KARNATAKA
ಬಿರುಮಳೆ ಮಧ್ಯೆ ಅಂಕೋಲಾ ಶಿರೂರು ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ಕಾರ್ಯಾಚರಣೆ ಪರಾಮರ್ಶೆ ನಡೆಸಿದ ಸಿಎಂ ಸಿದ್ದರಾಮಯ್ಯ..!
ಅಂಕೋಲಾ : 10 ಜೀವಗಳನ್ನು ಬಲಿ ಪಡೆದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿದ ಪ್ರದೇಶಕ್ಕೆ ಬಿರು ಮಳೆ ಮಧ್ಯೆ ಸಿಎಂ ಸಿದ್ದರಾಮಯ್ಯ ಭಾನುವಾರ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾರ್ಯಾಚರಣೆಯನ್ನು ವೀಕ್ಷಣೆ ಮಾಡಿದರು.
SDRF ಹಾಗೂ NDRF ಸಿಬ್ಬಂದಿಗೆ ಎದುರಾಗುತ್ತಿರುವ ಸವಾಲುಗಳನ್ನು ಪರಿಶೀಲನೆ ಮಾಡಿದರು. ದುರಂತದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಈ ವೇಳೆ ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನ, ಉನ್ನತ ಮೆಟಲ್ ಡಿಟೆಕ್ಟರ್ ಮತ್ತು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಲು ಸಿಎಂ ಸೂಚಿಸಿದರು.
ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು ಹಲವರು ಸಾವಿಗೀಡಾದ ಸ್ಥಳಕ್ಕೆ ಇಂದು ಭೇಟಿನೀಡಿ, ರಕ್ಷಣಾ ಕಾರ್ಯದ ಪರಿಶೀಲನೆ ನಡೆಸಿದೆ. ಮಣ್ಣಿನಡಿ ಮುಚ್ಚಿ ಹೋಗಿರುವ ರಸ್ತೆಯ ಎಡಭಾಗದಲ್ಲಿ ಅಪಾಯಕಾರಿ ಗುಡ್ಡವಿದೆ. ಬಲ ಭಾಗದಲ್ಲಿ ಭೋರ್ಗರೆದು ಹರಿಯುತ್ತಿರುವ ಕಾಳಿ ನದಿ ಇದೆ. ಜೊತೆಗೆ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಮಣ್ಣಿನಡಿ ಸಿಲುಕಿರುವ ಜೀವಗಳ ಪತ್ತೆ ಕಾರ್ಯ ಬಹಳ ಸವಾಲಿನದ್ದಾಗಿದೆ. ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ಸಿಬ್ಬಂದಿಗಳ ಕಾರ್ಯಕ್ಷಮತೆಗೆ ನಿಜಕ್ಕೂ ಶ್ಲಾಘನೀಯ. ನಾಲ್ಕು ತಂಡಗಳು ಗುಡ್ಡ ಕುಸಿತದ ಕೆಳಗೆ ಸಿಲುಕಿರಬಹುದಾದವರ ಪತ್ತೆಗೆ ರಾಡಾರ್ ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ನಡೆಸುತ್ತಿವೆ.
ಇನ್ನು ನಾಲ್ಕು ತಂಡಗಳು ಮತ್ತೊಂದು ಬದಿಯ ನದಿಯೊಳಗೆ ಕಾರ್ಯಾಚರಣೆ ನಡೆಸುತ್ತಿವೆ. ಹಲವು ದಿನಗಳಿಂದ ಕಂದಾಯ ಸಚಿವರಾದ ಕೃಷ್ಣಬೈರೇಗೌಡರು ಸ್ಥಳದಲ್ಲಿ ನಿಂತು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕಾರ್ಯಾಚರಣೆ ನಡೆಯುತ್ತಿರುವ ಜಾಗ ಮತ್ತು ಮಣ್ಣು ತುಂಬಿರುವ ರಸ್ತೆಯೂ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳು ಈ ಬಗ್ಗೆ ಹೆಚ್ಚು ಜಾಗರೂಕರಾಗಿರುವಂತೆ ಎಚ್ಚರಿಕೆ ನೀಡಿದ್ದೇನೆ. ಗುಡ್ಡ ಕುಸಿತದ ಸ್ಥಳ ಒಂದು ರೀತಿ ದ್ವೀಪದಂತಾಗಿದೆ. ಸುತ್ತಲೂ ಕಾಳಿ ನದಿ ಭೋರ್ಗರೆದು ಹರಿಯುತ್ತಿದೆ. ನಡುವೆ ಅರ್ಧ ಕುಸಿದ ಗುಡ್ಡ ನಿಂತಿದೆ. ಹೀಗಾಗಿ ಕಾರ್ಯಾಚರಣೆ ವೇಳೆ ಎದುರಾಗಬಹುದಾದ ಅಪಾಯಗಳು ಮತ್ತು ಸವಾಲುಗಳ ಬಗ್ಗೆ ಉನ್ನತ ಮಟ್ಟದ ತಜ್ಞರಿಂದ ಮಾಹಿತಿ ಪಡೆದು, ಅಗತ್ಯ ತಂತ್ರಜ್ಞಾನದ ನೆರವು ಪಡೆಯುವಂತೆ ಸೂಚಿಸಿದ್ದೇನೆ ಎಂದರು.
ಶಿರೂರು ಭೂಕುಸಿತದ ಮಣ್ಣು ತೆರವು ಮತ್ತು ಶೋಧ ಕಾರ್ಯಾಚರಣೆಗೆ ಎಸ್.ಡಿ.ಆರ್. ಎಫ್ ನಿಂದ 46 ಜನ, ಎನ್.ಡಿ.ಆರ್.ಎಫ್ ನಿಂದ 24 ಜನ ಹಾಗೂ 44 ಜನ ಮಿಲಿಟರಿಯವರು ಹಾಗೂ ನೌಕಾಪಡೆಯವರೂ ಕೂಡ ಕೈಜೋಡಿಸಿದ್ದಾರೆ.ಗೋವಾ ಮತ್ತು ಅಂಕೋಲಾ ನಡುವೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಜುಲೈ 16 ರಂದು ಭೂ ಕುಸಿತವಾಗಿದೆ. ಭೂ ಕುಸಿತದಿಂದ 10 ಜನ ಕಾಣೆಯಾಗಿದ್ದಾರೆ. ಅದರಲ್ಲಿ ಏಳು ಜನರ ಹೆಣಗಳು ಪತ್ತೆಯಾಗಿದ್ದು ಇನ್ನೂ ಮೂವರು ಕಾಣೆಯಾಗಿದ್ದು ಅವರ ಪತ್ತೆಗಾಗಿ ಪರಿಹಾರ ಕಾರ್ಯಾಚರಣೆ ಜಾರಿಯಲ್ಲಿದೆ.
