LATEST NEWS
ರಕ್ತಕಾರಿ ಸಾವು ಕಂಡಿದ್ದ ಯುವಕನಿಗೆ ಕೊರೊನಾ ; ಆತಂಕದಲ್ಲಿ ಜನ

ಆಸ್ಪತ್ರೆ ಸಿಬ್ಬಂದಿ ಕ್ವಾರಂಟೈನ್, ಸೀಲ್ ಡೌನ್ ಆಗುತ್ತಾ ಎಜೆ ?
ಮಂಗಳೂರು, ಜೂನ್ 14: ಎರಡು ದಿನಗಳ ಹಿಂದೆ ಕಿಡ್ನಿ ತೊಂದರೆಯಿಂದ ಮೃತಪಟ್ಟಿದ್ದ ಯುವಕನಿಗೆ ಕೊರೊನಾ ಇರುವುದು ದೃಢಪಟ್ಟಿದ್ದು ಈಗ ಆಸ್ಪತ್ರೆ ಸಿಬಂದಿ ಸೇರಿ ಹಲವರನ್ನು ಆತಂಕಕ್ಕೆ ಈಡುಮಾಡಿದೆ. ಮೇ 28ರಂದು ಮುಂಬೈನಿಂದ ಬಂದಿದ್ದ ಎಡಪದವಿನ 27 ವರ್ಷದ ಯುವಕ, ಕುಪ್ಪೆಪದವಿನಲ್ಲಿ ಸರಕಾರಿ ಶಾಲೆಯೊಂದರಲ್ಲಿ ಕ್ವಾರಂಟೈನ್ ಗೆ ಒಳಪಟ್ಟಿದ್ದ. ಏಳು ದಿನಗಳ ಸರಕಾರಿ ಕ್ವಾರಂಟೈನ್ ಅವಧಿಯ ಬಳಿಕ ಹೋಮ್ ಕ್ವಾರಂಟೈನ್ ಮಾಡುವಂತೆ ಯುವಕನನ್ನು ಮನೆಗೆ ಕಳಿಸಲಾಗಿತ್ತು.
ಮನೆಯಲ್ಲಿದ್ದ ಯುವಕ ಮೊನ್ನೆ ಬುಧವಾರಕ್ಕೆ ಏಳು ದಿನಗಳ ಹೋಮ್ ಕ್ವಾರಂಟೈನನ್ನೂ ಮುಗಿಸಿದ್ದ. ಇದಕ್ಕೂ ಮುನ್ನ ನಡೆಸಿದ್ದ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿದ್ದ ಕಾರಣ ಯುವಕನ ಮನೆಯವರು ನಿರಾಳರಾಗಿದ್ದರು. ಆದರೆ, ಜೂನ್ 11ರಂದು ರಾತ್ರಿ ಯುವಕನಿಗೆ ರಕ್ತವಾಂತಿಯಾಗಲು ತೊಡಗಿದ್ದು, ರಾತ್ರಿ ಇಡೀ ರಕ್ತ ಕಾರಿ ಬೆಳಗ್ಗಿನ ಹೊತ್ತಿಗೆ ಸೀರಿಯಸ್ ಆಗಿದ್ದ. ಬೆಳಗ್ಗೆ ನೆರೆಮನೆಯವರು ಸೇರಿ ಯುವಕನನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆತಂದಿದ್ದರು. ಆಸ್ಪತ್ರೆಯಲ್ಲಿ ದಾಖಲಾದ ಕೆಲವೇ ಹೊತ್ತಿನಲ್ಲಿ ಯುವಕ ಮೃತಪಟ್ಟಿದ್ದ. ಸಾವಿನ ಬಳಿಕ ಯುವಕನನ್ನು ಆಸ್ಪತ್ರೆಯವರು ಕೊರೊನಾ ಟೆಸ್ಟಿಗೆ ಒಳಪಡಿಸಿದ್ದಾರೆ. ಯುವಕನ ಸ್ವಾಬ್ ಟೆಸ್ಟ್ ವರದಿ ಎರಡು ದಿನಗಳ ಬಳಿಕ ಇಂದು (ಭಾನುವಾರ) ಬಂದಿದೆ. ವರದಿ ಪಾಸಿಟಿವ್ ಆಗಿದ್ದು ಆಸ್ಪತ್ರೆ ಸಿಬಂದಿ ಮತ್ತು ರೋಗಿಯನ್ನು ಕರೆತಂದಿದ್ದ ಪರಿಸರದವರನ್ನು ಆತಂಕಕ್ಕೆ ದೂಡಿದೆ.

