KUNDAPURA
ಸ್ನೇಕ್ ಮಾಸ್ಟರ್ ಮೇಲೆ ಹಾವು ದಾಳಿ, ಕೈಗೆ ಕಡಿದ ದೊಡ್ಡ ಹಾವು
ಉಡುಪಿ, ಸೆಪ್ಟೆಂಬರ್ 03 : ಕುಂದಾಪುರ ತಲ್ಲೂರಿನ ಕೋಟೆಬಾಗಿಲು ಪಾರ್ತಿಕಟ್ಟೆಯ ಬಳಿಯ ಮನೆಯೊಂದರಲ್ಲಿ ಬೃಹತ್ ಗಾತ್ರದ ಹಾವನ್ನು ಹಿಡಿಯಲೆತ್ನಿಸಿದ ಸ್ನೇಕ್ ಮಾಸ್ಟರರಿಗೆ ಹಾವು ಕಡಿದ ಘಟನೆ ಸಂಭವಿಸಿದೆ. ಇಲ್ಲಿನ ಸ್ನೇಕ್ ಮಾಸ್ಟರ್ ಜೋಸೆಫ್ ಲೂವಿಸ್ ಅವರೇ ಹಾವು ಕಡಿಸಿಕೊಂಡ ವ್ಯಕ್ತಿಯಾಗಿದ್ದಾರೆ. ಜೋಸೆಫ್ ಅವರ ಬಲಗೈಗೆ ಹಾವು ಕಡಿದಿದ್ದು ಹಾವಿನ ಸಮೇತ ಅವರು ಆಸ್ಪತ್ರೆಗೆ ತೆರಳಿದ್ದಾರೆ.
ಘಟನೆಯ ವಿವರ :
ಕುಂದಾಪುರ ತಾಲೂಕಿನ ತಲ್ಲೂರಿನ ಪಾರ್ತಿಕಟ್ಟೆಯ ನಿವಾಸಿಯೋರ್ವರ ಮನೆಯ ಹಿತ್ತಲಲ್ಲಿ ಕೊಳಕು ಮಂಡಲ ಹಾವು(ಕುದ್ರಾಳ) ಕಾಣಿಸಿಕೊಂಡಿದೆ. ಹಾವು ಕಂಡು ಮನೆಯವರು ಹೆಮ್ಮಾಡಿಯ ಸ್ನೇಕ್ ಮಾಸ್ಟರ್ ಎಂದೇ ಖ್ಯಾತರಾದ ಜೋಸೆಫ್ ಲೂವಿಸ್‌ಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಸ್ಥಳಕ್ಕೆ ತೆರಳಿದ ಜೋಸೇಫ್ ಅವರು ಹಾವು ಹಿಡಿಯಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಹಾವು ತಪ್ಪಿಸಿಕೊಂಡು ಪೊದೆಯೊಳಗೆ ನುಗ್ಗಿದೆ.
ಹಾವಿನಿಂದ ದಾಳಿ:
ಹಾವು ಹಿಡಿಯಲು ಪೊದೆಗಳನ್ನು ಬಿಡಿಸುತ್ತಿರುವಾಗ, ಬೆದರಿದ ಹಾವು ಸ್ನೇಕ್ ಮಾಸ್ಟರ್ ಜೋಸೆಫ್ ಗೆ ದಾಳಿ ಮಾಡಿ ಅವರ ಬಲಗೈಗೆ ಕಡಿದಿದೆ. ಈ ಸಂದರ್ಭದಲ್ಲಿ ಕ್ಷಣ ಕಾಲ ದಿಗ್ಬ್ರಾಂತರಾದ ಜೋಸೆಫ್ ಕೈಗೊಂದು ಬಟ್ಟೆಯ ಪಟ್ಟಿಕಟ್ಟಿ ಕೊಂಡು ಹರಸಾಹಸಪಟ್ಟು ಹಾವನ್ನು ಹಿಡಿದಿದ್ದಾರೆ. ಕೂಡಲೇ ಹಿಡಿದ ಬೃಹದಾಕಾರದ ಹಾವಿನೊಂದಿಗೆ ಸ್ಥಳೀಯರ ಸಹಕಾರದಿಂದ ಕುಂದಾಪುರ ಆಸ್ಪತ್ರೆಗೆ ಧಾವಿಸಿದ್ದಾರೆ. ಈ ಹಾವು ಹೆಬ್ಬಾವು ಎಂದು ಜೋಸೆಫ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ವಾಪಾಸ್ಸಾಗಿದ್ದಾರೆ.
ಅಪತ್ಬಾಂದವ ಸ್ನೇಕ್ ಮಾಸ್ತರ್:
ಸ್ನೇಕ್ ಮಾಸ್ಟರ್ ಎಂದೇ ಖ್ಯಾತರಾಗಿರುವ ಜೋಸೆಫ್ ಕೆಲವು ವರ್ಷಗಳಿಂದ ಹೆಮ್ಮಾಡಿಯಲ್ಲಿ ರಿಕ್ಷಾ ಚಾಲನೆ ಮಾಡುತ್ತಿದ್ದಾರೆ. ಈ ವೃತ್ತಿಯೊಂದಿಗೆ ಹಾವು ಹಿಡಿಯುವ ಕಲೆ ಕೂಡ ಕರಗತ ಮಾಡಿಕೊಂಡಿದ್ದಾರೆ. ಜೋಸೆಫ್ ತಾಲೂಕಿನಾದ್ಯಂತ ಮನೆಯೊಳಗೆ ಅವಿತು ಭೀತಿ ಹುಟ್ಟಿಸುತ್ತಿದ್ದ 2 ಸಾವಿರಕ್ಕೂ ಮಿಕ್ಕಿ ವಿಷಪೂರಿತ ಹಾವುಗಳನ್ನು ಹಿಡಿದು ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದಿಂದ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಕುಂದಾಪುರದ ಆಪತ್ಭಾಂದವರಾಗಿರುವ ಜೋಸೆಫ್ ಹೆಮ್ಮಾಡಿಯ ’ಸ್ನೇಕ್ ಮಾಸ್ಟರ್’ ಎಂದೇ ಖ್ಯಾತರು.