BANTWAL
ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ ಎಸ್‌ಡಿಪಿಐ ದೊಸ್ತಿ,ಅಧ್ಯಕ್ಷರಾಗಿ ಕಾಂಗ್ರೆಸ್ಸಿನ ಬಿ.ವಾಸು ಮತ್ತು ಉಪಾಧ್ಯಕ್ಷರಾಗಿ SDPI ನ ಮೊನೀಶ್ ಆಲಿ..!
ಬಂಟ್ವಾಳ: ಬಂಟ್ವಾಳ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ನಡೆದಿದ್ದು, ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬಿ.ವಾಸು ಪೂಜಾರಿ ಲೊರೆಟ್ಟೊ ಮತ್ತು ಉಪಾಧ್ಯಕ್ಷರಾಗಿ ಎಸ್.ಡಿ.ಪಿ.ಐ.ನ ಮೊನೀಶ್ ಆಲಿ ಆಯ್ಕೆಯಾಗಿದ್ದಾರೆ.
ಒಟ್ಟು 27 ಸದಸ್ಯರ ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಗಂಗಾಧರ ರಾಜೀನಾಮೆ ನೀಡಿದ್ದು, ಸ್ಥಾನಬಲ 26ಕ್ಕೆ ಕುಸಿದಿತ್ತು. ಕಾಂಗ್ರೆಸ್ ನಿಂದ 11, ಬಿಜೆಪಿಯಿಂದ 11, ಎಸ್.ಡಿ.ಪಿ.ಐ.ನಿಂದ 4 ಮಂದಿ ಸದಸ್ಯರು ಇದ್ದು, ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭ ಲೋಕಸಭೆ ಮತ್ತು ವಿಧಾನಸಭೆ ಸದಸ್ಯರ ಮತವೂ ಸೇರಿ ಬಿಜೆಪಿ 13, ಕಾಂಗ್ರೆಸ್ 11 ಮತ್ತು ಎಸ್.ಡಿ.ಪಿ.ಐ. 4 ಮತಗಳು ಇದ್ದವು. ಆಯ್ಕೆ ಪ್ರಕ್ರಿಯೆ ಸಂದರ್ಭ ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ.ಪರಸ್ಪರ ಪೂರಕವಾಗಿ ಹೊಂದಾಣಿಕೆಯಿಂದ ಮತ ಚಲಾಯಿಸಿದ ಪರಿಣಾಮ ಉಭಯ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರ ಪರಿಣಾಮ, ಕಾಂಗ್ರೆಸ್-ಎಸ್.ಡಿ.ಪಿ.ಐ. ಅಭ್ಯರ್ಥಿಗಳಿಗೆ 15, ಬಿಜೆಪಿ ಅಭ್ಯರ್ಥಿಗಳಿಗೆ 13 ಮತಗಳು ಲಭಿಸಿದವು.
ನಾಮಪತ್ರ ಸಲ್ಲಿಕೆ ಸಂದರ್ಭ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಬಿ.ವಾಸು ಪೂಜಾರಿ, ಎಸ್.ಡಿ.ಪಿ.ಐ.ನ ಇದ್ರೀಸ್ ಹಾಗೂ ಬಿಜೆಪಿಯ ಎ.ಗೋವಿಂದ ಪ್ರಭು ಸ್ಪರ್ಧೆಗಿಳಿದಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೆ, ಕಾದು ನೋಡುವ ತಂತ್ರ ಅನುಸರಿಸಿತು. ಎಸ್.ಡಿ.ಪಿ.ಐ. ಮೊನೀಶ್ ಆಲಿ ಮತ್ತು ಬಿಜೆಪಿ ಹರಿಪ್ರಸಾದ್ ಅವರನ್ನು ಕಣಕ್ಕಿಳಿಸಿತು. ನಾಮಪತ್ರ ಹಿಂಪಡೆಯುವ ವೇಳೆ ಎಸ್.ಡಿ.ಪಿ.ಐ.ನ ಇದ್ರೀಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿತನದಿಂದ ಹಿಂದಕ್ಕೆ ಸರಿದರು. ಈ ವೇಳೆ ಕಾಂಗ್ರೆಸ್ ನ ಅಧ್ಯಕ್ಷ ಅಭ್ಯರ್ಥಿ, ಎಸ್.ಡಿ.ಪಿ.ಐ.ನ ಉಪಾಧ್ಯಕ್ಷ ಅಭ್ಯರ್ಥಿ ಹಾಗೂ ಬಿಜೆಪಿಯ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿ ಇದ್ದು, ವೇದಿಕೆ ಕಾಂಗ್ರೆಸ್ – ಎಸ್..ಡಿ.ಪಿ.ಐ. ಜಂಟಿ ಆಯ್ಕೆಗೆ ಸಿದ್ಧಗೊಂಡಿತ್ತು. ನಿರೀಕ್ಷೆಯಂತೆ ಕಾಂಗ್ರೆಸ್ ಅಭ್ಯರ್ಥಿಗೆ ಎಸ್.ಡಿ.ಪಿ.ಐ, ಎಸ್.ಡಿ.ಪಿ.ಐ. ಅಭ್ಯರ್ಥಿಗೆ ಕಾಂಗ್ರೆಸ್ ಮತ ಚಲಾಯಿಸುವುದರ ಮೂಲಕ ಜಂಟಿಯಾಗಿ ಜಯಗಳಿಸಿದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಡಿ.ಅರ್ಚನಾ ಭಟ್ ಕಾರ್ಯನಿರ್ವಹಿಸಿದ್ದರು.