LATEST NEWS
4 ಕೆ.ಜಿ ಬಂಗಾರದ ಬಳೆಗಳ ದರೋಡೆ

4 ಕೆ.ಜಿ ಬಂಗಾರದ ಬಳೆಗಳ ದರೋಡೆ
ಉಡುಪಿ ಸೆಪ್ಟೆಂಬರ್ 18: ಮಾರಕಾಯುಧಗಳನ್ನು ತೋರಿಸಿ ವ್ಯಕ್ತಿಯೋರ್ವರನ್ನು ದರೋಡೆ ನಡೆಸಿದ ಘಟನೆ ಇಂದು ಮುಂಜಾನೆ ತಿರುವನಂತಪುರು-ಮುಂಬೈ ಮಧ್ಯೆ ಸಂಚರಿಸುವ ನೇತ್ರಾವತಿ ಎಕ್ಸ್ ಪ್ರಸ್ ರೈಲಿನಲ್ಲಿ ನಡೆದಿದೆ.
ಮುಂಬೈಯ ಆಭರಣ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ರಾಜೇಂದ್ರ ಸಿಂಗ್ ಎಂಬವರೇ ಆಗಂತುಕರಿಂದ ದರೋಡೆಯಾದ ವ್ಯಕ್ತಿಯಾಗಿದ್ದು, ದರೋಡೆಕೋರರು ಅವರ ಸೂಟ್ ಕೇಸ್ ನಲ್ಲಿದ್ದ 4.11 ಕೆ.ಜಿ ಬಂಗಾರದ ಬಳೆಗಳನ್ನು ದರೋಡೆಗೈದಿದ್ದಾರೆ.

ಮುಂಬೈಯಿಂದ ಹೊರಟ ರೈಲು ಇಂದು ಮುಂಜಾನೆ ಕಾಪು ಸಮೀಪಿಸಿದಾಗ ರಾಜೇಂದ್ರ ಸಿಂಗ್ ಇದ್ದ S-7 ಬೋಗಿಗೆ ನುಗ್ಗಿದ ದರೋಡೆಕೋರರು ಚಾಕು ಹಾಗೂ ಪಿಸ್ತೂಲು ತೋರಿಸಿ ಅವರನ್ನು ಕೊಲ್ಲುವ ಬೆದರಿಕೆಯೊಡ್ಡಿತ್ತು. ಬಳಿಕ ರಾಜೇಂದ್ರ ಸಿಂಗ್ ಅವರ ಬಳಿಯಿದ್ದ ಸೂಟ್ ಕೇಸನ್ನು ಕಸಿದು ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಳಿದು ಪರಾರಿಯಾಗಿದೆ.
ಈ ಸಂಬಂಧ ದರೋಡೆಗೊಳಗಾದ ರಾಜೇಂದ್ರ ಸಿಂಗ್ ಪಡುಬಿದ್ರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾರ್ಕಳ ಎಎಸ್ಪಿ ಹೃಷಿಕೇಶ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದ್ದು, ದರೋಡೆಕೋರರಿಗಾಗಿ ಬಲೆ ಬೀಸಲಾಗಿದೆ.