ಮೀನಗಾರರ ನಾಪತ್ತೆ ಪ್ರಕರಣ ವರದಿ ನೀಡುವಂತೆ NHRC ಯಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೋಟಿಸ್

ಉಡುಪಿ ಮೇ 14: ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜದ ಮೀನುಗಾರಿಕಾ ದೋಣಿಯಲ್ಲಿದ್ದ 7 ಜನ ಮೀನುಗಾರರ ಪತ್ತೆಗೆ ಕೈಗೊಂಡಿರುವ ಕ್ರಮಗಳ ಕುರಿತು ವಿವರ ನೀಡುವಂತೆ ಸೂಚಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.

ಕಳೆದ ಡಿಸೆಂಬರ್ ನಲ್ಲಿ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ನ ಅವಶೇಷಗಳು ಇತ್ತೀಚೆಗೆ ಮಹಾರಾಷ್ಟ್ರದ ಸಿಂಧುದುರ್ಗದ ಬಳಿ ಸಮುದ್ರದಾಳದಲ್ಲಿ ಪತ್ತೆಯಾಗಿರುವ ಬಗ್ಗೆ ಭಾರತೀಯ ನೌಕಾ ಪಡೆ ಈಗಾಗಲೇ ಮಾಹಿತಿ ನೀಡಿದ್ದು, ಈ ಹಿನ್ನಲೆಯಲ್ಲಿ ಬಂದ ಮಾದ್ಯಮಗಳ ವರದಿಗಳನ್ನು ಆಧರಿಸಿ ಸ್ವಯಂಪ್ರೇರಣೆಯಿಂದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಕ್ಷಣಾ ಇಲಾಖೆಯ ಕಾರ್ಯದರ್ಶಿಯವರಿಗೆ ನೋಟಿಸ್ ನೀಡಿರುವ ಆಯೋಗ, ಆರು ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದೆ. `ಕಳೆದ ಡಿಸೆಂಬರ್ ತಿಂಗಳಲ್ಲಿ ದೋಣಿ ಕಣ್ಮರೆಯಾಗಿದ್ದ ಸ್ಥಳದ ಬಳಿಯೇ ಸಮುದ್ರದ ಮೇಲೆ ದೋಣಿಯಲ್ಲಿದ್ದ ಡಬ್ಬಿಯಂತಹ ವಸ್ತುವೊಂದು ಪತ್ತೆಯಾಗಿದ್ದಾಗಿ ನೌಕಾಪಡೆ ಸಿಬ್ಬಂದಿ ಬಹಳ ಮುಂಚೆಯೇ ತಿಳಿಸಿದ್ದರು.

ಆದರೂ ದೋಣಿಯ ಪತ್ತೆಗೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳದಿರುವುದು ಏಕೆ?’ ಎಂದು ರಕ್ಷಣಾ ಸಚಿವಾಲಯವನ್ನು ಪ್ರಶ್ನಿಸಿರುವ ಆಯೋಗ, ಕಾಣೆಯಾದ ಮೀನುಗಾರರ ಪತ್ತೆಗಾಗಿ ಮುಂದುವರಿಸಿರುವ ಕಾರ್ಯಾಚರಣೆ ವಿವರ ನೀಡುವಂತೆಯೂ ನಿರ್ದೇಶನ ನೀಡಿದೆ. ಮೀನುಗಾರರು ಕಾಣೆಯಾಗಿದ್ದರಿಂದ ತೀವ್ರ ಸಂಕಷ್ಟದಲ್ಲಿರುವ ಕುಟುಂಬ ಸದಸ್ಯರಿಗೆ ಪರಿಹಾರ ನೀಡಲಾಗಿದೆಯೇ ಎಂಬ ಕುರಿತು ವಿವರಿಸುವಂತೆ ರಾಜ್ಯ ಸರ್ಕಾರಕ್ಕೆ ಆಯೋಗ ಸೂಚಿಸಿದೆ.