ಬಂಟ್ವಾಳದಲ್ಲಿ ಹನಿಟ್ರಾಪ್ ಮೂಲಕ ಅಶ್ಲೀಲ ವಿಡಿಯೋ ತಯಾರಿಸಿ ಹಣಕ್ಕಾಗಿ ಬೆದರಿಕೆ

ಮಂಗಳೂರು ಜೂನ್ 28: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹನಿಟ್ರಾಪ್ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, ಬಂಟ್ವಾಳ ನಿವಾಸಿಯೊಬ್ಬರನ್ನು ಹನಿ ಟ್ರಾಪ್ ಮಾಡಿ ಅಶ್ಲೀಲ ವಿಡಿಯೋ ಮಾಡಿ ಹಣಕ್ಕಾಗಿ ಬೆದರಿಕೆ ಒಡ್ಡಿದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳದ ಲೊರೆಟ್ಟು ಟಿಪ್ಪು ನಗರ ನಿವಾಸಿ 55 ವರ್ಷದ ಮೋನು ಯಾನೆ ಅಬ್ದುಲ್ ರಹಿಮಾನ್ ಅವರು ಹನಿಟ್ರಾಪ್ ಗೆ ಒಳಗಾದ ಸಂತ್ರಸ್ಥರಾಗಿದ್ದು, ಈವರಿಗೆ 8 ತಿಂಗಳ ಹಿಂದೆ ವಾಯ್ಸ್ ಮೆಸೇಜ್ ಮೂಲಕ ಒರ್ವ ಹುಡುಗಿಯ ಪರಿಚಯವಾಗಿದ್ದು. ಪರಿಚಯವಾದ ಕೆಲವು ದಿನಗಳ ನಂತರ ಆ ಹುಡುಗಿಯನ್ನು ಮಂಗಳೂರಿನ ಲಾಡ್ಜ್ ಒಂದರಲ್ಲಿ ರಹಿಮಾನ್ ಭೇಟಿಯಾಗಿದ್ದು ಆ ಸಮಯ ಅವರಲ್ಲಿ ದೈಹಿಕ ಸಂಪರ್ಕ ನಡೆದಿದೆ. ಈ ಸಂದರ್ಭದಲ್ಲಿ ಆ ಅಶ್ಲೀಲ ವಿಡಿಯೋವನ್ನು ಹುಡುಗಿಯು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

ಈ ಘಟನೆ ನಡೆದ ಕೆಲವು ದಿನಗಳ ನಂತರ ರಹಿಮಾನ್ ಗೆ ಅಪರಿಚಿತ ವ್ಯಕ್ತಿಯೋರ್ವ ಈ ಅಶ್ಲೀಲ ವಿಡಿಯೋವನ್ನು ಕಳುಹಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ರಹಿಮಾನ್ ಹುಡುಗಿಯಲ್ಲಿ ವಿಚಾರಿಸಿದ ಸಂದರ್ಭ, ಆಕೆ ತನ್ನ ಮೊಬೈಲ್ ರಿಪೇರಿಗೆ ಕೊಟ್ಟ ಸಮಯ ಬೇರೆಯವರಿಗೆ ದೊರಕಿದೆ ಎಂದು ತಿಳಿಸಿದ್ದಾಳೆ.

ಆದರೆ ಆ ವಿಡಿಯೋವನ್ನು ಪಡೆದ ವ್ಯಕ್ತಿ ವಿಡಿಯೋವನ್ನು ಬಳಸಿ ರಹಿಮಾನ್ ಗೆ ನಿರಂತರವಾಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೆ ರಹಿಮಾನ್ ಹಣ ಕೊಡಲು ಒಪ್ಪದಿದ್ದಾಗ ಬಂಟ್ವಾಳದಲ್ಲಿ 04 ಜನ ಅಪರಿಚಿತರು ರಹಿಮಾನ್ ನ್ನು ಅಪಹರಿಸಿ ಅವರ ಬಳಿಯಿದ್ದ 60,000 ರೂಪಾಯಿಗಳನ್ನು ಮತ್ತು ಪರ್ಸನ್ನು ಬಲವಂತವಾಗಿ ಕಿತ್ತುಕೊಂಡು ATM ಕಾರ್ಡ್ ನ್ನು ಬಳಸಿ 9,000 ರೂ ಗಳನ್ನು ಪಡೆದಿದ್ದಾರೆ. ಅಲ್ಲದೆ ರಹಿಮಾನ್ ನನ್ನು ಬೆದರಿಸಿ ಅದೇ ದಿನ 48,000 ರೂ ಗಳನ್ನು ಆರೋಪಿಗಳು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಅಲ್ಲದೆ ಆ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರ ಮಾಡಿ ಹಣಕ್ಕಾಗಿ ನಿರಂತರ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ 27.06.2019 ರಂದು ಕಲಂ 363, 323, 504, 392, 383, 506 ಜೊತೆಗೆ 34 ಐ.ಪಿ.ಸಿ ಮತ್ತು 66E & 67A ಐ.ಟಿ ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.

Facebook Comments

comments