದಿದ ಆಯುರ್ವೇದತ್ವ ಇಲ್ಲದ ಒಂದು ಮಿಶ್ರ ತಳಿಯಾಗಿದೆ. ಪ್ರಧಾನಿಯವರು ಬಹು ನಿರೀಕ್ಷೆಯಿಂದ ಆಯುಷ್ ಇಲಾಖೆಯ ಮೂಲಕ  ಸಂದರ್ಶಿಸಿದ ಆಯುರ್ವೇದ ತಜ್ಞ (?)ರೆಲ್ಲರೂ ಮೇಲೆ ಹೇಳಿದ ಸಂಕರ ತಳಿಗಳು ಮಾತ್ರವಲ್ಲ, ಆಧುನಿಕ ವೈದ್ಯರ ಮೂರನೇ ದರ್ಜೆಯ ತಂಡದಂತೆ ವರ್ತಿಸಿದ್ದಾರೆ ಎಂಬುವುದರಲ್ಲಿ ಸಂಶಯವಿಲ್ಲ. ಹೆಚ್ಚಿನ ಆಧುನಿಕ ವೈದ್ಯರಂತೆ ಆಯುರ್ವೇದ ವೈದ್ಯರು ಕೂಡಾ ರೋಗಿಗಳ ತೊಂದರೆಗಳನ್ನು ರೋಗಿಗಳ ಮಾತಿನಿಂದಲೇ ತಿಳಿಯದೆ(Symptoms/subjective findings) ಅಥವಾ ಹಗುರವಾಗಿ ಸ್ವೀಕರಿಸಿದ್ದರಿಂದ ರೋಗ ಪತ್ತೆಯಲ್ಲಿ ಸೋಲುತ್ತಿರುವುದು ಸ್ಪಷ್ಟ.  ಸಂಕ್ಷಿಪ್ತವಾಗಿ ಹೇಳುವುದಾದರೆ ಆಯುರ್ವೇದದ ವಿಶಿಷ್ಟ ರೋಗಿ ಪರೀಕ್ಷಾ ಪದ್ಧತಿಯಾದ ದರ್ಶನ, ಸ್ಪರ್ಶನ,ಪ್ರಶ್ನೆ ಪರೀಕ್ಷೆಗಳು ಇಂದು ಅಳಿವಿನಂಚಿಗೆ ತಲುಪಿದ್ದು ದೇಶದ ದೌರ್ಭಾಗ್ಯ ವೆನಿಸುತ್ತದೆ. ಅದರಲ್ಲೂ ಮುಖ್ಯವಾಗಿ ಪ್ರಶ್ನೆ ಪರೀಕ್ಷೆಗಾಗಿ ಆಳವಾದ ಶಾಸ್ತ್ರ ಜ್ಞಾನದ (Textual knowledge)ಅಗತ್ಯವಿದೆ.

    ಲಕ್ಷಣಗಳ ಮಹತ್ವ :

    ಸಾಮಾನ್ಯ ಜನತೆಯನ್ನು ಗಮನದಲ್ಲಿಟ್ಟುಕೊಂಡು ಕೊರೋನಾ ಅಥವಾ ಇನ್ನಾವುದೇ ಜ್ವರದ ಜ್ಞಾನಕ್ಕಾಗಿ ನಿರ್ಲಕ್ಷ್ಯಕ್ಕೊಳಗಾಗುವ ಕೆಲವು ಲಕ್ಷಣಗಳನ್ನು ಕೊಡುತ್ತಿದ್ದೇನೆ. ಜ್ವರದ ಜ್ಞಾನವು ಲಕ್ಷಣಗಳಿಂದಲೇ ಆಗುತ್ತದೆ(ಜ್ವರ ಜ್ಞಾನಂ ಚ ಲಕ್ಷಣತಃ – ಶ್ರೀಕಂಠದತ್ತ ).

    ತಲೆ ಭಾರ, ಆಯಾಸ, ಆಹಾರದಲ್ಲಿ ಆಸಕ್ತಿಯಿಲ್ಲದಿರುವಿಕೆ, ಬಾಯಿ ರುಚಿಯು ಸಪ್ಪೆ, ಸಿಹಿ ಅಥವಾ ಕಹಿಯೆನಿಸುವುದು, ಮೈಬಿಸಿ ಇದ್ದರೂ ಇಲ್ಲದಿದ್ದರೂ ರೋಗಿಯಲ್ಲಿ ಜ್ವರ (ಒಳ ಜ್ವರ) ಇದೆಯೆಂದೇ ಅರ್ಥ.

    ಶಿರಸೊ ಗೌರವಂ ಗ್ಲಾನಿಃ ನಾತಿ ಶ್ರದ್ಧಾ ಚ ಭೋಜನೆ

    ಮಾಧುರ್ಯಮಥ ವೈರಸ್ಯಂ ತಿಕ್ತತ್ವಮಥವಾ ಪುನಃ

    ವಕ್ತ್ರಸ್ಯ ಜಾಯತೆ ಯಸ್ಮಾತ್ ಪ್ರವೇಗೇಪಿ ಗತೇ ಸತಿ॥ – ಡಲ್ಹಣ

    ಜ್ವರದ ಮೈಬಿಸಿ ಇಲ್ಲದಿದ್ದರೂ ಪ್ರಾರಂಭದಿಂದಲೇ ಇದ್ದ ತಲೆನೋವು ನಂತರದಲ್ಲೂ ಉಳಿದುಕೊಂಡಿದ್ದರೆ ಜ್ವರ ಬಿಟ್ಟಿಲ್ಲವೆಂದೇ ಅರ್ಥ. ಮಾತ್ರವಲ್ಲದೆ ಜ್ವರ ಪುನಃ ಮರುಕಳಿಸುವ ಸಾಧ್ಯತೆಯೇ ಹೆಚ್ಚೆಂಬುದು ಅನೇಕ ಬಾರಿ ಅನುಭವಕ್ಕೆ  ಬಂದಿದೆ.

    ಜ್ವರ ಮುಕ್ತಸ್ಯ ಯಸ್ಯಾಪಿ ಶಿರೋರುಕ್ ನೈವ ಮುಚ್ಯತೆ

    ಅವಿಮುಕ್ತಃ ಸ ವಿಜ್ಞೇಯಃ ಜ್ವರಃ ಪುನರುಪೈತಿ ತತ್॥- ಯೋಗ ರತ್ನಾಕರ

    ಈ ಲಕ್ಷಣಗಳನ್ನು ಗಮನಿಸುವಾಗ ಮೈಬಿಸಿಯೆಂಬುದು(Abnormal temperature) ಅತ್ಯಗತ್ಯವಾದ ಲಕ್ಷಣವಲ್ಲವೆನ್ನುವುದು ಸ್ಪಷ್ಟವಾಗುತ್ತದೆ. ಈ ನೆಲೆಯಲ್ಲಿ ಕಳೆದ ಇಪ್ಪತ್ತೆಂಟು ವರ್ಷಗಳಿಂದ ಥರ್ಮಾಮೀಟರ್ ನಮ್ಮ ಮಟ್ಟಿಗೆ  ನಿರುಪಯುಕ್ತ ವಸ್ತುವೆಂದು ಹೇಳುತ್ತಲೇ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಈಗ ಕಾಣುತ್ತಿರುವ ಆಕರ್ಷಕ ಥರ್ಮಾಮೀಟರ್ ಗಳು  ಮಕ್ಕಳ ಆಟಿಕೆಯಾಗುವ ಉಜ್ವಲ ಅವಕಾಶವಿದೆ. ಅಲ್ಲದೆ ಗಂಧ(ವಾಸನೆ) ಗ್ರಹಣದ ಶಕ್ತಿ ಕಡಿಮೆಯಾಗುವುದು ಮತ್ತು ಕಣ್ಣು, ಮುಖ್ಯವಾಗಿ ಮೂತ್ರದ ಬಣ್ಣ ಹಳದಿಯಾಗುವುದು ( ಯಾವುದೇ ಆಯುರ್ವೇದದ ಔಷಧ ಸೇವನೆಯಿಂದ ಮೂತ್ರ ಹಳದಿಯಾಗುವುದಿಲ್ಲ) ಕೂಡಾ ಜ್ವರದ ಲಕ್ಷಣವಾಗಿರುವುದು ನೆನಪಲ್ಲಿಡಬೇಕಾದ ಅಂಶವಾಗಿದೆ.

    “ಅರೋಚಕೆ ಗಾತ್ರಸಾದೆ ವೈವಣ್ಯೆ ಅಂಗ ಮಲಾದಿಷು”- ಸುಶ್ರುತ

    “ಗೌರವೆ ಶಿರಸಃ ಶೂಲೆ ವಿಬದ್ದೇಷ್ಟಿಂದ್ರಿಯೇಷು ಚ”- ಚರಕ

    ಮೇಲೆ ಹೇಳಿದ ಹೆಚ್ಚಿನ ಎಲ್ಲಾ ಲಕ್ಷಣಗಳನ್ನು ರೋಗಿಯಲ್ಲಿ ವಿಶ್ವಾಸವಿರಿಸಿ ಪ್ರಶ್ನೆಪರೀಕ್ಷೆಯಿಂದಲೇ ಹೊರತೆಗೆಯಬೇಕಾಗುತ್ತದೆ ಎಂಬುದು ಸದಾ ನೆನಪಲ್ಲಿಡಬೇಕಾದ ಸತ್ಯವಾಗಿದೆ. ಈ ಎಲ್ಲಾ ಅಂಶಗಳಿಂದ ಈಗ ನಿತ್ಯವೂ ಕೇಳಿ ಬರುತ್ತಿರುವ ಪಾಸಿಟಿವ್ , ನೆಗೆಟಿವ್ ಗಳು ನನ್ನ ಮಟ್ಟಿಗೆ ಅರ್ಥಹೀನ ಶಬ್ದಗಳಾಗಿವೆ.

    ಆಧುನಿಕ ವೈದ್ಯಕದ ಭಕ್ತರಿಗೆ ಕಿವಿಮಾತು

    ಇತ್ತೀಚೆಗಿನ ದಿನಗಳಲ್ಲಿ ಕೊರೊನಾಕ್ಕೆ ಸಂಬಂಧಿಸಿದಂತೆ ಆಯುರ್ವೇದ ಚಿಕಿತ್ಸೆಗೆ ಆಧುನಿಕ ವೈದ್ಯರುಗಳು ಒಳಗೊಂಡ ಸಂಸ್ಥೆಗಳು ಅಜ್ಞಾನ, ಸ್ವಾರ್ಥ ಮತ್ತು ಮತ್ಸರದಿಂದ ಅಡೆತಡೆ ನೀಡುತ್ತಿರುವುದನ್ನು ಗಮನಿಸಿದ್ದೇನೆ. ಈ ಕಾರಣದಿಂದ ಅವರಿಗಾಗಿ ಮುಂದಿನ ಕೆಲವು ವಾಕ್ಯಗಳನ್ನು ಬರೆಯಬೇಕಾಗಿ ಬಂದಿದೆ. ಲೇಖನವು ಅತೀ ವಿಸ್ತಾರವಾಗುವ ಭಯದಿಂದ ಅವರ ವಿಜ್ಞಾನದ ಟೊಳ್ಳುತನವನ್ನು ಅತ್ಯಂತ ಸಂಕ್ಷಿಪ್ತವಾಗಿ ಕೊಡುತ್ತಿದ್ದೇನೆ. ಪ್ರಮೇಹ ರೋಗದ ಪತ್ತೆಗೆ ಮೂವತ್ತು ವರ್ಷಗಳ ಹಿಂದೆ ವ್ಯಾಪಕವಾಗಿ ನಡೆಸುತ್ತಿದ್ದ ಸ್ಪಿರಿಟ್ ದೀಪ ಮತ್ತು ನೀಲಿ ದ್ರಾವಕ (Benedict Solution) ಎಲ್ಲಿ ಹೋಯಿತು? ರಕ್ತದಲ್ಲಿನ ಸಿಹಿಯ ಮಟ್ಟದ ಪತ್ತೆಗೆ ನಡೆಸುತ್ತಿದ್ದ ಆಹಾರದ ಮೊದಲು ಮತ್ತು ನಂತರದ ಕಣ್ಣು ಮುಚ್ಚಾಲೆಯಾಟವು ಕಡಮೆಯಾಗಿದೆ. ಕರುಳಿನ ಹುಣ್ಣು(Ulcer) ಮತ್ತು ಕಲ್ಲು (Calculi) ಪತ್ತೆಗೆ ನಡೆಸುತ್ತಿದ್ದ x-ray ಗಳು ಮೂಲೆಗೆ ಬಿದ್ದವೆ. ದಶಕಗಳ ಹಿಂದೆಯೇ ಸ್ಟೆಥಸ್ಕೋಪ್ ಅಮೇರಿಕಾದಲ್ಲಿ ತಾಜ್ಯವಾದರೂ ನಮ್ಮಲ್ಲಿ ಪೂಜ್ಯವಾಗಿದೆ. E.S.R ಮತ್ತು ಕೊಲೆಸ್ಟರಾಲ್‌ನ ಆರೋಗ್ಯವಂತರಲ್ಲಿರಬೇಕಾದ ಮಟ್ಟ (Normal value) ಹಾಸ್ಯಾಸ್ಪದವಾಗಿ ಏರುಪೇರಾಗಿದೆ. ನೂರಾರು ಸೇವಿಸುವ ಔಷಧಿಗಳನ್ನು ಹಾನಿಕಾರಕವೆಂದು ಪ್ರತಿಬಂಧಿಸಿ ತಿಪ್ಪೆಗೆ ಹಾಕಲಾಗಿದೆ. ವೈಜ್ಞಾನಿಕ ಸಂಶೋಧನೆಯೆಂದು ಇಲಿಗಳೊಂದಿಗೆ ನಡೆಸುತ್ತಿದ್ದ ಚೆಲ್ಲಾಟದ ಪ್ರಣಯ ಪ್ರಸಂಗವು ಈಗ ಹಳಸಿದ ಕಥೆಯಾಗಿದೆ. ಆದರೆ ವಿಜ್ಞಾನದ ನಿರುಕ್ತಿ (Definition) ಏನೆಂದು ಕೇಳಿದಾಗ ಅವರ ಉತ್ತರ ಮಾತ್ರ ಬದಲಾಗಲಿಲ್ಲ. ಅದುವೇ ತಡವರಿಕೆ(ಬೆಬ್ಬೆಬ್ಬೆ). ಮೇಲೆ ಹೇಳಿದ ಎಲ್ಲಾ ಉದಾಹರಣೆಗಳೂ ವೈಜ್ಞಾನಿಕವೆಂಬ ಹಣೆಪಟ್ಟಿಯೊಂದಿಗೆ ಬಂದಿದೆ. ವಿಜ್ಞಾನವು ತ್ರಿಕಾಲಾಬಾಧಿತ( ಭೂತ, ವರ್ತಮಾನ ,ಭವಿಷ್ಯದಲ್ಲಿ ಸತ್ಯವೆಂದು ನಿರೂಪಿತವಾಗುತ್ತಿರಬೇಕು) ಸತ್ಯದ ಮೇಲೆ ನಿಂತಿರ ಬೇಕೆಂಬ ಸಾಮಾನ್ಯ ಜ್ಞಾನದ ಅಗತ್ಯತೆ ಅವರಿಗೆ ಅತ್ಯಂತ ಅವಶ್ಯವಾಗಿದೆ. ಕೊನೆಯದಾಗಿ ಹೇಳುವುದಾದರೆ ಈಗ ಕೊರೊನಾದಿಂದ ಗುಣಮುಖರಾದ ರೋಗಿಗಳಿಗೆ ನೀಡಿದ ಔಷಧಿಗಳು ಪ್ರಾಯೋಗಿಕ ಅಧ್ಯಯನ (clinical trials) ನಡೆಸದೇ ನೀಡಿದ ಚಿಕಿತ್ಸೆಯೆಂಬುದು ತಲೆಯಲ್ಲಿದ್ದರೆ ಒಳಿತು. ಈ ನೆಲೆಯಲ್ಲಿ ಇತರ ವೈದ್ಯಕೀಯ ಚಿಕಿತ್ಸೆಯನ್ನು ಪ್ರಶ್ನಿಸುವ  ನೈತಿಕತೆ ಅವರಿಗೆಲ್ಲಿದೆ?  ಯಾವುದೇ ವಿಷಯದಲ್ಲಿನ ಆಳವಾದ ಜ್ಞಾನವೂ ವಿಜ್ಞಾನವೆಂಬುದು ತಮಗೆ ತಿಳಿದಿರುವುದು ಕ್ಷೇಮ.” ವಿಶೇಷ ಜ್ಞಾನಂ ವಿಜ್ಞಾನಮ್”- ಚಕ್ರಪಾಣಿ

