DAKSHINA KANNADA
ಕುದ್ರೋಳಿಯಲ್ಲಿ 900 ಕೆ.ಜಿ ಧವಸ ಧಾನ್ಯ ಮತ್ತು ಪುಷ್ಪಗಳಿಂದ ತಿರಂಗಾ ಕಲಾಕೃತಿ ರಚನೆ
ಮಂಗಳೂರು, ಆಗಸ್ಟ್ 14: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಪ್ರಾಂಗಣದಲ್ಲಿ ಧವಸಧಾನ್ಯ ಮತ್ತು ಪುಷ್ಪಗಳಿಂದ ತಯಾರಿಸಿದ ತಿರಂಗಾ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ.
ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರುವ ಹಿನ್ನೆಲೆಯಲ್ಲಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಮತ್ತು ಗುರುಬೆಳದಿಂಗಳು ಫೌಂಡೇಷನ್ ವತಿಯಿಂದ ಸುಮಾರು 900 ಕೆ.ಜಿ ಧವಸ ಧಾನ್ಯಗಳನ್ನು ಬಳಸಿ ತಿರಂಗಾದ ವಿನ್ಯಾಸವನ್ನು ವಿಶಿಷ್ಟವಾಗಿ ಮಾಡಲಾಗಿದೆ.
ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ರೂವಾರಿ ಹಾಗೂ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ತಿರಂಗಾವನ್ನು ಉದ್ಘಾಟಿಸಿ, ಧವಸಧಾನ್ಯಗಳಿಂದ ತಯಾರಿಸಿದ ತಿರಂಗಾ ಅದ್ಭುತವಾಗಿ ಮೂಡಿಬಂದಿದೆ ಎಂದರು. ಗುರು ಬೆಳದಿಂಗಳು ಫೌಂಡೇಷನ್‌ನ ಅಧ್ಯಕ್ಷ ಹಾಗೂ ಕುದ್ರೊಳಿ ಕ್ಷೇತ್ರದ ಕೋಶಾಧಿಕಾರಿ ಮಾತನಾಡಿ, ಯಾವುದೇ ರಾಸಾಯನಿಕ ಬಳಸದೆ, ತರಕಾರಿ, ಧವಸಧಾನ್ಯಗಳನ್ನು ಉಪಯೋಗಿಸಿ ಚಿತ್ರಾಕೃತಿ ರಚಿಸಲಾಗಿದೆ. ಕೇಸರಿ ಬಣ್ಣಕ್ಕಾಗಿ 300 ಕೆಜಿ ಕೆಂಪು ತೊಗರಿ, ಬಿಳಿ ಬಣ್ಣಕ್ಕಾಗಿ 300 ಕೆ.ಜಿ ಸಾಗು, ಹಸಿರು ಬಣ್ಣಕ್ಕಾಗಿ 300 ಕೆಜಿ ಹೆಸರುಕಾಳು ಬಳಸಲಾಗಿದೆ. ಜೊತೆಗೆ ಬೆಂಡೆಕಾಯಿ, ಮೂಲಂಗಿ,ಕ್ಯಾರೆಟ್ ಮುಂತಾದ 100 ಕೆಜಿಯಷ್ಟು ತರಕಾರಿಗಳನ್ನೂ ಜೋಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಕಲಾವಿದ ಪುನೀಕ್ ಶೆಟ್ಟಿ ನೇತೃತ್ವದಲ್ಲಿ ಗುರುಬೆಳದಿಂಗಳು ಸಮಿತಿಯ ಮೂವತ್ತು ಸದಸ್ಯರು ಮತ್ತು ಕ್ಷೇತ್ರದ ಸಿಬ್ಬಂದಿ ಸೇರಿ ಸತತ 18 ಗಂಟೆ ಸಮಯದಲ್ಲಿ ಈ ಕಲಾಕೃತಿ ರಚಿಸಿದ್ದಾರೆ. 38 ಅಡಿಯ ವೃತ್ತದಲ್ಲಿ ವಿಶಿಷ್ಟ ಕಲಾಕೃತಿ ಮೂಡಿಬಂದಿದೆ. ಕಲಾಕೃತಿ ಸುತ್ತ ಸುಮಾರು 54 ಕಳಶವಿಟ್ಟು ಹೂಗಳಿಂದ ಅಲಂಕರಿಸಲಾಗಿದೆ ಎಂದು ತಿಳಿಸಿದರು.
You must be logged in to post a comment Login