ರಾಜ್ಯ ಸರ್ಕಾರ ಕಾರ್ಯಾಚರಣೆಯನ್ನು ವಿಳಂಬ ಮಾಡುತ್ತಿಲ್ಲ. ಎಲ್ಲವನ್ನೂ ತ್ವರಿತವಾಗಿ ಮಾಡುತ್ತಿದ್ದೇವೆ. ಕೇರಳದ ಅರ್ಜುನ್ ಎಂಬುವರು ಕಾಣೆಯಾಗಿದ್ದು, ತಮ್ಮ ರಾಜ್ಯದವರೆಂದು ಅವರೆಲ್ಲಾ ಬಂದಿರಬಹುದು. ಆದರೆ ನಾವು ವಿಳಂಬ ಮಾಡದೇ, ನಿರ್ಲಕ್ಷ್ಯ ತೋರದೆ ಕೆಲಸ ಮಾಡುತ್ತಿದ್ದೇವೆ.ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಯಿತು. ಕಳೆದ ಬಾರಿ ಬರವಿದ್ದು, ಈ ಬಾರಿ ಮಳೆಯಾಗುತ್ತಿದೆ. ಬಹಳ ವರ್ಷಗಳಿಂದ ಇಲ್ಲಿ ಭೂ ಕುಸಿತವಾಗಿರಲಿಲ್ಲ. ಎಲ್ಲೆಲ್ಲಿ ಭೂ ಕುಸಿತವಾಗುತ್ತದೆಯೋ ಅದನ್ನು ತಡೆಗಟ್ಟಲು ಪ್ರಯತ್ನಿಸಲಾಗುವುದು.ರಾತ್ರಿ ವೇಳೆ ಕಾರ್ಯಾಚರಣೆ ನಡೆಯುವುದಿಲ್ಲ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರಾಜಕಾರಣ ಮಾಡುವುದಿಲ್ಲ. ಕೇಂದ್ರ ಸರ್ಕಾರದ ತಂಡ ಎನ್.ಡಿ.ಆರ್. ಎಫ್ ಕೂಡ ಇಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ನೌಕಾ ತಂಡವೂ ಇದೆ. ಇಲ್ಲಿ ಇನ್ಯಾರ ಮೇಲೆಯೂ ದೋಷ ಹೊರೆಸಲು ನಾನು ಹೋಗುವುದಿಲ್ಲ.ನೌಕಾದಳ ಹಾಗೂ ರಕ್ಷಣಾ ತಂಡದವರಿಗೆ ಎಲ್ಲೆಡೆ ಹುಡುಕುವಂತೆ ಸೂಚನೆ ನೀಡಲಾಗಿದೆ. 10 ಜನರು ಕಾಣೆಯಾಗಿದ್ದಾರೆ. ಘಟನೆ ನಡೆದ ದಿನವೇ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರನ್ನು ಹಾಗೂ ಶಾಸಕರನ್ನು ಸ್ಥಳಕ್ಕೆ ಕಳುಹಿಸಲಾಗಿದೆ.ಇಲ್ಲಿ ಭೂ ಕುಸಿತವು ಪ್ರಕೃತಿ ವಿಕೋಪವಲ್ಲ, ಐ.ಆರ್.ಬಿ ಸಂಸ್ಥೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಗಿದೆ. ಯಾರೇ ತಪ್ಪು ಮಾಡಿದರೂ ಕೂಡ ಅವರ ಮೇಲೆ ಕ್ರಮ ವಹಿಸಲಾಗುವುದು, ರಸ್ತೆ ನಿರ್ಮಾಣ ಮಾಡಿರುವವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು. ಪರಿಹಾರ ಕಾಮಗಾರಿ ಮುಗಿದ ಮೇಲೆ ಪ್ರಕರಣದ ಬಗ್ಗೆ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.ಕೇಂದ್ರ ಸರ್ಕಾರ ರಸ್ತೆ ಪೂರ್ಣಗೊಳ್ಳದಿದ್ದರೂ ಟೋಲ್ ಸಂಗ್ರಹ ಮಾಡುತ್ತಿದ್ದು ಕೇಂದ್ರ ರಸ್ತೆ ಸಾರಿಗೆ ಸಚಿವರೊಂದಿಗೆ ಮಾತನಾಡುತ್ತೇನೆ. ಕಳಪೆ ಕೆಲಸವಾಗಿದ್ದರೆ ಅದನ್ನು ಕೂಡಲೇ ಸರಿಪಡಿಸುವ ಕೆಲಸ ಮಾಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಲಾಗುವುದು.ಘಟನೆಯಲ್ಲಿ ಖಾಲಿ ಗ್ಯಾಸ್ ಟ್ಯಾಂಕರ್ ಹಾಗೂ ಭರ್ತಿಯಾಗಿರುವ ಗ್ಯಾಸ್ ಟ್ಯಾಂಕರ್ ಕೂಡ ಹಾನಿಗೀಡಾಗಿವೆ. ಅಲ್ಲಿಯೇ ವಾಸವಾಗಿರುವ ಒಂದೇ ಕುಟುಂಬದವರು ಟೀ ಅಂಗಡಿಯನ್ನು ಇಟ್ಟುಕೊಂಡಿದ್ದರು. ಅವರಲ್ಲಿ ಐವರು ಭೂ ಕುಸಿತದಲ್ಲಿ ಸಾವನ್ನಪ್ಪಿದ್ದಾರೆ. ರಿಸ್ಕ್ ಆಪರೇಶನನ್ನು ತ್ವರಿತವಾಗಿ ಮಾಡಬೇಕೆಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಪಷ್ಟವಾಗಿ ಸೂಚಿಸಿದ್ದೇನೆ.ವಿಧಾನಸಭಾ ಅಧಿವೇಶನ ನಡೆಯುತ್ತಿದ್ದುದರಿಂದ ಇಂದು ಭೇಟಿ ನೀಡಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಎಲ್ಲಾ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದ್ದೆ. ಸಾವನ್ನಪ್ಪಿದವರ ಕುಟುಂಬಕ್ಕೆ
ರೂ.5 ಲಕ್ಷ ಪರಿಹಾರ ನೀಡಬೇಕೆಂದು ಘೋಷಿಸಲಾಗಿದೆ. ಈಗಾಗಲೇ ಅದನ್ನು ವಿತರಿಸಲಾಗಿದೆ. ಒಂದು ವೇಳೆ ಭೂ ಕುಸಿತದಲ್ಲಿ ಇನ್ಯಾರಾದರೂ ಸಾವನ್ನಪ್ಪಿದ್ದರೆ ಅವರಿಗೂ 5 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುವುದು.ಭೂ ಕುಸಿತದಿಂದ ಮರಣ ಹೊಂದಿದವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ. ನಾವು ಕೊಡುವ ಪರಿಹಾರದಿಂದ ಅವರ ಜೀವ ಮರಳಿ ಬರುವುದಿಲ್ಲ. ಪ್ರಕೃತಿ ವಿಕೋಪದಿಂದಾಗಿರುವ ಘಟನೆ ಇದು. ಸಾಧ್ಯವಾದಷ್ಟು ಅವರನ್ನು ಉಳಿಸುವ ಪ್ರಯತ್ನ ಮಾಡಲಾಗುವುದು. ಇಲ್ಲದಿದ್ದರೆ ಅವರ ಮೃತ ದೇಹವನ್ನು ಪತ್ತೆಹಚ್ಚುವ ಕೆಲಸ ಮಾಡಲಾಗುವುದು.ಉಳುವರೆ ಎಂಬ ಗ್ರಾಮದಲ್ಲಿ ಮಳೆಯಿಂದಾಗಿ ಏಳು ಮನೆಗಳು ಹಾನಿಯಾಗಿವೆ. ಕೂಡಲೇ ಪರಿಹಾರ ನೀಡಲಾಗುವುದು ಹಾಗೂ ಪರ್ಯಾಯ ಸ್ಥಳವನ್ನೂ ನೀಡಲಾಗುವುದು.
ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ : ಇನ್ನು ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ಗುಡ್ಡ ಕುಸಿದಿರುವ ಆರೋಪ ಕೇಳಿಬಂದಿದ್ದು, ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳುತ್ತೇವೆ. ರಕ್ಷಣಾ ಕಾರ್ಯಾಚರಣೆ ಮುಕ್ತಾಯ ಬಳಿಕ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಕಂದಾಯ ಸಚಿವ ಕೃಷ್ಣಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕ ಸತೀಶ್ ಸೈಲ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್, ಶಾಲಿನಿ ರಜನೀಶ್ ಸೇರಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು.
ನಿರಂತರ ಧಾರಾಕಾರ ಮಳೆಯಲ್ಲೂ ಕೂಡ 5ನೇದಿನದ ಕಾರ್ಯಾಚರಣೆ ಮುಂದುವರೆದಿದೆ. ಬೆಳಗಾವಿಯಿಂದ ಮಿಲಿಟರಿ ಪಡೆ ಕೂಡ ನೆರವಿಗೆ ಆಗಮಿಸಿದೆ.