LATEST NEWS
ಕಾಸ್ಮೆಟಿಕ್ ಸರ್ಜರಿ ವೇಳೆ ಯುವಕನ ಸಾವು – ಕಾಸ್ಮೆಟಿಕ್ ಕ್ಲಿನಿಕ್ ಗೆ ಬೀಗ

ಮಂಗಳೂರು, ಸೆಪ್ಟೆಂಬರ್ 26: ಕಾಸ್ಮೆಟಿಕ್ ಸರ್ಜರಿ ವೇಳೆ ಯುವಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಂಕನಾಡಿಯ ಬೆಂದೂರ್‌ವೆಲ್‌ನ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್‌ಪ್ಲೆಂಟ್ ಕ್ಲಿನಿಕ್‌ನ್ನು ಆರೋಗ್ಯ ಇಲಾಖೆ ಬಂದ್ ಮಾಡಿದೆ.
ಉಳ್ಳಾಲ ಅಕ್ಕರೆಕರೆ ನಿವಾಸಿ ಮೊಹಮ್ಮದ್ ಮಾಝಿನ್ (32) ಮೃತ ಯುವಕ. ತಮ್ಮ ಎದೆ ಭಾಗದಲ್ಲಿರುವ ಗಂಟಿನ ಸಮಸ್ಯೆ ಬಗ್ಗೆ ಸಲಹೆ ಪಡೆಯಲು ಬೆಂದೂರ್‌ವೆಲ್‌ನ ಕಾಸ್ಮೆಟಿಕ್ ಸರ್ಜರಿ ಕೇಂದ್ರವೊಂದಕ್ಕೆ ಬಂದಿದ್ದರು. ಶಸ್ತ್ರಚಿಕಿತ್ಸೆ ವೇಳೆ ಮಾಝಿನ್ ಆರೋಗ್ಯದಲ್ಲಿ ಏರುಪೇರಾಗಿದೆ. ಬೇರೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಾಝಿನ್ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದರು. ವೈದ್ಯರ ನಿರ್ಲಕ್ಷ್ಯದ ಬಗ್ಗೆ ಮಾಝಿನ್ ಕುಟುಂಬದವರು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಘಟನೆ ಬಳಿಕ ಬೆಂದೂರ್‌ವೆಲ್‌ನ ಆ ಕಾಸ್ಮೆಟಿಕ್ ಸರ್ಜರಿ ಕೇಂದ್ರವನ್ನು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮುಚ್ಚಿಸಿದ್ದಾರೆ. ಜಿಲ್ಲಾಧಿಕಾರಿ ಅವರು ಪ್ರಕರಣದ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ. ಕ್ಲಿನಿಕ್‌ನಲ್ಲಿ ಮೂಲಭೂತ ಸೌಕರ್ಯವಿಲ್ಲದಿರುವುದು ಆರೋಗ್ಯ ಅಧಿಕಾರಿಗಳ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಪ್ರಕರಣದ ಬಗ್ಗೆ ತನಿಖೆಗೆ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಪ್ರಕರಣದ ಬಗ್ಗೆ ಸಮಿತಿಯು ತನಿಖೆಗೆ ನಡೆಸಿ ವರದಿ ಯನ್ನು ಜಿಲ್ಲಾಧಿಕಾರಿಗೆ ಕಳುಹಿಸಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಮಾಹಿತಿ ನೀಡಿದ್ದಾರೆ