    ನೆನಪಲ್ಲಿಡಬೇಕಾದ ವಾಸ್ತವಗಳು:

    * ಜುಲೈ ಒಂಭತ್ತರ ದಿನ ಪತ್ರಿಕೆಗಳಲ್ಲಿ ಪ್ರಕಟವಾದಂತೆ ಕೊರೊನಾ ವೈರಸ್‌ ಗಾಳಿಯಿಂದ ಹರಡುತ್ತದೆ ಎಂಬ ಜಗತ್ತಿನ 240 ವಿಜ್ಞಾನಿಗಳ ಹೇಳಿಕೆಯನ್ನು ಕಷ್ಟಪಟ್ಟು ವಿಶ್ವ ಆರೋಗ್ಯ ಸಂಘಟನೆ (W.H.O) ಒಪ್ಪಿಕೊಂಡಿತು. ಗಾಳಿಯಿಂದ ಹರಡವುದಾದರೆ ಲಾಕ್ ಡೌನ್, ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಗಳ ಬಳಕೆ ಹಾಸ್ಯಾಸ್ಪದ ಹಾಗೂ ಮೂರ್ಖತನದ್ದೆಂದು ಇನ್ನೂ ಸರಕಾರಕ್ಕೆ ಮತ್ತು ಜನರಿಗೆ ಅರ್ಥವಾಗಲಿಲ್ಲ ಎಂಬುದು ಅತ್ಯಂತ ದುಃಖದ ವಿಚಾರ. ಸಮರ್ಥನೆಗಾಗಿ ಒಂದೆರಡು ಉದಾಹರಣೆಗಳನ್ನು ಕೊಡುತ್ತಿದ್ದೇನೆ. ಶ್ರಮಿಕ್ ರೈಲುಗಳ ಮೂಲಕ ದೇಶಾದ್ಯಂತದ 85 ಲಕ್ಷಕ್ಕೂ ಅಧಿಕ ಕಾರ್ಮಿಕರು ಅವರವರ ತಲುಪಿದರು. ಅವರಲ್ಲಿ ಬೆರಳೆಣಿಕೆಯ ಮಂದಿ ಕೊರೊನಾದಿಂದ (ಸಾಮಾನ್ಯ ಜ್ವರ) ಬೆರಳೆಣಿಕೆ ದಿನಗಳ ಕಾಲ ಪೀಡಿತರಾಗಿದ್ದರೇ ವಿನಃ ಒಬ್ಬರೂ ಮೃತಪಟ್ಟಿಲ್ಲ. ಅವರಲ್ಲಿ ಬಹುತೇಕ ಮಂದಿ ಮುಖ್ಯವಾಗಿ ರಾತ್ರಿ ಪ್ರಯಾಣದ ವೇಳೆ ಮಾಸ್ಕ್, ಸಾಮಾಜಿಕ ಅಂತರ ಇತ್ಯಾದಿ ಅತಿರೇಕಗಳನ್ನು ಪಾಲಿಸಲೇ ಇಲ್ಲವೆಂಬುದನ್ನು ನೆನಪಿನಲ್ಲಿಡಬೇಕಾದುದು ಬಹಳ ಮುಖ್ಯ. ಅದೇ ರೀತಿ ಮುಂಬೈನಲ್ಲಿನ ಧಾರಾವಿ ಎಂಬ ಕೊಳಚೆ ಪ್ರದೇಶದಲ್ಲಿ (ಸ್ಲಂ) ಕೂಡಾ ಲಕ್ಷಗಟ್ಟಲೆ ಜನರಿದ್ದರೂ ಕೊರೊನಾದಿಂದ ಸೋಂಕಿತರಾದವರು ಹಾಗು ಮೃತಪಟ್ಟವರು ತೀರಾ ನಗಣ್ಯ. ಇಲ್ಲಿ ಕೂಡಾ ಜನರು ಲಾಕ್ ಡೌನ್ ನಂತಹ ಹುಚ್ಚು ಕ್ರಮಗಳನ್ನು ಸರಿಯಾಗಿ ಪಾಲಿಸಲೇ ಇಲ್ಲ. ಮಾತ್ರವಲ್ಲ ಈ ಹುಚ್ಚಾಟವನ್ನು ಪಾಲಿಸದೇ ಇರುವ ಮೂಲಕ ತಮ್ಮ ದೈನಂದಿನ ಜೀವನವನ್ನು ಕಾಪಾಡಿಕೊಂಡರು. ಮಳೆಗಾಲದಲ್ಲಿ ಜ್ವರ (ಯಾವುದೇ ವೈರಲ್) ಸ್ವಲ್ಪ ಅಧಿಕ ಎನ್ನುವುದು ತೀರಾ ಸಾಮಾನ್ಯವೆಂದು ಅನಕ್ಷರಸ್ಥರೂ ತಿಳಿದಿರುವ ವಿಚಾರ. ಆದರೆ ತಜ್ಞರೆಂದುಕೊಂಡ ಅಂಜುಬುರುಕರು ಮತ್ತು ಅವರನ್ನು ಒಪ್ಪಿಕೊಳ್ಳುವ ಎಲ್ಲಾ ಪಕ್ಷಗಳ ರಾಜಕೀಯದ ಮಂದಿಗಳಿಗೆ ಇನ್ನೂ ಅರ್ಥವಾಗದಿರುವುದು ನಾಚಿಗೇಡು. ಶೇಕಡಾ 51%ಕ್ಕೂ ಹೆಚ್ಚು ಮಂದಿಗೆ ತಗಲಿದ ಕೊರೊನಾದ ಮೂಲವೇ ( ಯಾರಿಂದ ಬಂದುದೆಂಬ) ಪತ್ತೆಯಾಗಲಿಲ್ಲವೆಂದು ವರದಿಯಾಗಿದೆ. ಇದರ ಅರ್ಥವೆಂದರೆ ಈ ವೈರಲ್ ಗಾಳಿಯಿಂದ ಹರಡುವುದೆಂದು ಸ್ಪಷ್ಟವಾಗುತ್ತದೆ. ಮಾಸ್ಕ್ , ಲಾಕ್ ಡೌನ್ ಗಳ ನಿರುಪಯುಕ್ತತೆಯನ್ನು ಅಂಕೆ, ಸಂಖ್ಯೆಗಳ ಮೂಲಕ ದೃಢೀಕರಿಸವುದು ಕಷ್ಟಕರ. ಅದೇ ರೀತಿ  ಸಮರ್ಥನೆಯನ್ನೂ ಸಂಖ್ಯೆಯಲ್ಲಿ ತೋರಿಸುವುದು ಅಸಾಧ್ಯವೆನ್ನುವುದು ನೆನಪಲ್ಲಿರಲಿ.

    * ಪತ್ರಿಕೆಯ ವರದಿಗಳು ಮತ್ತು ನನ್ನ ಇತಿಮಿತಿಯಲ್ಲಿ ಗಮನಕ್ಕೆ ಬಂದ ಕೊರೊನಾ ಸಾವುಗಳ ವಿಶ್ಲೇಷಣೆಯ ಮೇಲಿಂದ ಕೆಲವು ವಾಕ್ಯಗಳನ್ನು ವೈದ್ಯನಾಗಿ ಬರೆಯುವುದು ಅವಶ್ಯವೆನಿಸಿತು. ಶೇಕಡಾ ತೊಂಬತ್ತೊಂಬತ್ತು(99%) ಕೊರೊನಾ ಪೀಡಿತ ಸಾವಿನ ರೋಗಿಗಳ ಜಾತಕ(case history) ಪರಿಶೀಲಿಸಿದಾಗ ಅವರಿಗೆ ಲಿವರ್ ಮತ್ತು ಕಿಡ್ನಿಗಳ ಗಂಭೀರ ರೋಗಗಳು, ಕ್ಯಾನ್ಸರ್, ಹೃದ್ರೋಗ, ಅತ್ಯಂತ ಕಠಿಣ ಸ್ಥಿತಿಗೆ ತಲುಪಿದ ಪ್ರಮೇಹ, ಜನ್ಮಜಾತ ವ್ಯಾಧಿ(ಹದಿನೇಳು ದಿನಗಳ ಮಗು), ಮತ್ತು ನ್ಯುಮೋನಿಯಾದ ಅಸಾಧ್ಯಾವಸ್ಥೆ ಇತ್ತೆಂಬುದು ಸ್ಪಷ್ಟವಾಗಿದೆ. ಆಯುರ್ವೇದದ ಪ್ರಕಾರ ಮೇಲೆ ಹೇಳಿದ ಯಾವುದೇ ರೋಗದ ಕೊನೆಯ ಅವಸ್ಥೆ (incurable condition) ತಲುಪಿದಾಗ ಯಾವುದೇ ಜ್ವರ (ಸೋಂಕು /infection) ಬಂದರೂ ಅದು ಮೃತ್ಯುವಿನಲ್ಲಿ ಕೊನೆಯಾಗುವುದು ನಿಶ್ಚಿತ. ಈ ಕಾರಣದಿಂದಲೇ ಜ್ವರವನ್ನು ಅಂತಕವೆಂದು (ಅಂತ್ಯ ನೀಡುವುದರಿಂದ) ಸಾವಿರಾರು ವರ್ಷಗಳ ಹಿಂದೆಯೇ ಕರೆದಿದ್ದಾರೆ.

    “ಅಂತಕೊ ಹ್ಯೇಶ ಭೂತಾನಾಂ ಜ್ವರ ಇತ್ಯುಪದಿಶ್ಯತೆ ” – ಸುಶ್ರುತ .

    ಕಜಕಿಸ್ಥಾನದಲ್ಲಿರುವ ಚೀನಾದ ರಾಯಭಾರಿಯ ಪ್ರಕಾರ ಕೊರೊನಾಕ್ಕಿಂತ ನ್ಯುಮೋನಿಯಾ ಹೆಚ್ಚು ಅಪಾಯಕಾರಿ ಎಂದು ಹೇಳಿದುದು ಸತ್ಯವೆನಿಸುತ್ತದೆ. ಸತ್ಯವು ಎಲ್ಲಿಂದ ಬಂದರೂ( ಶತ್ರುಗಳಿಂದಾದರೂ) ಸ್ವೀಕರಿಸುವುದು ಉತ್ತಮ( ಅಮಿತ್ರಸ್ಯಾಪಿ ಸದ್ ವೃತ್ತಮ್ – ಚಾಣಕ್ಯನೀತಿ).

    ಆದರೆ ಆಧುನಿಕ ವೈದ್ಯ ಜಗತ್ತು ರೋಗಿಯ ಸಾವಿಗೆ ಕಾರಣವಾದ ಮೇಲೆ ಹೇಳಿದ ಪ್ರಧಾನ ರೋಗದ ಬದಲು ಉಪದ್ರವಕ್ಕೆ (complication/secondary disease) ಸಾವಿನ ಹಣೆಪಟ್ಟಿ (label) ಹಚ್ಚಿದ್ದು ದುರದೃಷ್ಠಕರ. ಇನ್ನೂ ಸರಳವಾಗಿ ಹೇಳುವುದಾದರೆ, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಕ್ರೀಡಾಳುವಿನ ಬದಲು ಅವನು ಬಳಸಿದ ಪಾದರಕ್ಷೆಯನ್ನು ಸನ್ಮಾನಿಸಿದಂತಾಯಿತು ಅಷ್ಟೆ. ನಿತ್ಯವೂ ಸಾವಿನ ಲೆಕ್ಕ ಮತ್ತು ಸೋಂಕಿತರ ಲೆಕ್ಕವನ್ನೇ ರಣಹದ್ದುಗಳಂತೆ ಕಾಯುತ್ತಿದ್ದ ಬೇಜಾವಾಬ್ದಾರಿ ಮಾಧ್ಯಮಗಳು ( TV ಮತ್ತು ಎಲ್ಲಾ ದಿನ ಪತ್ರಿಕೆಗಳು ) ಪೈಪೋಟಿಯಲ್ಲಿ ಉತ್ಪ್ರೇಕ್ಷಿಸಿ ಬರೆಯುತ್ತಿದುದು ಅತ್ಯಂತ ಬೇಸರವೆನಿಸುತ್ತಿತ್ತು. ಈ ರಣಹದ್ದುಗಳು (ಮಾಧ್ಯಮ) ಹೆಣವನ್ನು ಕುಕ್ಕಿ ಕುಕ್ಕಿ ಚಪ್ಪರಿಸುವಾಗ ನನ್ನಂತವನಿಗೆ ಜುಗುಪ್ಸೆಯಾದರೆ ಮುಗ್ಧ ಜನತೆ ಅತ್ಯಂತ ಭಯಕ್ಕೊಳಗಾದುದು ಕಂಡುಬಂದಿದೆ.

