Connect with us

    LATEST NEWS

    ಕೋಮು ದ್ವೇಷ ಕಾರುತ್ತಿದ್ದ ಜನರನ್ನು ಒಂದಾಗಿಸಿದ ಮಳೆ

    ಕೋಮು ದ್ವೇಷ ಕಾರುತ್ತಿದ್ದ ಜನರನ್ನು ಒಂದಾಗಿಸಿದ ಮಳೆ

    ಮಂಗಳೂರು ಮೇ 30: ಮಂಗಳೂರಿನಲ್ಲಿ ಸುರಿದ ಮಹಾ ಮಳೆ ಕೋಮುದ್ವೇಷಗಳಿಂದ ಬಡಿದಾಡಿಕೊಳ್ಳುತ್ತಿದ್ದ ಜನರನ್ನು ಒಂದಾಗಿಸಿದೆ. ಸದಾ ಕೋಮು ದ್ವೇಷ ಕಾರುತ್ತಿದ್ದ ಜನರನ್ನು ಈ ಮಳೆ ಒಂದಾಗಿಸಿದೆ.

    ಮಳೆಗೆ ಇಂದು ಬಿಡುವು ದೊರಕಿದ್ದರಿಂದ ಮಹಾಮಳೆಗಾದ ಅಪಾರ ನಷ್ಟದ ಸ್ಪಷ್ಟ ಚಿತ್ರಣ ದೊರಕ ತೊಡಗಿದೆ. ಈ ನಡುವೆ ಧರ್ಮ ,ಜಾತಿ ಮೀರಿದ ಅಪರೂಪದ ಸೋದರತ್ವ ಹಾಗು ಭಾವೈಕ್ಯತೆಯ ನಿದರ್ಶನಗಳು ಬೆಳಕಿಗೆ ಬರುತ್ತವೆ.

    ನಗರದ ದೈವಸ್ಥಾನವೊಂದಕ್ಕೆ ನುಗ್ಗಿದ ಕೃತಕ ನೆರೆಯ ನೀರನ್ನು ಮುಸ್ಲಿಂ ಭಾಂದವರು ಸ್ವಚ್ಚಗೊಳಿಸಿ ಕೋಮುಸೌಹಾರ್ದತೆಯನ್ನು ಮೆರೆದಿದ್ದಾರೆ.

    ನಿನ್ನೆ ಎಡೆಬಿಡದೆ ಸುರಿದ ಭಾರೀ ಮಳೆಗೆ ಮಂಗಳೂರಿನ ಹೆಚ್ಚಿನ ಪ್ರದೇಶ ಜಲಾವೃತಗೊಂಡಿತ್ತು. ನಗರದಲ್ಲಿ ಕಣ್ಣು ಹಾಯಿಸಿದಲ್ಲೇಲ್ಲಾ ನೀರೇ ನೀರು, ಇಂತಹ ಪರಿಸ್ಥಿತಿಯಲ್ಲಿ ಕಳೆದ ರಾತ್ರಿ ನಗರದ ಪಾಂಡೇಶ್ವರದಲ್ಲಿರುವ ಕೊರಗಜ್ಜನ ದೈವಸ್ಥಾನ ಬಳಿ‌ ಮಳೆ ನೀರು ತಂಬಿದ ಪರಿಣಾಮ ಪಕ್ಕದ ಡ್ರೈನೇಜ್ ನೀರು ದೈವಸ್ಥಾನಕ್ಕೆ ನುಗ್ಗಿತ್ತು. ಈ ಸಂದರ್ಭದಲ್ಲಿ ದೈವಸ್ಥನದ ರಕ್ಷಣೆಗೆ ಹಾಗು ಅದನ್ನು ಶುಚಿಗೊಳಿಸಲು ಟೊಂಕ ಕಟ್ಟಿದ್ದು ಸ್ಥಳೀಯ ಮುಸ್ಲಿಂ ಬಾಂಧವರು.

    ದೈವಸ್ಥಾನಕ್ಕೆ ಕೊಳಚೆ ನೀರು ನುಗ್ಗಿದ್ದನ್ನು ಗಮನಿಸಿದ ಸ್ಥಳೀಯರಾದ ಹಾಶಿರ್ ಮೊಯ್ದೀನ್, ರಮೀಝ್ , ಶಾಬಾಝ್, ಹಸ್ಸನ್ ಮತ್ತಿತರರು ದೈವಸ್ಥಾನಕ್ಕೆ ತೆರಳಿ ನೀರು ಹೊರಚೆಲ್ಲಿ ಶುಚಿಗೊಳಿಸಿದರು.

    ಇನ್ನೊಂದಡೆ ನೆರೆಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದ ಆರ್ ಎಸ್ ಎಸ್ ಸ್ವಯಂಸೇವಕರು ಮಂಗಳೂರಿನ ಆರ್ ಎಸ್ ಎಸ್ ಶಕ್ತಿ ಕೇಂದ್ರ ಎಂದೇ ಹೇಳಲಾಗುವ ಸಂಘನಿಕೇತನ ದಲ್ಲಿ ಆಶ್ರಯ ನೀಡಿದರು. ಮಹಾಮಳೆ ಯಿಂದ ನಲುಗಿ ಆಶ್ರಯ ಪಡೆದವರಿಗೆ ಊಟ ಹಾಗೂ ಹೊದಿಕೆಯ ವಿತರಿಸಿದರು.

    ಕೋಮುದ್ವೇಷದ ಜ್ವಾಲೆ ಹರಡುತ್ತಿದ್ದಂತೆ ಪರಸ್ಪರ ಧಾರ್ಮಿಕ ಕೇಂದ್ರಗಳಿಗೆ ಹಾನಿ ಎಸಗುವ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಕಾರ್ಯಗಳ ಮೂಲಕ ಕೋಮು ಸೌಹಾರ್ದತೆ ಉಳಿಸಲು ಪ್ರಯತ್ನಿಸುತ್ತಿರುವವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply