Connect with us

LATEST NEWS

ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ, ಅಭಿವೃದ್ಧಿ ಪಾತಾಳಕ್ಕೆ – ಶಾಸಕ ಕಾಮತ್

ಮಂಗಳೂರು ಎಪ್ರಿಲ್ 01: ಅಧಿಕಾರಕ್ಕೆ ಬರುವ ಮೊದಲು ತಿಂಗಳಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ರಾಜ್ಯದ ಜನರಿಗೆ ಆಶ್ವಾಸನೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಈಗ ದಿವಾಳಿಯಾಗಿರುವ ಪರಿಣಾಮ 10 ಕೆಜಿ ಬಿಡಿ, 5 ಕೆಜಿ ಅಕ್ಕಿಯನ್ನೂ ಕೊಡುತ್ತಿಲ್ಲ. ಜೊತೆಗೆ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿಯನ್ನೂ ಕೊಡಡೇ ರೇಷನ್ ಅಂಗಡಿಗಳ ಬಾಗಿಲಿಗೆ ನೋ ಸ್ಟಾಕ್ ಬೋರ್ಡ್ ಹಾಕಿದೆ. ಆದರೆ ಆಹಾರ ಸಚಿವರು ಅಕ್ಕಿ ಕೊರತೆ ಆಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ ರೇಷನ್ ಅಂಗಡಿಗಳಲ್ಲಿ ನೋ ಸ್ಟಾಕ್ ಬೋರ್ಡ್ ಯಾಕೆ? ಅಕ್ಕಿ ಸಿಗದೇ ಜನರು ಯಾಕೆ ವಾಪಾಸ್ ಹೋಗುತ್ತಿದ್ದಾರೆ? ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯಿಂದಾಗಿ ಬಡವರಿಗೆ ಸಿಗಬೇಕಾಗಿದ್ದ ಅಕ್ಕಿ ಅಕ್ರಮವಾಗಿ ಯಾರದ್ದೋ ಪಾಲಾಗುತ್ತಿದೆ. ಹೀಗೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿಯ ಬಗ್ಗೆ ವರದಿ ಮಾಡಲು ಹೋದ ಮಾಧ್ಯಮದವರ ಮೇಲೆಯೇ ಹಲ್ಲೆ ನಡೆಸಿದ ಘಟನೆಗಳು ವರದಿಯಾಗುತ್ತಿವೆ.


ದಕ್ಷಿಣ ಕನ್ನಡ ಜಿಲ್ಲೆಯ ಬಂದರಿನಲ್ಲಿ ಮೀನುಗಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು ಮೀನುಗಾರರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಂದರಿನ ಮೂರನೇ ಹಂತದ ಅಭಿವೃದ್ಧಿಗೆ ₹ 49.50 ಕೋಟಿ ಮಂಜೂರಾಗಿತ್ತು. ಆದರೆ ಸರ್ಕಾರ ಇದುವರೆಗೆ ಯಾವುದೇ ಕ್ರಮಕೈಗೊಳ್ಳದ ಕಾರಣ ದೆಹಲಿಯ ಗ್ರೀನ್ ಟ್ರಿಬುನಲ್ ರಾಜ್ಯಕ್ಕೆ ಮೂರು ಬಾರಿ ಛೀಮಾರಿ ಹಾಕಿದೆ. ಆದರೂ ಕಾಂಗ್ರೆಸ್ ಸರ್ಕಾರ ದಿನಕ್ಕೊಂದು ನೆಪ ಹೇಳುತ್ತಾ ಯೋಜನೆಯನ್ನೇ ಹಳ್ಳ ಹಿಡಿಸುತ್ತಿರುವುದು ಖಂಡನೀಯ.


ರಾಜ್ಯದ ಬಂದರುಗಳ ಲ್ಯಾಂಡ್ ರೆಂಟ್ ದರಗಳ ಹೆಚ್ಚಳದಿಂದಾಗಿ ಅನೇಕ ಸಮಸ್ಯೆಗಳು ಉಂಟಾಗಿದೆ. ಸದ್ಯ ಇಲ್ಲಿ 10 ಚ.ಮೀ ಗೆ 680/- ರೂ ವರೆಗೆ ಇದೆ. ಬಂದರುಗಳಲ್ಲಿನ ಲ್ಯಾಂಡ್ ಗಳನ್ನು ಲೀಸ್ ಗೆ ಕೊಡುವಂತಹ ಕ್ರಮ ಇದ್ದು, ಗ್ರೌಂಡ್ ರೆಂಟ್ ಹೆಚ್ಚಾದರೆ ಅಲ್ಲಿ ಹೊಸ ಪ್ರಾಜೆಕ್ಟ್ ಗೆ ಯಾರೂ ಸಹ ಮುಂದೆ ಬರುವುದಿಲ್ಲ. ಇದರಿಂದ ಮುಖ್ಯವಾಗಿ ಟೂರಿಸಂಗೆ ತೀವ್ರ ಹಿನ್ನಡೆಯಾಗಿದ್ದು ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಎಲ್ಲರನ್ನೂ ಹಲವು ಭಾರಿ ಭೇಟಿಯಾಗಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ.
ಇಲ್ಲಿಯವರೆಗೆ ಈ ಸರ್ಕಾರ ಹಾಲಿನ ದರವನ್ನು ₹9 ಏರಿಕೆ ಮಾಡಿದ್ದು ನಿಜವಾಗಿಯೂ ಹೈನುಗಾರಿಕೆಯನ್ನೇ ನಂಬಿರುವ ರೈತರಿಗೆ ದರ ಏರಿಕೆಯ ಲಾಭ ಹೋದರೆ ಯಾರೂ ವಿರೋಧ ಮಾಡುವುದಿಲ್ಲ. ಆದರೆ ಪ್ರತೀ ಬಾರಿಯೂ ರೈತರ ಹೆಸರಿನಲ್ಲಿ ಹಾಲಿನ ಬೆಲೆ ಏರಿಕೆ ಮಾಡಿ ಜನಸಾಮಾನ್ಯರನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ, ವಾಸ್ತವದಲ್ಲಿ ಹಾಲು ಉತ್ಪಾದಕರಿಗೆ ಸೇರಬೇಕಾಗಿದ್ದ 650 ಕೋಟಿಗೂ ಅಧಿಕ ಪ್ರೋತ್ಸಾಹ ಧನವನ್ನೇ ಇನ್ನೂ ಬಾಕಿ ಉಳಿಸಿಕೊಂಡಿದೆ. ರೈತರ ಹೆಸರಿನಲ್ಲಿ ಇವರು ನಮ್ಮನ್ನು ಲೂಟಿ ಮಾಡುತ್ತಿದ್ದಾರೆ ಎಂಬ ಭಾವನೆ ಜನಸಾಮಾನ್ಯರಲ್ಲಿ ದಟ್ಟವಾಗುತ್ತಿದ್ದು ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ವಿಶ್ವಾಸವನ್ನು ಕಳೆದುಕೊಂಡಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಗೃಹ ಬಳಕೆ ವಿದ್ಯುತ್‌ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿ ಜನರಿಗೆ ಶಾಕ್ ನೀಡಿದೆ. ಗೃಹ ಬಳಕೆ ವಿದ್ಯುತ್‌ನ ಪ್ರತಿ ಯೂನಿಟ್‌ ದರದಲ್ಲಿ 10 ಪೈಸೆ ಇಳಿಕೆ ಮಾಡಿದ್ದೇವೆ ಎನ್ನುವ ಇವರು, ಗ್ರಾಹಕರಿಗೆ ಮಂಜೂರಾದ ಪ್ರತಿ ಕೆ.ವಿಗೆ ₹25 ಏರಿಕೆ ಮಾಡಿದ್ದಾರೆ. ಒಂದು ಕಡೆ ಉಚಿತ ಕರೆಂಟ್ ಎನ್ನುತ್ತಾ, ಇನ್ನೊಂದು ಕಡೆ ಕರೆಂಟ್ ದರ ಹೆಚ್ಚಿಸುತ್ತಾ ಬಂದ ಕಾಂಗ್ರೆಸ್ ಸರ್ಕಾರದ ಮಹಾ ಮೋಸ ಇದೀಗ ಎಲ್ಲರಿಗೂ ಅರಿವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಇದುವರೆಗೂ ಯಾವುದೇ ಹೊಸ BPL ಕಾರ್ಡ್ ನೀಡಲು ಕ್ರಮವಹಿಸಿಲ್ಲ. ನಮ್ಮ ಜಿಲ್ಲೆಯಲ್ಲೇ ಸುಮಾರು ಸಾವಿರಾರು ಜನರು ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿ ಈವರೆಗೂ ಕಾಯುತ್ತಿದ್ದರೂ ಸರ್ಕಾರ ಜವಾಬ್ದಾರಿ ಮರೆತಿದೆ. BPL ಕಾರ್ಡ್ ನ ಎಲ್ಲಾ ಸಮಸ್ಯೆ ಬಗೆಹರಿದಿದೆ ಎಂದು ಹೇಳುವ ಸರ್ಕಾರಕ್ಕೆ ಕ್ಷೇತ್ರದ ತಳಮಟ್ಟದ ಅರಿವಿಲ್ಲ. ಆರೋಗ್ಯ ಸಂಬಂಧಿ ಖಾಯಿಲೆಗಳಿಂದ ಬಳಲುತ್ತಿರುವವರಂತೂ ಬಿಪಿಎಲ್ ಕಾರ್ಡ್ ಇಲ್ಲದೇ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ನಿಮ್ಮ ಗ್ಯಾರೆಂಟಿ ಯೋಜನೆಗಳೇ ನಮಗೆ ಬೇಡ, ದಯವಿಟ್ಟು ನಮಗೆ ಬಿಪಿಎಲ್ ಕಾರ್ಡ್ ಗಳನ್ನು ಕೊಡಿ, ಎಂದು ಮಾಧ್ಯಮಗಳ ಮುಂದೆ ಬಡ ಜನರೇ ಕಣ್ಣೀರು ಹಾಕಿರುವುದನ್ನು ಇಡೀ ರಾಜ್ಯವೇ ನೋಡಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಹುತೇಕ ಯೋಜನೆಗಳಿಗೆ ಅರ್ಹರಾಗಲು ಬಿಪಿಎಲ್ ಕಾರ್ಡ್ ಕಡ್ಡಾಯ. ಈಗ ಅಂತಹ ಬಿಪಿಎಲ್ ಕಾರ್ಡುಗಳನ್ನೇ ರದ್ದು ಮಾಡಿ ಸರ್ಕಾರ ಗ್ಯಾರಂಟಿ ಯೋಜನೆಯಿಂದ ಆಗುತ್ತಿದ್ದ ನಷ್ಟವನ್ನು ಸರಿದೂಗಿಸಿಕೊಳ್ಳಲು ಹೊರಟಿದೆ. ಈ ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಎಲ್ಲಾ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *