ಅಂಫಾನ್ ಚಂಡಮಾರುತ ಪ್ರಭಾವ ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಮಳೆ

ಪುತ್ತೂರು ಮೇ.5: ಬಂಗಾಳ ಕೊಲ್ಲಿಯ ಅಂಡಮಾನ್‌ ದ್ವೀಪದ ಬಳಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತವಾಗಿ ಪರಿವರ್ತನೆಗೊಂಡಿರುವ ಹಿನ್ನಲೆ ದಕ್ಷಿಣಕನ್ನಡದ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ.

 ಬಂಗಾಳ ಕೊಲ್ಲಿಯ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಗಳಿದ್ದು, ಅಂಫಾನ್‌ ಎಂದು ಹೆಸರಿಡಲಾಗಿದೆ. ವಾಯುಭಾರ ಕುಸಿತದಿಂದ ಬಂಗಾಳ ಕೊಲ್ಲಿಯ ಆಗ್ನೇಯ ಭಾಗ, ಅಂಡಮಾನ್‌, ನಿಕೋಬಾರ್‌ ದ್ವೀಪ ಹಾಗೂ ಭಾರತದ ಪಶ್ಚಿಮ ಕರಾವಳಿಯಲ್ಲಿ ಭಾರಿ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಈ ಹಿನ್ನಲೆ ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ, ಇಂದು ಕೂಡ ಸಂಜೆಯಿಂದಲೇ ಸುಳ್ಯ, ಕಡಬ ತಾಲೂಕಿನ ವಿವಿಧೆಡೆ ಗುಡುಗು, ಮಿಂಚಿನ ಆರ್ಭಟದೊಂದಿಗೆ ಬಿರುಗಾಳಿ ಸಹಿತ ಮಳೆಯಾಗಿದೆ. ಕಡಬ, ಮರ್ಧಾಳ, ಬಿಳಿನೆಲೆ, ಪಂಜ, ನೆಲ್ಯಾಡಿ, ಇಚಿಲಂಪಾಡಿ, ‌ಆಲಂಕಾರು, ಆತೂರು ಪರಿಸರದಲ್ಲಿ ಭಾರೀ ಗಾಳಿ ಬೀಸಿದ್ದು, ಹಲವೆಡೆ ಬಾರೀ ಪ್ರಮಾಣದ ಕೃಷಿ ಹಾನಿಯಾಗಿರುವ ಸಂಭವವಿದೆ. ಹಾನಿಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಸುಬ್ರಹ್ಮಣ್ಯದಲ್ಲಿ ಗುಡುಗು ಮಿಶ್ರಿತ ಮಳೆಯಾಗಿದೆ.