    ಇಷ್ಟು ವರ್ಷಗಳಲ್ಲಿ ಈಗಿನಂತೆ ನಿತ್ಯವೂ ಜ್ವರ (ಆಧುನಿಕ ಭಾಷೆಯಲ್ಲಿ ಸೋಂಕು) ಪೀಡಿತರ, ಗುಣಮುಖರಾದವರ ಮತ್ತು ಜ್ವರದಿಂದಲೇ ಮೃತಪಟ್ಟವರ ಲೆಕ್ಕವನ್ನು ಮಾಧ್ಯಮಗಳು ಮತ್ತು ಸರಕಾರವು ಕೊಡುತ್ತಿತ್ತೇ? ಲೆಕ್ಕವಿದ್ದರೆ ಇಂದಿನ ಸಾವುಗಳ ಸಂಖ್ಯೆಗೂ ಹಿಂದಿನ ವರ್ಷಗಳ ಸಾವುಗಳಿಗೂ ವಿಶೇಷ ವ್ಯತ್ಯಾಸವೇನೂ ಇರುತ್ತಿರಲಿಲ್ಲ. ವಾಸ್ತವವಾಗಿ ಅಂತಹ ತುಲನಾತ್ಮಕ ಅಧ್ಯಯನ (comparative study) ಮತ್ತು ಗಣತಿಯೇ( survey) ನಡೆದಿಲ್ಲ. ಯಥಾರ್ಥವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸಿದ ಸಾವಿನ ಲೆಕ್ಕವು ಯಾರಿಗೂ (ಹೊರ ಪ್ರಪಂಚಕ್ಕೆ ) ಸಿಗುತ್ತಿರಲಿಲ್ಲ. ಇತ್ತೀಚೆಗಿನ ನಾಲ್ಕು ತಿಂಗಳುಗಳಲ್ಲಿ ಅಸಾಧ್ಯಾವಸ್ಥೆಗೆ (incurable) ಅಥವಾ ಗಂಭೀರ ಸ್ಥಿತಿಗೆ (severe/acute) ತಲುಪಿದ ರೋಗಿಗಳನ್ನು ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗಾಗಿ ಸ್ವೀಕರಿಸುತ್ತಲೇ ಇಲ್ಲ. ಅಥವಾ ಜಾಣ್ಮೆಯಿಂದ ಸರಕಾರಿ ಆಸ್ಪತ್ರೆಗೆ ವರ್ಗಾಯಿಸುತ್ತಿದ್ದಾರೆ. ಅನಿವಾರ್ಯವಾಗಿ ರೋಗಿಗಳು ಇಂತಹ ಕಠಿಣ ಸಂದರ್ಭದಲ್ಲಿ ಕೊನೆಯ ಉಸಿರಾಟಕ್ಕಾಗಿ ಸರಕಾರಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿ ಬಂದಿದೆ. ಹಳೇ ರೋಗಗಳ (ಅಪಘಾತ ಹೊರತುಪಡಿಸಿ) ಇಂತಹ ಕೊನೇಕಾಲದಲ್ಲೇ ರೋಗಿಗಳಿಗೆ ಅಂತ್ಯ ನೀಡಲು ಅಂತಕನ(ಜ್ವರ) ಪ್ರವೇಶವಾಗುತ್ತದೆ. (“…ಕೃಚ್ರತ್ವಾತ್ ಅಂತ  ಸಂಭವಾತ್”- ಸುಶ್ರುತ .) ಈ ಸಂದರ್ಭದಲ್ಲಿ ಯಾವುದೇ ಜ್ವರವು ಅಂದರೆ ಕೊರೊನಾ ಅಥವಾ ಅದರ ಅಣ್ಣ , ತಮ್ಮ , ಚಿಕ್ಕಪ್ಪ , ದೊಡ್ಡಪ್ಪ ಬಂದರೂ ಪರಿಣಾಮ ಒಂದೇ. ಅದುವೇ ಮೃತ್ಯು. ಇಲ್ಲಿ ಜ್ವರ ಕೇವಲ ನಿಮಿತ್ತ (ಕ್ಷುಲ್ಲಕ ಕಾರಣ) ಮಾತ್ರ. ನಿಜವಾದ ಕಾರಣ ಮೇಲೆ ಹೇಳಲಾದ ಹಳೇ ರೋಗಗಳೇ ಆಗಿದೆ. ಸರಕಾರವು ಈಗ ಕೊಡುತ್ತಿರುವ ಸಾವಿನ ಸಂಖ್ಯೆಗಳು ಇವೇ ಆಗಿದ್ದು ಮಾಧ್ಯಮಗಳಿಗೆ ಪುಕ್ಕಟೆ ಆಹಾರವಾಗಿ, ಅವರಿಂದ ಮುಗ್ದ ಜನರಲ್ಲಿ ಭಯದ ನಿರ್ಮಾಣವಾಗಿ, ಕೊನೆಗೆ ಈ ಮೂಲಕ ಸಮಾಜ, ರಾಷ್ಟ್ರದ ದುಸ್ಥಿತಿಗೆ ಕಾರಣವಾಗುತ್ತಿದೆ.

     

    ಸರಕಾರದ ತಜ್ಞರ ವ್ಯಾಪ್ತಿಯಲ್ಲಿ ನಾನಿಲ್ಲದಿದ್ದರೂ(ಅಪೇಕ್ಷೆಯೂ ಇಲ್ಲ) ಅನಾಮಧೇಯನಾಗಿ ಸಮಾಜದ ಹಿತದೃಷ್ಟಿಯಿಂದ ಸರಕಾರಕ್ಕೆ ಮತ್ತು ಜನತೆಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದೇನೆ.

    ಕೇಂದ್ರ ಮತ್ತು ರಾಜ್ಯ ಸರಕಾರದ ಗಮನಕ್ಕೆ:

