LATEST NEWS
ಮದ್ರಾಸ್ ಹೈಕೋರ್ಟ್ ಆದೇಶದ ಬೆನ್ನಲ್ಲೆ ಕೊಯಮತ್ತೂರು ಇಶಾ ಫೌಂಡೇಶನ್ ಮೇಲೆ ಪೊಲೀಸ್ ದಾಳಿ
ಕೊಯಮತ್ತೂರು ಅಕ್ಟೋಬರ್ 02: ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್ ಆಶ್ರಮದ ಮೇಲೆ ದಾಖಲಾಗಿರುವ ಪ್ರಕರಣದ ಹಿನ್ನಲೆ ಮದ್ರಾಸ್ ಹೈಕೋರ್ಟ್ ಪ್ರತಿಷ್ಠಾನದ ವಿರುದ್ಧ ದಾಖಲಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳ ವರದಿಯನ್ನು ಪರಿಶೀಲಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶದ ಬೆನ್ನಲ್ಲೇ 150 ಪೊಲೀಸರ ತಂಡ ದಿಢೀರ್ ದಾಳಿ ನಡೆಸಿದೆ.
ಈ ತನಿಖೆಯಲ್ಲಿ, ಆಶ್ರಮದ ಎಲ್ಲಾ ನಿವಾಸಿಗಳ ವಿವರವಾದ ಪರಿಶೀಲನೆ ಮತ್ತು ಕೊಠಡಿಗಳ ಹುಡುಕಾಟವನ್ನು ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಿವೃತ್ತ ಪ್ರಾಧ್ಯಾಪಕರಾದ ಡಾ. ಕಾಮರಾಜ್ ಅವರು, ತನ್ನ ಇಬ್ಬರು ಪುತ್ರಿಯರಾದ ಗೀತಾ ಕಾಮರಾಜ್ (42) ಮತ್ತು ಲತಾ ಕಾಮರಾಜ್ (39) ಅವರನ್ನು ಬಲವಂತವಾಗಿ ಫೌಂಡೇಶನ್‌ನಲ್ಲಿ ಇರಿಸಲಾಗಿತ್ತು ಎಂದು ಆರೋಪಿಸಿದ್ದರು. ಇಶಾ ಫೌಂಡೇಶನ್ ಜನರನ್ನು ಮಾನಸಿಕವಾಗಿ ನಿಯಂತ್ರಿಸಿ ಅವರನ್ನು ಸನ್ಯಾಸಿಗಳನ್ನಾಗಿ ಮಾಡಿ ಅವರ ಕುಟುಂಬದೊಂದಿಗೆ ಸಂಪರ್ಕವನ್ನು ಮುರಿದುಕೊಳ್ಳುವಂತೆ ಮಾಡುತ್ತಿದೆ ಎಂದು ಪ್ರಾಧ್ಯಾಪಕರು ಆರೋಪಿಸಿದ್ದಾರೆ.
ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ (ಸದ್ಗುರು) ಅವರ ಜೀವನದಲ್ಲಿ ಕಂಡುಬರುವ ವಿರೋಧಾಭಾಸಗಳ ಬಗ್ಗೆ ನ್ಯಾಯಾಲಯವು ಪ್ರಶ್ನೆಗಳನ್ನು ಎತ್ತಿತು. ನ್ಯಾಯಮೂರ್ತಿ ಎಸ್.ಎಂ. ಸುಬ್ರಮಣ್ಯಂ ಮತ್ತು ವಿ.ಶಿವಗಣನಂ ಅವರ ದ್ವಿಸದಸ್ಯ ಪೀಠ ತಮ್ಮ ಮಗಳಿಗೆ ಮದುವೆ ಮಾಡಿ ಸುಖಮಯ ಜೀವನ ನೀಡಿದ ಸದ್ಗುರುಗಳು ಇತರ ಯುವತಿಯರಿಗೆ ತಲೆ ಬೋಳಿಸಿಕೊಂಡು ತಪಸ್ಸಿನ ಜೀವನ ನಡೆಸುವಂತೆ ಪ್ರೇರೇಪಿಸುತ್ತಿರುವುದು ಏಕೆ? ಎಂದು ಪ್ರಶ್ನಿಸಿತ್ತು.
ಏತನ್ಮಧ್ಯೆ ಆಧ್ಯಾತ್ಮಿಕತೆ ಹಾಗೂ ಯೋಗದ ಬಗ್ಗೆ ತಿಳಿಸಿಕೊಡಲು, ಸಾಧನೆ ಮಾಡಲು ಸದ್ಗುರು ಅವರು ಇಶಾ ಫೌಂಡೇಷನ್ ಸ್ಥಾಪಿಸಿದ್ದಾರೆಯೇ ಹೊರತು ಯಾರನ್ನೂ ತಪ್ಪು ದಾರಿಗೆ ಎಳೆಯುತ್ತಿಲ್ಲ ಎಂದು ಫೌಂಡೇಷನ್ ಪ್ರತಿಕ್ರಿಯೆ ನೀಡಿದೆ. ಪೊಲೀಸರ ವಿಚಾರಣೆ ಬಗ್ಗೆ ಮಂಗಳವಾರ ರಾತ್ರಿಯೇ ಇಶಾ ಫೌಂಡೇಷನ್ ಈ ಪ್ರತಿಕ್ರಿಯೆ ಕೊಟ್ಟಿದೆ. ಯಾರನ್ನು ನಾವು ಮದುವೆಯಾಗಿ ಅಥವಾ ಸನ್ಯಾಸಿಗಳಾಗಿ ಎಂದು ಹೇಳುವುದಿಲ್ಲ. ವಯಸ್ಕ ವ್ಯಕ್ತಿಗಳು ಅವರ ದಾರಿ ಕಂಡುಕೊಳ್ಳಲು ಸ್ವತಂತ್ರರು. ಈಗ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಆ ಇಬ್ಬರು ಹೆಣ್ಣು ಮಕ್ಕಳು ತಮ್ಮ ಇಚ್ಚೆಯಂತೆಯೇ ನಿರ್ಧಾರ ಕೈಗೊಂಡು (ಸನ್ಯಾಸಿನಿ) ಆಶ್ರಮದಲ್ಲಿದ್ದಾರೆ ಎಂದು ಹೇಳಿದೆ. ಸತ್ಯ ಗೆಲ್ಲುತ್ತದೆ ಹಾಗೂ ಈಗ ಬಂದಿರುವ ಎಲ್ಲ ವಿವಾದಗಳಿಗೆ ಅಂತ್ಯವಿದೆ ಎಂದು ಇಶಾ ಫೌಂಡೇಷನ್ ಹೇಳಿದೆ.