BANTWAL
ಬಂಟ್ವಾಳ – ಎರಡು ತಂಡಗಳ ನಡುವಿನ ಮನಸ್ತಾಪ – ಮೂವರಿಗೆ ಚೂರಿ ಇರಿತ
ಬಂಟ್ವಾಳ ಅಕ್ಟೋಬರ್ 27 : ಎರಡು ತಂಡಗಳ ನಡುವೆ ನಡೆದ ಸಣ್ಣ ಜಗಳ ಇದೀಗ ಚೂರಿ ಇರಿತದ ಹಂತದವರೆಗೂ ಹೋದ ಘಟನೆ ಬಂಟ್ವಾಳದ ಮೆಲ್ಕಾರ್ ನಲ್ಲಿ ನಡೆದಿದೆ. ಮೂವರ ಮೇಲೆ ಗುರುವಾರ ರಾತ್ರಿ ತಂಡವೊಂದು ದಾಳಿ ನಡೆಸಿದ ಚೂರಿ ಇರಿದು ಪರಾರಿಯಾಗಿದೆ. ಘಟನೆಯಿಂದ ಮೂವರು ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚೂರಿ ಇರಿತಕ್ಕೊಳಗಾದವರನ್ನು ಬೋಳಂಗಡಿ ನಿವಾಸಿಗಳಾದ ದೇವದಾಸ್, ಸಂದೀಪ್ ,ಶಂಕರ್ ಎಂದು ಗುರುತಿಸಲಾಗಿದೆ. ಬೋಳಂಗಡಿ ನಿವಾಸಿ ಶೋಧನ್, ಕಲ್ಲಡ್ಕ ನಿವಾಸಿ ಯತೀಶ್,ಮೆಲ್ಕಾರ್ ನಿವಾಸಿಗಳಾದ ಚೇತನ್,ಪ್ರಸನ್ನ,ಪ್ರದೀಪ್ ಮತ್ತು ಪ್ರಕಾಶ್ ಅವರ ತಂಡ ಸೇರಿಕೊಂಡು ಹಲ್ಲೆ ಮಾಡಿದ್ದಲ್ಲದೆ ಚೂರಿಯಿಂದ ಇರಿದಿದ್ದಾರೆ ಎಂದು ಅವರು ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬುಧವಾರ ರಾತ್ರಿ ಪಾಣೆಮಂಗಳೂರು ಶಾರದೋತ್ಸವ ಮೆರವಣಿಗೆ ವೇಳೆ ಎರಡು ತಂಡಗಳ ನಡುವೆ ನಡೆದ ಗಲಾಟೆ ಮುಂದುವರಿದ ಭಾಗವಾಗಿ ಗುರುವಾರ ರಾತ್ರಿ ಚೂರಿ ಇರಿತದವರೆಗೆ ಮುಂದುವರಿದಿದೆ. ಕೆಲವರ್ಷಗಳ ಹಿಂದೆ ಜೊತೆಯಾಗಿ ಹುಲಿ ವೇಷ ಹಾಕಿ ಶಾರದ ವಿಸರ್ಜನೆ ಮೆರವಣಿಗೆಯಲ್ಲಿ ಹೆಜ್ಜೆಯಾಕುತ್ತಿದ್ದ ಯುವಕರ ತಂಡ ಯಾವುದೋ ವಿಚಾರಕ್ಕೆ ಇಬ್ಬಾಗವಾಗಿದ್ದು,ಇದೀಗ ಎರಡು ತಂಡಗಳಾಗಿ ಹುಲಿ ವೇಷವನ್ನು ಹಾಕಲಾಗುತ್ತದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶಾರದ ವಿಸರ್ಜನೆ ವೇಳೆ ಮೆರವಣಿಗೆಯಲ್ಲಿ ಈ ಎರಡು ತಂಡಗಳ ನಡುವೆ ಗಲಾಟೆ ನಡೆದಿದ್ದು, ಮುಂದುವರಿದ ಭಾಗವಾಗಿ ನಿನ್ನೆ ಮೆಲ್ಕಾರ್ ಜಂಕ್ಷನ್ ಕಲ್ಲಿ ಒಂದು ತಂಡದ ಸದಸ್ಯರು ಬ್ಯಾನರ್ ತೆರವು ಮಾಡುತ್ತಿದ್ದ ವೇಳೆ ಇನ್ನೊಂದು ತಂಡ ಸ್ಥಳಕ್ಕೆ ಬಂದು ಹಲ್ಲೆ ನಡೆಸಿ,ಚೂರಿಯಿಂದ ಇರಿದು ಪರಾರಿಯಾಗಿದೆ. ಘಟನೆಯಿಂದ ಗಾಯಗೊಂಡ ಮೂವರನ್ನು ಆರಂಭದಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಓರ್ವನಿಗೆ ಗಂಭೀರ ಸ್ವರೂಪದ ಗಾಯವಾಗಿದ್ದರಿಂದ ಮೂವರನ್ನು ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.