    * ಕೊರೊನಾ ರೋಗ ಪತ್ತೆಗೆ ಈಗ ಪ್ರಯೋಗಾಲಯದಲ್ಲಿ ನಡೆಸಲಾಗುತ್ತಿರುವ ಎಲ್ಲಾ ಪರೀಕ್ಷಾ ವಿಧಾನಗಳನ್ನು ನಿರ್ದಾಕ್ಷಿಣ್ಯವಾಗಿ ನಿರ್ಬಂಧಿಸಬೇಕು. ಈ ವಿಷಯದಲ್ಲಿ ಪ್ರಬಲ ಧೈರ್ಯ ಮತ್ತು ಪ್ರಚಂಡ ಇಚ್ಛಾಶಕ್ತಿಯನ್ನು ಪ್ರಧಾನಿಯವರಿಂದ ನಿರೀಕ್ಷಿಸುತ್ತಿದ್ದೇನೆ. ಕೊರೊನಾಕ್ಕೆಂದೇ ಈಗ ಯಾವುದೇ ಔಷಧವಾಗಲೀ, ಲಸಿಕೆಯಾಗಲೀ ಬಂದಿಲ್ಲವೆಂಬುದು( ಅಗತ್ಯವೂ ಇಲ್ಲ) ತಿಳಿದಿರಲಿ. ಆದರೆ ವರದಿಗಳ ಪ್ರಕಾರ 98% ಕ್ಕಿಂತಲೂ ಹೆಚ್ಚು ಕೊರೊನಾ ಪೀಡಿತರು ಗುಣಮುಖರಾಗಿರುವುದು ಇತರ ಔಷಧಗಳನ್ನು ಲಕ್ಷಣಾನುಸಾರ (symptomatic treatment) ಬಳಸಿದ್ದರಿಂದಲೇ ಎಂಬುದು ತಲೆಗೆ ಹೋಗಿದ್ದರೆ ಸಂತೋಷ. ಈ ಕಾರಣದಿಂದ ಪ್ರಯೋಗಾಲಯದ ವಿಶ್ಲೇಷಣೆ ಅಥವಾ ವರದಿ ಯಾವುದೇ ಇದ್ದರೂ ಈಗಿನ ಚಿಕಿತ್ಸೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂಬ ಸತ್ಯವನ್ನು ಮಹಾಬುದ್ದಿವಂತರು ಅರ್ಥ ಮಾಡಿಕೊಂಡಿದ್ದರೆ ಕ್ಷೇಮ. ಇನ್ನು ಅನಧಿಕೃತವಾಗಿ ರೋಗಿಗಳು ಅನುಸರಿಸಿದ ಆಯುರ್ವೇದ ಚಿಕಿತ್ಸೆ ಅಥವಾ ಮನೆ ಮದ್ದಿನಿಂದ ( ಅದು ಕೂಡಾ ಆಯುರ್ವೇದ ವಿಧಾನವಾಗಿದೆ ) ಗುಣಮುಖರಾದವರ ಸಂಖ್ಯೆ ಲೆಕ್ಕಕ್ಕೆ ಸಿಗಲು ಸಾಧ್ಯವಿಲ್ಲ. ಹಿಂದಿನ ವರ್ಷಗಳಲ್ಲಿ ವೈರಲ್ ಜ್ವರ ಬಂದಾಗ ಈಗಿನಂತೆ ಅತಿಯಾದ ಪ್ರಚಾರ ಹಾಗು ಪ್ರಯೋಗಾಲಯಗಳ ವರದಿಗಳಂತಹ ಮೂರ್ಖ ಪ್ರಯತ್ನ ಮಾಡಿಲ್ಲದಿರುವುದು ನೆನಪಲ್ಲಿದ್ದರೆ ದೇಶದ ಜನರ ಹಿತದೃಷ್ಟಿಯಿಂದ ಒಳ್ಳೆಯದಿತ್ತು. ಮೇಲೆ ಹೇಳಿದ ಸತ್ಯವನ್ನು ಅನುಸರಿಸಿದರೆ ಈಗ ವ್ಯರ್ಥವಾಗಿ ಪೋಲಾಗುತ್ತಿರುವ ಜನರ ಕೋಟಿಗಟ್ಟಲೆ ಹಣವನ್ನು ಜನರಿಗಾಗಿಯೇ ಬಳಸಬಹುದಿತ್ತು.

    * ರೋಗ ಯಾವ ಊರಿನಿಂದ, ಯಾರಿಂದ, ಹೇಗೆ ಬಂತೆನ್ನುವುದರ ಬಗ್ಗೆ ನಡೆಯುತ್ತಿರುವ ಪತ್ತೇದಾರಿಕೆಯು ಹಾಸ್ಯಾಸ್ಪದ ಕಥೆಯಂತಿದೆ. ಮನೆಯಲ್ಲಿ ನಡೆಯುವ ಸಮಾರಂಭದ ಸಂದರ್ಭದಲ್ಲಿ ಮನೆಯವರು ಅತಿಥಿಗಳು ಹೇಗೆ ಬಂದರೆಂದು(ಕಾರು, ಬಸ್ಸು ಎತ್ತಿನ ಗಾಡಿ ಇತ್ಯಾದಿ)ಚಿಂತಿಸುವುದಾಗಲೀ,ಚರ್ಚಿಸುವುದಾಗಲೀ ಇಲ್ಲ.ಬದಲಾಗಿ ಬಂದ ಅತಿಥಿಗಳನ್ನು ಹೇಗೆ ಸಂತೋಷಪಡಿಸ ಬೇಕೆನ್ನುವುದೇ ಅವರ ಆದ್ಯತೆಯಾಗಿರುತ್ತದೆ.ಹಾಗೆಯೇ ಬುದ್ದಿವಂತ ಚಿಕಿತ್ಸಕನು ಶರೀರದ ಹೊರಗಿನ ಕಾರಣಗಳ ಬಗ್ಗೆ ತಲೆಕೆಡಸಿಕೊಳ್ಳದೆ ರೋಗಿಯಲ್ಲಿರುವ ರೋಗಕ್ಕೆ ಮಾತ್ರ ಮಹತ್ವವನ್ನು ಕೊಡುತ್ತಾನೆ ಎಂಬುದು ಆಡಳಿತಗಾರರಿಗೆ ಮನದಟ್ಟಾಗಬಹುದೆಂದು ನಂಬಿದ್ದೇನೆ.ಈ ಕಾರಣದಿಂದ ಸರಕಾರವು ಮೂಲದ ಪತ್ತೆಗಾಗಿ ನಡೆಸುತ್ತಿರುವ ಅಪಾರ ಖರ್ಚು ಮತ್ತು ಪರಿಶ್ರಮ ವ್ಯರ್ಥ ಕಸರತ್ತಿನಂತೆ (Futile circus)ಕಾಣಿಸುತ್ತದೆ. ಕೊರೊನಾ ವೈರಸ್ ಗಾಳಿಯಿಂದ ಹರಡುವುದೆಂದು ಮನಗಂಡು ವಿವಿಧ ರಾಜ್ಯಗಳ ಗಡಿಗಳನ್ನು ಮುಂಚಿನಂತೆ ತೆರೆದರೆ ಅಸಂಖ್ಯ ಜನರಿಗೆ ಹಾಗು ನಮ್ಮ ರಾಜ್ಯದಲ್ಲಿ ಕಲಿಯುತ್ತಿರುವ ಹೊರರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳು ಸಂತಸದ ನಿಟ್ಟುಸಿರು ಬಿಟ್ಟಾರು.

