KARNATAKA
ಅಂಕೋಲಾ ಗುಡ್ಡ ಕುಸಿತ, ಮುಂದುವರೆದ ಪರಿಹಾರ ಕಾರ್ಯ, 6 ಮೃತದೇಹಗಳ ಪತ್ತೆ, ಸ್ಥಳದಲ್ಲೇ ಮೊಕ್ಕಾಂ ಹೂಡಿದ ಜಿಲ್ಲಾಡಳಿತ..!
ಅಂಕೋಲಾ : ನಿರಂತರ ಮಳೆ ಉತ್ತರ ಕನ್ನಡ ಕರಾವಳಿಯಲ್ಲಿ ಭಾರೀ ಅನಾಹುತ, ಅವಘಡಗಳ ಸರಮಾಲೆಯನ್ನೇ ಸೃಷ್ಟಿಸಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಭಾರಿ ಮಳೆಯ ಕಾರಣ ಅಂಕೋಲಾದಲ್ಲಿ ಮಂಗಳವಾರ ಸಂಭವಿಸಿದ್ದ ಗುಡ್ಡ ಕುಸಿತದ ಸ್ಥಳದಲ್ಲಿ ಬುಧವಾರವೂ ಪರಿಹಾರ ಕಾರ್ಯ ಮುಂದುವರೆದಿದೆ.
ಗುಡ್ಡದ ಅಡಿಯಲ್ಲಿ ಸಿಲುಕಿ ಒಂದೇ ಕುಟುಂಬದ ಐವರು ಹಾಗೂ ಟ್ಯಾಂಕರ್ ಮತ್ತು ಕಾರಿನಲ್ಲಿದ್ದ ನಾಲ್ವರು ಮತ್ತು ಉಳುವರೆಯಲ್ಲಿ ಓರ್ವ ಮಹಿಳೆ ಸೇರಿ 11 ಜನರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಮಣ್ಣಿನಡಿ ಸಿಲುಕಿದ್ದ 6 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಕಂದಾಯ, ಪೊಲೀಸ್, ಹೆದ್ದಾರಿಯ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಜನರ ಆಕ್ರಮಂದ ಮುಗಿಲು ಮುಟ್ಟಿದೆ,ಗುಡ್ಡ ಕುಸಿತದ ರಭಸಕ್ಕೆ ಅಪಾಯಕಾರಿ ಅನಿಲ ಇರುವ ಟ್ಯಾಂಕರ್ ಗಂಗಾವಳಿ ನದಿಗೆ ಕೊಚ್ಚಿ ಹೋಗಿದ್ದು, ಅನಿಲ ಸೋರಿಕೆಯಿಂದ ಅಪಾಯದ ಸಾಧ್ಯತೆಯನ್ನು ಮನಗಂಡು ನದಿ ತೀರದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ ಹಿನ್ನೆಲೆಯಲ್ಲಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಕಾರ್ಯ ನಡೆದಿದೆ. ಏತನ್ಮಧ್ಯೆ ಅಂಕೋಲ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತದ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.
ಗುಡ್ಡ ಕುಸಿತಕ್ಕೆ NHAI ‘ಅವೈಜ್ಞಾನಿಕ’ ಕಾಮಕಾರಿ ಕಾರಣ!
ಅಂಕೋಲಾ ತಾಲೂಕಿನ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಸಂಭವಿಸಿದ ಗುಡ್ಡ ಕುಸಿತಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆಸಿರುವ ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ರಾಜ್ಯ ಸರ್ಕಾರ ಆರೋಪಿಸಿದೆ.ವಿಧಾನಸಭಾ ಅಧಿವೇಶನದಲ್ಲಿ ಅಂಕೋಲ ಅಪಘಾತದ ಬಗ್ಗೆ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, ನದಿ ಹಾಗೂ ಗುಡ್ಡದ ನಡುವೆ ರಾಷ್ಟ್ರೀಯ ಹೆದ್ದಾರಿ ಇದ್ದು, ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಕೆಲವರು ಸಣ್ಣ ಮಟ್ಟದ ಕ್ಯಾಂಟೀನ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ಅಡುಗೆ ಅನಿಲ ಹೊತ್ತೊಯ್ಯುವ ಟ್ಯಾಂಕರ್ ಚಾಲಕರು ಟೀ ಕುಡಿಯಲು ವಾಹನ ನಿಲ್ಲಿಸಿದ್ದಾಗ ಅವಘಡ ಸಂಭವಿಸಿದೆ ಎಂದು ಹೇಳಿದರು.’
ಘಟನಾ ಸ್ಥಳ ತಲುಪಲು ಲಾರಿ ಏರಿದ ಡಿಸಿ, ಎಸ್‌ಪಿ, ಸಿಇಓ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ..!
ಗುಡ್ಡ ಕುಸಿತದಿಂದಾಗಿ ಸಾವಿಗೀಡಾದ ಸ್ಥಳಕ್ಕೆ ದೌಡಾಯಿಸಬೇಕಾಗಿದ್ದ ಡಿಸಿ ಲಕ್ಷ್ಮಿಪ್ರೀಯಾ, ಸಿಇಒ ಈಶ್ವರ್ ಕಾಂದೂ, ಎಸ್ಪಿ ನಾರಾಯಣ್ ಅವರಿಗೆ ಮಳೆಯ ಕಾರಣದಿಂದಾಗಿ ಸಂಪರ್ಕವೇ ಸಾಧ್ಯವಾಗಲಿಲ್ಲ.
ಈ ವೇಳೆಯಲ್ಲಿ ಸಾಹಸ ಮೆರೆದ ಅಧಿಕಾರಿಗಳು ಉಪಾಯ ಮಾಡಿ ಲಾರಿಯಲ್ಲಿ ಪ್ರಯಾಣ ಮಾಡಿ ಸ್ಥಳ ತಲುಪಬೇಕಾದ ಸ್ಥಿತಿ ನಿರ್ಮಾಣ ಆಯಿತು. ಅಧಿಕಾರಿಗಳ ಈ ಕಾರ್ಯ ವೈಖರಿಗೆ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.ಮಳೆಯ ಕಾರಣದಿಂದ ರಸ್ತೆ ಮೇಲೆ ನೀರು ಜಲಾವ್ರತ ಆಗಿರುವದರಿಂದ ವಾಹನ ಸಂಚಾರವೇ ಕಷ್ಟವಾಗಿತ್ತು. ಇದನ್ನು ಲೆಕ್ಕಿಸದೇ ಅಧಿಕಾರಿಗಳು, ಗುಡ್ಡ ಘಟನಾ ಸ್ಥಳದಲ್ಲಿ ಲಾರಿ ಮೂಲಕವೇ ಹೋಗಿ ತಲುಪಿದರು.