Connect with us

    DAKSHINA KANNADA

    ‘ಕ್ಲಾಸ್ ಆನ್ ವ್ಹೀಲ್ಸ್’ ಡಿಜಿಟಲ್ ಕಂಪ್ಯೂಟರ್ ಸಾಕ್ಷರತಾ ಬಸ್‌ ಲೋಕಾರ್ಪಣೆ, ಎಂಫ್ರೆಂಡ್ಸ್‌ನಿಂದ ಸರಕಾರಕ್ಕೆ ಪ್ರೇರಣೆ: ಸ್ಪೀಕರ್ ಖಾದರ್

    ಮಂಗಳೂರು: ಡಿಜಿಟಲ್ ಬಸ್ ಮೂಲಕ ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಒದಗಿಸುವ ‘ಕ್ಲಾಸ್ ಆನ್ ವ್ಹೀಲ್ಸ್’ ಡಿಜಿಟಲ್ ಕಂಪ್ಯೂಟರ್ ಸಾಕ್ಷರತಾ ಬಸ್ ಯೋಜನೆ ಸರಕಾರಕ್ಕೂ ಪ್ರೇರಣಾದಾಯಕ ಎಂದು ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದರು.

    ನಗರದ ಜೆಪ್ಪು ಸೈಂಟ್ ಜೋಸೆಫ್ಸ್ ಸೆಮಿನರಿ ಬಳಿಯ ಮರಿಯ ಜಯಂತಿ ಹಾಲ್‌ನಲ್ಲಿ ಶನಿವಾರ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ದಶಮಾನೋತ್ಸವದ ನಿಮಿತ್ತ ‘ಕ್ಲಾಸ್ ಆನ್ ವ್ಹೀಲ್ಸ್’ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ಸಾಕ್ಷರತೆಯ ಡಿಜಿಟಲ್ ಬಸ್‌ಗೆ ಹಸಿರು ನಿಶಾನೆ ನೀಡಿ ಅವರು ಮಾತನಾಡಿದರು.

    ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪದವಿ ಶಿಕ್ಷಣ ಪಡೆದು ಕಂಪ್ಯೂಟರ್ ಜ್ಞಾನ ಇಲ್ಲದವರು ಅನಕ್ಷರಸ್ಥರಾಗಿಯೇ ಗುರುತಿಸಿಕೊಳ್ಳಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಶಾಲಾ ಅಂಗಳದಲ್ಲಿಯೇ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಒದಗಿಸುವುದು ಕ್ರಾಂತಿಕಾರಿ ಯೋಜನೆ ಎಂದು ಅವರು ಹೇಳಿದರು.

    ಕಾರುಣ್ಯ ಯೋಜನೆಯ ಮೂಲಕ ಗುರುತಿಸಿಕೊಂಡಿರುವ ಎಂಫ್ರೆಂಡ್ಸ್ ಸಂಸ್ಥೆಯು ಇದೀಗ ಕಂಪ್ಯೂಟರ್ ಶಿಕ್ಷಣದತ್ತ ಹೆಜ್ಜೆ ಇಡುವ ಮೂಲಕ ಶಿಕ್ಷಣ ಹಾಗೂ ಆರೋಗ್ಯದ ಮೂಲಕ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.

    ಸಭಾ ಕಾರ್ಯಕ್ರಮದ ಸಂದರ್ಭ ಎಂಫ್ರೆಂಡ್ಸ್‌ನ ಡಿಜಿಟಲ್ ಬಸ್ ಯೋಜನೆಯ ಕುರಿತಾದ ಸಾಕ್ಷ್ಯ ಚಿತ್ರಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ಜ್ಞಾನ ಅತೀ ಅಗತ್ಯವಾಗಿದ್ದು, ಎಂಫ್ರೆಂಡ್ಸ್‌ನಿಂದ ನಡೆಸಲಾಗುತ್ತಿರುವ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ಎಲ್ಲರಿಗೂ ಪ್ರೇರಣೆ ನೀಡುವಂತದ್ದು ಎಂದರು.

    ಎಂಫ್ರೆಂಡ್ಸ್ ಅಧ್ಯಕ್ಷ ಮುಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್ ಆರ್., ರೋಹನ್ ಕಾರ್ಪೊರೇಶನ್‌ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ, ಉದ್ಯಮಿಗಳಾದ ಮುಹಮ್ಮದ್ ಅಲಿ ಉಚ್ಚಿಲ್, ಅಬ್ದುಲ್ ರವೂಫ್ ಸುಲ್ತಾನ್ ಗೋಲ್ಡ್, ಅಬ್ಬಾಸ್ ಉಚ್ಚಿಲ್, ಮೋಹನ್ ಬೆಂಗ್ರೆ, ಫ್ರಾನ್ಸಿಸ್ ಡೋರಿಸ್, ಅಬ್ದುಲ್ಲಾ ಮೋನು, ಉಮರ್ ಫಾರೂಕ್ ಜುಬೈಲ್, ಎಸ್.ಎಂ.ರಶೀದ್ ಮತ್ತಿತರರು ಉಪಸ್ಥಿತರಿದ್ದರು.

    ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಡಿಜಿಟಲ್‌ ಕಂಪ್ಯೂಟರ್ ಬಸ್‌ಗೆ ರೂಪು ನೀಡಿರುವ ರಾಡ್ರಿಕ್ಸ್ ಕಂಪನಿಯ ಮಾಲೀಕ ನವೀನ್ ರಾಡ್ರಿಕ್ಸ್ ಅವರನ್ನು ಈ ಸಂದರ್ಭ ಗೌರವಿಸಲಾಯಿತು.

    ಎಂಫ್ರೆಂಡ್ಸ್‌ನ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.

    ವೈಫೈನೊಂದಿಗೆ ಹೈಫೈ ಕಂಪ್ಯೂಟರ್ ಬಸ್..!

    ಏಕಕಾಲದಲ್ಲಿ 16 ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣವನ್ನು ಪಡೆಯಬಹುದಾಗ ಕ್ಲಾಸ್ ಆನ್ ವ್ಹೀಲ್ಸ್ ಡಿಜಿಟಲ್ ಬಸ್ ವೈಫ್‌ನೊಂದಿಗೆ ಹೈಫೈ ಸೌಲಭ್ಯ ಹೊಂದಿದೆ.

    ಕ್ಲಾಸ್‌ರೂಂ ವ್ಯವಸ್ಥೆ, ಡೆಸ್ಕ್, ಚೇರ್, ಕಾನ್ಫರೆನ್ಸ್ ಪ್ರಾಜೆಕ್ಟರ್, ಮೈಕ್, ಎಲ್‌ಇಡಿ ಡಿಜಿಟಲ್ ಬೋರ್ಡ್, ಕಲರ್ ಪ್ರಿಂಟರ್, ಶಿಕ್ಷಕರು ವಿದ್ಯಾರ್ಥಿಗಳ ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ ಹೊಂದಿರುವ ಬಸ್‌ನಲ್ಲಿ ಕುಡಿಯುವ ನೀರು, ವಾಶ್ ಬೇಸಿನ್ ಸೌಲಭ್ಯವನ್ನೂ ಅಳವಡಿಸಲಾಗಿದೆ.


    ಎಂಫ್ರೆಂಡ್ಸ್ ಸದಸ್ಯ, ಯುಎಇಯಲ್ಲಿರುವ ಹನೀಫ್ ಪುತ್ತೂರು ಅವರಿಗೆ ದೊರೆತ ಬಹುಮಾನ ಮೊತ್ತ 50 ಲಕ್ಷ ರೂ. ಈ ಬಸ್‌ಗಾಗಿ ನೀಡಿದ್ದಾರೆ. ಅದರ ಜತೆ ಎಂ. ಫ್ರೆಂಡ್ಸ್ ತಮ್ಮ ದಾನಿಗಳ ಮೂಲಕ ಕ್ರೋಡೀಕರಿಸಿ 10 ಲಕ್ಷ ರೂ. ಮೊತ್ತ ಸೇರಿಸಿ 60 ಲಕ್ಷ ರೂ. ವೆಚ್ಚದಲ್ಲಿ ಈ ಡಿಜಿಟಲ್ ಕಂಪ್ಯೂಟರ್ ಸಾಕ್ಷರತಾ ಬಸ್ ರೂಪಿಸಿದೆ. ಆರಂಭದಲ್ಲಿ ಹನೀಫ್ ಪುತ್ತೂರು ಅವರು ಪ್ರಾಥಮಿಕ ಶಿಕ್ಷಣ ಪಡೆದ ಪುತ್ತೂರಿನ ಕುಂಜೂರು ಪಂಜದ ಸರಕಾರಿ ಹಿ.ಪ್ರಾ. ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣವನ್ನು ಒದಗಿಸಲಿದೆ. ಬಳಿಕ ಪುತ್ತೂರು ತಾಲೂಕಿನ ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಒದಗಿಸಲಿದೆ. ವಿದ್ಯಾರ್ಥಿಗಳಿಗೆ ತಲಾ 15 ಗಂಟೆಗಳ ಕಂಪ್ಯೂಟರ್ ಶಿಕ್ಷಣ ಒದಗಿಸಿ ಅವರಿಗೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಇಬ್ಬರು ಶಿಕ್ಷಕರು, ವಾಹನ ಚಾಲಕ ಹಾಗೂ ಕ್ಲೀನರ್ ಕೂಡಾ ಪ್ರತಿನಿತ್ಯ ಈ ಬಸ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply