KARNATAKA
ಅಂಕೋಲ – ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿತ್ತು 1.15 ಕೋಟಿ ಹಣ
ಕಾರವಾರ ಜನವರಿ 29: ಜನಸಂಚಾರ ಹೆಚ್ಚಾಗಿ ಇರದ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ 1.15 ಕೋಟಿ ಹಣ ಪತ್ತೆಯಾದ ಘಟನೆ ಅಂಕೋಲದ ರಾಮನಗುಳಿ ಬಳಿಯ ರಾಷ್ಟ್ರಿಯ ಹೆದ್ದಾರಿ 66ರಲ್ಲಿ ನಡೆದಿದೆ.
ಮಂಗಳವಾರ ಸಂಜೆಯಿಂದ ನಿರ್ಜನ ಪ್ರದೇಶದಲ್ಲಿ ಕಾರನ್ನು ಪಾರ್ಕ್ ಮಾಡಲಾಗಿತ್ತು. ಈ ಬಗ್ಗೆ ಅಂಕೋಲಾ ಪೊಲೀಸರಿಗೆ ಸಾರ್ವಜನಿಕರಿಂದ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿದಾಗ ಕಾರಿನಲ್ಲಿ ಕಬ್ಬಿಣದ ಬಾಕ್ಸ್ ನ ಲಾಕರ್ ಸಿಕ್ಕಿದೆ. ಅದನ್ನು ತೆರೆದು ನೋಡಿದಾಗ ಅದರಲ್ಲಿ 1.15 ಕೋಟಿ ಹಣ ಇರುವುದು ಕಂಡು ಬಂದಿದೆ.
ಕೆಎ 51 ಎಮ್‌ಬಿ 9634 ನಂಬರ್ ಪ್ಲೇಟಿನ ಕಾರು ಇದಾಗಿದೆ. ಕಾರಿನ ರಿಜಿಸ್ಟ್ರೇಷನ್ ನಂಬರ್ ಅನ್ನು ಪರಿಶೀಲಿಸಿದಾಗ ಆಲ್ಟ್ರೋಜ್ ಕಾರು ಎಂದು ತೋರಿಸಿದ್ದು, ಮಡಿಕೇರಿ ಆರ್‌ಟಿಓ ಪಾಸಿಂಗ್ ಹೊಂದಿದೆ. ಅಸಲಿಗೆ ಇದು ಕ್ರೇಟಾ ಕಾರಾಗಿದ್ದು, ಈ ಕಾರಿನ ಬಾನೆಟ್, ಡಿಕ್ಕಿ ತೆರೆದ ಸ್ಥಿತಿಯಲ್ಲಿದ್ದು, ಕಾರಿನ ಸೀಟ್ ಕಿತ್ತು ಹೊರಗೆ ಬಿದ್ದಿರುವ ಸ್ಥಿತಿಯಲ್ಲಿ ಹಾಗೂ ಕಿಟಕಿ ಗಾಜುಗಳು ಒಡೆದ ಸ್ಥಿತಿಯಲ್ಲಿರುವುದು ಕಂಡುಬಂದಿದೆ
ಕಾರಿನ ನಂಬರ್ ಪ್ಲೇಟ್ ಬೇರೆ ಇತ್ತು. ಒಳಗಡೆ ನಕಲಿ ನಂಬರ್ ಪ್ಲೇಟ್ ಗಳು ಪತ್ತೆಯಾಗಿದೆ. ಸದ್ರಿ ಕಾರಿನ ನಂಬರ್ ಕೆಎ19 ಎಂಪಿ 1036 ನೋಂದಣಿ ಸಂಖ್ಯೆಯದ್ದು ಮತ್ತು ಮಂಗಳೂರು ನಿವಾಸಿ ರಾಜೇಶ್ ಪವಾರ್ ಹೆಸರಿನ ವ್ಯಕ್ತಿಗೆ ಸೇರಿದ್ದು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಕಾರನ್ನು ಅಕ್ರಮ ವ್ಯವಹಾರಗಳಿಗೆ ಬಳಸುತ್ತಿದ್ದ ಬಗ್ಗೆ ಅನುಮಾನಗಳಿದ್ದು ಕಾರಿನ ಮಾಲೀಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಕಾರು ಹಾಗೂ ಅದರಲ್ಲಿದ್ದ ಹಣ ಯಾರಿಗೆ ಸೇರಿದ್ದು, ನಿರ್ಜನ ಪ್ರದೇಶದಲ್ಲಿ ಕಾರನ್ನು ತಂದು ನಿಲ್ಲಿಸಿದ್ದು ಏಕೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.