    *  ಕೇಂದ್ರ ಮತ್ತು ರಾಜ್ಯ ಸರಕಾರಗಳ ಇಂತಹ ಅಭೂತಪೂರ್ವ ಮೂರ್ಖ ನಿರ್ಧಾರ ಮತ್ತು ಕ್ರಮಗಳಿಗೆ ಮಂತ್ರಿಗಳು ಶರಣಾಗತರಾದ ಅಂದರೆ ತಮ್ಮ ವಿಜ್ಞಾನ,ಸಿದ್ದಾಂತ ಮತ್ತು ಚಿಕಿತ್ಸೆಯೇ ಅಂತಿಮ ಅಂದುಕೊಂಡ ಗರ್ವದ ತಜ್ಞರೇ (?) ಬಹುಮಟ್ಟಿಗೆ ಕಾರಣವೆಂದು ಅನ್ನಿಸುತ್ತದೆ.ದುರಭಿಮಾನ,ಮದ (ವಿದ್ಯಾ,ಧನ, ಅಧಿಕಾರ) ಮತ್ತು ಅಹಂಕಾರವು ಮಾನಸಿಕ ರೋಗಗಳೆಂದು ಸ್ವದೇಶಿ ಚಿಕಿತ್ಸಾ ಪದ್ಧತಿಯು (ಆಯುರ್ವೇದ)ಹೇಳುತ್ತದೆ – ”ಮಾನ ಮದ ದಂಭಾದಯಃ” -ಡಲ್ಹಣ. ಈ ಕಾರಣದಿಂದ ಮುಂದೆಯಾದರೂ ಮೇಲೆ ಹೇಳಿದ ಮನೋವ್ಯಾಧಿ ಸೊಂಕಿತರನ್ನು ಪ್ರಧಾನಿಯವರು ಸಾಕಷ್ಟು ದೂರವಿಡುವುದು ಲೇಸು. ಸಂಕ್ಷಿಪ್ತವಾಗಿ ಹೇಳುವದಾದರೆ ಸರಕಾರಗಳು ಸದುದ್ದೇಶದಿಂದ ಕೈಗೊಂಡ ಕ್ರಮಗಳಿಂದಾಗಿ ಜನರು ಕೊರನಾಕ್ಕಿಂತಲೂ ಹೆಚ್ಚು ಕಷ್ಟ ಹಾಗೂ ಭಯಪಡುವಂತಾಗಿದೆ. ಉದಾಹರಣೆಗೆ   ಎಂಬುದು ಗೃಹಬಂಧನ ಅಥವಾ ಜೈಲಿನಂತಾಗಿದೆ.ರೋಗದ ಪತ್ತೆಗಳು ಬಲಾತ್ಕಾರದ ಪರೀಕ್ಷೆಗಳಾಗಿವೆ. ಹೊಸ ಲಸಿಕೆಗಾಗಿ ಮೂರ್ಖ ಪ್ರಯತ್ನ ಸಾಗಿದೆ.ಆದರೆ ವಿದ್ಯಾರ್ಥಿಗಳ ಜೀವನವನ್ನು ಹೊಸಕಿಹಾಕಲಾಗಿದೆ.ಅಪೇಕ್ಷಿಸಿದ ಅಲೋಪತಿ ಔಷಧವನ್ನು ಬೇಕಾದ ಕಡೆಯಿಂದ ಪಡೆಯಲು ಅತೀವ ಕಷ್ಟಪಡುವಂತಾಗಿದೆ.ಕೊರನಾವನ್ನು ಆಯುರ್ವೇದದಿಂದ ಸುಲಭವಾಗಿ ಗುಣಪಡಿಸಬಹುದಾದರೂ ಸ್ವದೇಶಿ ಭಕ್ತರಿಂದಲೇ ಅವಕಾಶವಾಗಿಲ್ಲ.ತಮ್ಮ ಹತ್ತಿರದ ಬಂಧುಗಳ ಶವವನ್ನು ನೋಡುವುದಾಗಲಿ,ತಮಗೆ ಸಮಾಧಾನಕರ ರೀತಿಯಲ್ಲಿ ಸಂಸ್ಕಾರಗಳನ್ನು ಮಾಡುವುದಕ್ಕಾಗಲೀ ಆಗದ ದುಸ್ಥಿತಿಯನ್ನು ಸೃಷ್ಟಿಸಲಾಗಿದೆ.ನಿರುದ್ಯೋಗದ ವಿಷಯವನ್ನು ಬರೆಯಲು ಹೊರಟರೆ ಪುಟಗಳೇ ಸಾಲದು.ಇಷ್ಟೆಲ್ಲಾ ಅರ್ಥಹೀನ ಕ್ರಮಗಳಿಂದಾಗಿ ಕೋಟಿಗಟ್ಟಲೆ ಸುರಿದು ಸಾಧಿಸಿದ್ದಾದರೂ ಏನನ್ನು?ಮಳೆಗಾಲವು ಮುಗಿಯುತ್ತಿದಂತೆ ಕೋರೋನ ಜ್ವರವು ನೈಸರ್ಗಿಕವಾಗಿಯೇ ಕಡಿಮೆಯಾಗಬಹುದು.ಆದರೆ ಅಜ್ಞಾನವೆಂಬ ಜ್ವರ?  ಈ ಸಂದರ್ಭದಲ್ಲಿ  ಯಾವುದೇ ರಾಜಕೀಯ,ಆರ್ಥಿಕ ಲಾಭ ಮತ್ತು ನಷ್ಟದ ಲೆಕ್ಕಾಚಾರ ಬಿಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

     

    ಮಹಾಜನತೆಯಲ್ಲಿ ವಿನಂತಿ

    ಹಿಂದಿನಂತೆ ಜನಜೀವನ ಆರೋಗ್ಯಕರವಾಗಿ ಸಾಗಲು ಶೈಕ್ಷಣಿಕ ಸಂಸ್ಥೆಗಳು ಶೀಘ್ರದಲ್ಲೇ ಪ್ರಾರಂಭವಾಗಬೇಕಾದ ಅನಿವಾರ್ಯತೆಯಿದೆ.ಇಬ್ಬರು ವಿದ್ಯಾರ್ಥಿಗಳ ತಂದೆಯಾದ ನಾನು ಜನತೆಯಲ್ಲಿ ವಿನಂತಿಸಿವುದೇನೆಂದರೆ, ನಾವೇ ನಿರ್ಮಿಸಿದ ಬೆದರುಬೊಂಬೆಗೆ ಹೆದರಿ ಓಡುವುದರಲ್ಲಿ ಅರ್ಥವಿಲ್ಲ. ಆನ್ಲೈನ್ ಕ್ಲಾಸುಗಳಿಗೆ ಅವಕಾಶ ಕೊಡದೆ(ಒಲ್ಲದ ಮನಸ್ಸಿನಿಂದ ಮಾಡುತ್ತಿದ್ದರೂ)ಎಂದಿನ ಶಾಲಾಕಾಲೇಜುಗಳು ತತ್ಕ್ಷಣವೇ  ಪ್ರಾರಂಬವಾಗಬೇಕೆಂದು ಮಂದ ಬುದ್ದಿಯ ಸರಕಾರಕ್ಕೆ ಸಭ್ಯರೀತಿಯಲ್ಲಿ ಒತ್ತಡ ಹಾಕಬೇಕು.ಈ ಮೂಲಕ ಮಕ್ಕಳ ಅಮೂಲ್ಯವಾದ ಶೈಕ್ಷಣಿಕ ಅವಧಿಯನ್ನು ಹಾಳಾಗದಂತೆ ರಕ್ಷಿಸುವ ಪುಣ್ಯಕಾರ್ಯ ಮಾಡೋಣ.ವಿದ್ಯಾರ್ಥಿಗಳನ್ನು ಅವಲಂಬಿಸಿದ ಅನೇಕ ಇನ್ನಿತರ ಉದ್ಯೋಗಿಗಳ ಜೀವನವನ್ನು ಪರೋಕ್ಷವಾಗಿ ಉಳಿಸುವ ಮಂಗಳ ಕಾರ್ಯವೂ ನಮ್ಮಿಂದಾಗಲಿ. ಉದಾಹರಣೆಗೆ ಶಾಲಾಕಾಲೇಜುಗಳು ಆರಂಭವಾದರೆ ಸಹಸ್ರಾರು ಖಾಸಗಿ ಅನುದಾನರಹಿತ ಸಂಸ್ಥೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಮೊದಲಿನಂತೆ ಬದುಕಬಹುದು.ಅಲ್ಲದೆ ಸಾವಿರಾರು ರಿಕ್ಷಾ,ಬಸ್ಸು, ಇತ್ಯಾದಿ ವಾಹನಗಳಲ್ಲಿ ದುಡಿಯುವ ಕಾರ್ಮಿಕರು,ಬಟ್ಟೆಯಂಗಡಿ,ದರ್ಜಿಗಳು,ಪುಸ್ತಕ ಅಂಗಡಿಗಳು,ಸ್ಟುಡಿಯೋ,ಹೋಟೆಲ್,ವಿದ್ಯಾರ್ಥಿ ನಿಲಯಗಳಲ್ಲಿ ದುಡಿಯುವ (ಅಡುಗೆ,ಸ್ವಚ್ಚತೆ ಇತ್ಯಾದಿ)ಕಾರ್ಮಿಕರ ಜೀವನವು ಸುಧಾರಿಸುವುದರಲ್ಲಿ ಸಂಶಯವಿಲ್ಲ.ಸರಕಾರದ ಬಿಟ್ಟಿ ಕೊಡುಗೆಗಳಿಂದ(ಭಿಕ್ಷೆ)ಸ್ವಾಭಿಮಾನದ ಬದುಕು ಸಾಧ್ಯವಿಲ್ಲ, ಮಾತ್ರವಲ್ಲ ಆತ್ಮನಿರ್ಭರದಂತಹ ದೊಡ್ಡ ಶಬ್ದವು ಅರ್ಥಹೀನವಾಗುವುದು ನಿಶ್ಚಿತ.

