ಮೇ 16 ರಿಂದ ಆಗುಂಬೆ ಘಾಟ್ ಲಘು ವಾಹನ ಸಂಚಾರಕ್ಕೆ ಮುಕ್ತ

ಉಡುಪಿ ಮೇ 14: ಕಳೆದ ಮಳೆಗಾಲದಲ್ಲಿ ಕುಸಿದಿರುವ ಆಗುಂಬೆ ಘಾಟಿ ರಸ್ತೆ ದುರಸ್ಥಿ ಸಂಪೂರ್ಣವಾದ ಹಿನ್ನಲೆಯಲ್ಲಿ ಘಾಟ್ ನಲ್ಲಿ ಮೇ 16 ರಿಂದ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಲೆನಾಡು ಕರಾವಳಿಯ ಮೂರು ಜಿಲ್ಲೆಗಳನ್ನು ಸಂಪರ್ಕಿಸುವ ಶಿವಮೊಗ್ಗ – ಉಡುಪಿ ರಾಷ್ಟ್ರೀಯ ಹೆದ್ದಾರಿ 169ಎ ಆಗುಂಭೆ ಘಾಟಿ ದುರಸ್ತಿ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿಂದ ಬಂದ್‌ ಆಗಿತ್ತು.

ಉಡುಪಿ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯ ಆಗುಂಬೆ ಘಾಟಿ 14 ಮತ್ತು 7ನೇ ತಿರುವುಗಳಲ್ಲಿ ಕಳೆದ ಮಳೆಗಾಲದಲ್ಲಿ ಕುಸಿತ ಸಂಭವಿಸಿ ಸಂಚಾರ ಅಪಾಯಕಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಎಪ್ರಿಲ್ 1ರಿಂದ ಘಾಟಿ ರಸ್ತೆಯನ್ನು ಸಂಪೂರ್ಣವಾಗಿ ಬಂದ್‌ ಮಾಡಿ ದುರಸ್ತಿ ಕಾಮಗಾರಿ ನಡೆಸಲಾಗಿತ್ತು.

ಈಗ ಕಾಮಗಾರಿ ಸಂಪೂರ್ಣಗೊಂಡ ಹಿನ್ನಲೆಯಲ್ಲಿ ಮೇ 16 ರಿಂದ ಲಘು ವಾಹನಕ್ಕೆ ಅವಕಾಶ ಕಲ್ಪಿಸಲಾಗಿದೆ. ಲಘು ವಾಹನಗಳಾದ ಬಸ್‌, ಆ್ಯಂಬುಲೆನ್ಸ್‌, ಕಾರು, ದ್ವಿಚಕ್ರ ವಾಹನಗಳಿಗೆ ಮೇ 15ರ ಮಧ್ಯರಾತ್ರಿಯಿಂದ ಸಂಚಾರಕ್ಕೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಸರಕು ಸಾಗಾಟ ಮಾಡುವ ಘನ ವಾಹನಗಳಿಗೆ ಜೂನ್ 1ರಿಂದ ಸಂಚಾರ ಅವಕಾಶ ಕಲ್ಪಿಸಲಾಗಿದೆ.

ಆಗುಂಬೆ ಘಾಟಿಯ ಹೇರ್‌ಪಿನ್‌ 7ನೇ ತಿರುವು ಕಳೆದ ವರ್ಷ ಸುರಿದ ಮಳೆಯಲ್ಲಿ ಅತೀ ಹೆಚ್ಚು ಭೂಕುಸಿತಗೊಂಡ ಪ್ರದೇಶ. ಈ ಭಾಗದಲ್ಲಿ ಸಂಚಾರ ಅಪಾಯ ಎಂಬ ಕಾರಣಕ್ಕೆ ಆಗುಂಬೆ ಘಾಟಿ ಸಂಚಾರ ಬಂದ್‌ ಮಾಡಲಾಗಿತ್ತು. ಇಲ್ಲಿ ಈಗ ಕೇವಲ ತಾತ್ಕಾಲಿಕ ಮರಳು ಚೀಲಗಳನ್ನು ಅಳವಡಿಸಿರುವುದಷ್ಟೇ ಅಲ್ಲದೆ ಯಾವುದೇ ದುರಸ್ಥಿ ಕಾರ್ಯ ಕೈಗೊಂಡಿಲ್ಲ. ಮುಂದಿನ ಮಳೆಗಾಲದಲ್ಲಿ ಮತ್ತೆ ವಿಪರೀತ ಮಳೆ ಸುರಿದರೇ ಘಾಟಿ ಕುಸಿತಗೊಂಡು ಮತ್ತೆ ಸಂಚಾರ ಬಂದ್‌ ಆಗುವ ಭೀತಿ ಇದೆ.