ಯುವಕನಿಗೆ ಈ ಮೊದಲೇ ಮೂತ್ರಪಿಂಡದ ಕಾಯಿಲೆ ಇದ್ದುದರಿಂದ ವಿಶೇಷ ನಿಗಾ ವಹಿಸುವಂತೆ ಜಿಲ್ಲಾಡಳಿತ ತಿಳಿಸಿತ್ತು. ಆದರೆ, 14 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ಮೂರು ಬಾರಿ ಟೆಸ್ಟಿಗೆ ಒಳಪಡಿಸಬೇಕು. ಹೀಗೆ ಮೂರು ಬಾರಿ ಟೆಸ್ಟಿಂಗ್ ಆಗಿದೆಯಾ ಅನ್ನೋದು ಮನೆಯವರಿಗೆ ತಿಳಿದಿಲ್ಲ. ಕ್ವಾರಂಟೈನ್ ಅವಧಿ ಮುಗಿಸಿದ ಬಳಿಕ ಊರಿಡೀ ಸುತ್ತಾಡಿರುವ ಯುವಕನಿಂದ ಕೊರೊನಾ ಹಲವರಿಗೆ ತಗಲಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅಲ್ಲದೆ, ಕಿಡ್ನಿ ತೊಂದರೆಯಿಂದ ಸೀರಿಯಸ್ ಆಗಿ ಆಸ್ಪತ್ರೆಗೆ ಬಂದಿದ್ದ ವೇಳೆ ಪರೀಕ್ಷೆ ನಡೆಸಿದ್ದ ವೈದ್ಯರು ಮತ್ತು ನರ್ಸ್ ಗಳನ್ನೂ ಪ್ರಾಥಮಿಕ ಸಂಪರ್ಕದ ನೆಲೆಯಲ್ಲಿ ಕ್ವಾರಂಟೈನ್ ಮಾಡಬೇಕಾಗುತ್ತೆ. ರೋಗಿಯನ್ನು ಐಸಿಯುನಲ್ಲಿ ಇರಿಸಿದ್ದರೆ ಆ ಕೊಠಡಿಯನ್ನೂ ಸೀಲ್ ಡೌನ್ ಮಾಡಬೇಕಾಗುತ್ತದೆ. ಅಲ್ಲದೆ, ರೋಗಿ ರಕ್ತವಾಂತಿ ಮಾಡುತ್ತಿದ್ದಾಗ ನೆರೆಮನೆಯವರು ಬಂದು ಆರೈಕೆ ಮಾಡಿದ್ದಾರೆ. ಆಬಳಿಕ ಕಾರಿನಲ್ಲಿ ಕುಳ್ಳಿರಿಸಿ ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆತಂದಿದ್ದಾರೆ. ಹೀಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಿ ಕ್ವಾರಂಟೈನ್ ಮಾಡುವ ಅಗತ್ಯವಿದೆ. ಆತನ ಮನೆಯಲ್ಲಿದ್ದ ವೃದ್ಧ ಹೆತ್ತವರನ್ನು ಸಂಬಂಧಿಕರ ಮನೆಗೆ ಶಿಫ್ಟ್ ಮಾಡಲಾಗಿದೆಯಂತೆ. ಈಗ ಅವರಿಗೂ ಕೊರೊನಾ ಭೀತಿ ಎದುರಾಗಿದೆ.
ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೇರಿದ್ದ ಸೀಲ್ ಡೌನ್ ನಿಯಮವನ್ನು ಎಜೆ ಆಸ್ಪತ್ರೆಗೂ ಹೇರುವುದಾದಲ್ಲಿ ರೋಗಿಯನ್ನು ಹೊತ್ತೊಯ್ದಿದ್ದ ಪ್ರದೇಶ, ಇರಿಸಿದ್ದ ಕೊಠಡಿಗಳೆಲ್ಲ ಸೀಲ್ ಡೌನ್ ಆಗಬೇಕಾಗುತ್ತೆ. ಅಲ್ಲದೆ, ರೋಗಿಯನ್ನು ಇರಿಸಿದ್ದ ಶವಾಗಾರವೂ ಸೀಲ್ ಡೌನ್ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ಎಜೆ ಆಸ್ಪತ್ರೆಯ ಸಿಬಂದಿ ಮತ್ತು ಆತನ ನೇರ ಸಂಪರ್ಕಿತರೆಲ್ಲ ಕೊರೊನಾ ಆತಂಕಕ್ಕೆ ಒಳಗಾಗಿದ್ದಾರೆ. ಈ ನಡುವೆ, ಇಂಥ ಎಡವಟ್ಟಿಗೆ ಕಾರಣವಾಗಿದ್ದು ಜಿಲ್ಲಾಡಳಿತವೇ ಅನ್ನುವ ಶಂಕೆ ಜನರಲ್ಲಿದೆ. 14 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ಮೂರು ಬಾರಿ ಶಂಕಿತನನ್ನು ಪರೀಕ್ಷೆಗೆ ಒಳಪಡಿಸಬೇಕು. 12ನೇ ದಿನದ ಪರೀಕ್ಷೆಯಲ್ಲಿ ನೆಗೆಟಿವ್ ಆಗಿ ಹೊರಬಂದಿದ್ದಲ್ಲಿ ಕ್ವಾರಂಟೈನ್ ಅವಧಿ ಮುಗಿಸಿದ ಮರುದಿನವೇ ಪಾಸಿಟಿವ್ ಆಗಿದ್ದು ಹೇಗೆ ಎನ್ನುವ ಪ್ರಶ್ನೆ ಎದುರಾಗಿದೆ. ಮೊದಲೇ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಯುವಕನನ್ನು ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದ್ದೇ ಈಗ ಜನರನ್ನು ಭೀತಿಗೆ ಒಳಗಾಗುವಂತೆ ಮಾಡಿದೆ ಎನ್ನುವುದರಲ್ಲಿ ಸಂಶಯವಿಲ್ಲ.