    ಎರಡನೆಯದಾಗಿ ಹಿಂದಿನಂತೆ ಪ್ರತಿಯೊಬ್ಬರಿಗೂ ಅವರವರ ಇಚ್ಚೆಗನುಸಾರವಾಗಿ ವೈದ್ಯರ,ವೈದ್ಯಕೀಯ ಪದ್ಧತಿಯ ಚಿಕಿತ್ಸೆ ಪಡೆದುಕೊಳ್ಳುವ ಸ್ವಾತಂತ್ರ್ಯ ನೀಡಬೇಕೆಂದು ಆಗ್ರಹಿಸಬೇಕು. ಪ್ರಯೋಗಾಲಯಗಳ ಭೇಟಿಗೂ ಬಲವಂತ ಮಾಡದೇ ಅವರವರ ಸ್ವಾತಂತ್ಯಕ್ಕೆ ಬಿಡಬೇಕೆಂದು ಕುರುಡು ಸರಕಾರಕ್ಕೆ ಮನಗಣಿಸಬೇಕಾಗಿದೆ.ದೇಶಕ್ಕೆ ಸ್ವಾತಂತ್ಯ ತಂದುಕೊಟ್ಟ ಪಕ್ಷವೆಂದು ಇನ್ನೂ ಸುಳ್ಳು ಹೇಳುತ್ತಿರುವ ವಿರೋಧ ಪಕ್ಷವು ಮೂರ್ಛಾವಸ್ತೆಯಲ್ಲಿ (ಕೋಮಾ)ಇದೆಯೆಂದು ತಿಳಿಯುವುದು ಉತ್ತಮ.ಈ ಕಾರಣಕ್ಕಾಗಿ ನಾವು ಅರ್ಥಹೀನ ಭಯದಿಂದ ಪ್ರತಿರೋಧ ಶಕ್ತಿಯನ್ನು ಕಳಕೊಂದರೆ ಮುಂದಿನ ದಿನಗಳು ಶೋಚನೀಯವಾಗುದರಲ್ಲಿ ಸಂಶಯವಿಲ್ಲ.

    ಕೊನೆಯದಾಗಿ,ಇತ್ತೀಚಿಗಿನ ದಿನಗಳಲ್ಲಿ ಗಮನಕ್ಕೆ ಬಂದಂತೆ ಸರಕಾರಗಳು ಈ ವಿಷಯದಲ್ಲಿ ತನ್ನ ತಪ್ಪು ದಾರಿಯಿಂದ ಸರಿದಾರಿಗೆ ಬರುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ನನ್ನನ್ನೂ ಸೇರಿದಂತೆ ಕೋಟ್ಯಂತರ ಭಾರತೀಯರಲ್ಲಿ ಪ್ರಧಾನಿಯವರ ಮೇಲೆ ಸತ್ವಗುಣದ ಪ್ರೀತಿಯಿರುವುದು ಸಹಜ. ಆದರೆ ಅನೇಕರಲ್ಲಿ ತಮೋಗುಣದ ಮೋಹವಿರುವುದು ಕಂಡುಬರುತ್ತಿದ್ದು,ಇದು ದೊಡ್ಡ ತಪ್ಪೆನಿಸುತ್ತಿದೆ. ಉದಾಹಣೆಗೆ ಮಕ್ಕಳಲ್ಲಿ ಪ್ರೀತಿಯಿದ್ದಾಗ ಉತ್ತಮ ಕಾರ್ಯಮಾಡಿದರೆ ಬೆನ್ನನ್ನು ತಟ್ಟುತ್ತೇವೆ. ಹಾಗೆಯೇ ತಪ್ಪು ಕಾರ್ಯವಾದಾಗ ಬೆನ್ನಿಗೇಟು ನೀಡುತ್ತೇವೆ. ಆದರೆ ಮಕ್ಕಳಲ್ಲಿ ಮೋಹವಿದ್ದಾಗ ಮಾಡಿದುದೆಲ್ಲವೂ ಸರಿಯೆಂದು ಕಾಣುತ್ತದೆ.ನಮ್ಮ ಈಗಿನ ನಡಿಗೆಯು ಮೋಹದ ಕಾರಣದಿಂದ ಕಣ್ಣು ಮುಚ್ಚಿ ನಡೆಯುವಂತಿದ್ದು,ಇದಕ್ಕೆ ಮುಂದೆ ಬಹುದೊಡ್ಡ ಬೆಲೆ ತೆರಬೇಕಾಗುವ ಸಾಧ್ಯತೆ ಕಂಡುಬರುತ್ತಿದೆ.

    ಪ್ರಸ್ತುತ ಲೇಖನದಲ್ಲಿ ವಾಚಕರಿಗೆ ಸ್ವಲ್ಪವಾದರೂ ಸತ್ಯ ಅಥವಾ ಸತ್ವ ಕಂಡುಬಂದರೆ ಅದನ್ನು ಪ್ರಧಾನಿ, ಮುಖ್ಯಮಂತ್ರಿಗಳಾದಿ ಸಾಧ್ಯವಾದಷ್ಟು ರಾಜಕಾರಣಿಗಳಿಗೆ ಮತ್ತು ಬಂದುಮಿತ್ರರಾದಿ ತಮ್ಮ ಸಂಪರ್ಕದಲ್ಲಿರುವ ಸರ್ವರಿಗೂ ತಲುಪಿಸಬೇಕಾಗಿ ವಿನಮ್ರ ವಿನಂತಿ.  ಈ ಕಾರ್ಯಕ್ಕೆ ಸಂಬಂಧಿಸಿದಂತೆ ತಮಗೆ ಅನುಕೂಲಕರವಾದ ಭಾಷೆಗಳಿಗೆ ಅನುವಾದವನ್ನೂ ಮಾಡಬಹುದು. ಮುಖ್ಯವಾಗಿ ಸಾಮಾಜಿಕ ಜಾಲತಾಣಗಳನ್ನು ವ್ಯಾಪಕವಾಗಿ ಬಳಸಲು ವಿನಂತಿಸಿಕೊಳ್ಳುತ್ತೇನೆ. ”ಧೈರ್ಯವೇ ಜೀವನ ಹೆದರಿಕೆಯೇ ಮರಣ” ವೆಂದ ವಿವೇಕಾನಂದರ ವಾಣಿಯನ್ನು ಮರೆಯದಿರೋಣ.

    ‘ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೆ ‘—ಭಗವದ್ಗೀತಾ

    (ತಿಳುವಳಿಕೆಯಷ್ಟು ಪವಿತ್ರವಾದುದು ಯಾವುದು ಇಲ್ಲ)

    (ಈ ಲೇಖನದಲ್ಲಿ ವ್ಯಕ್ತವಾಗಿರುವ ವಿಚಾರಗಳು ಸಂಪೂರ್ಣವಾಗಿ ಲೇಖಕರ ಅಭಿಪ್ರಾಯವಾಗಿದ್ದು, ಮಂಗಳೂರು ಮಿರರ್ ನಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ)
    Share Information
    Advertisement
    Click to comment

    You must be logged in to post a comment Login

    Leave a Reply