Connect with us

  FILM

  ನನ್ನ ಹುಟ್ಟುಹಬ್ಬ ಯಾಕೆ ಬರುತ್ತೋ ಅಂತ ಭಯವಾಗುತ್ತಿದೆ – ರಾಕಿಂಗ್ ಸ್ಟಾರ್ ಯಶ್

  ಗದಗ ಜನವರಿ 08: ನನ್ನ ಹುಟ್ಟುಹಬ್ಬ ಯಾಕೆ ಬರುತ್ತೋ ಅಂತ ಭಯವಾಗುತ್ತಿದೆ. ಯಾರೂ ಈ ರೀತಿ ಮಾಡಬೇಡಿ ಎಂದು ಕೆಜಿಎಫ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟುವಾಗ ಕರೆಂಟ್ ಶಾಕ್ ಹೊಡೆದು ಮೂವರು ಮೃತಪಟ್ಟಿದ್ದು ಈ ಹಿನ್ನೆಲೆಯಲ್ಲಿ ಗದಗ ಸೂರಣಗಿ ಗ್ರಾಮಕ್ಕೆ ತೆರಳಿದ ಯಶ್ ಮೃತರ ಮನೆಗೆ ತೆರಳಿ ಸಾಂತ್ವನ ಹೇಳಿದರು.


  ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಯಶ್, ನನ್ನ ಹುಟ್ಟುಹಬ್ಬ ಯಾಕೆ ಬರುತ್ತೋ ಅಂತ ಭಯವಾಗುತ್ತಿದೆ. ಯಾರೂ ಈ ರೀತಿ ಮಾಡಬೇಡಿ. ಬರ್ತಡೇ ಮಾಡಬೇಡಿ ಎಂದು ಹೇಳಿದರೆ, ಬೇಸರ ಮಾಡಿಕೊಳ್ಳುತ್ತಾರೆ. ನೀವು ಬ್ಯಾನರ್, ಕಟೌಟ್ ಹಾಕುವುದನ್ನು ನಾನು ಇಷ್ಟಪಡುವುದಿಲ್ಲ. ನನ್ನ ಮೇಲೆ ಪ್ರೀತಿ ಇದ್ದರೆ ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂದು ಹೇಳಿದ್ದು, ಮನೆ ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬಸ್ಥರಿಗೆ ಏನು ನೆರವು ಬೇಕೋ ಅದನ್ನು ಮಾಡುತ್ತೇನೆ ಎಂದು ಹೇಳಿದರು.
  ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಕಳೆದ ರಾತ್ರಿ ಕಟೌಟ್ ಕಟ್ಟುವಾಗ ವಿದ್ಯುತ್​ ಶಾಕ್​ನಿಂದ ಅಭಿಮಾನಿಗಳಾದ ಹನುಮಂತ ಹರಿಜನ (21), ಮುರಳಿ ನಡವಿನಮನಿ (20) ಮತ್ತು ನವೀನ್ (19) ಮೃತಪಟ್ಟಿದ್ದು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

  ಸೂರಣಗಿ ಗ್ರಾಮಕ್ಕೆ ಜನಸಾಗರ ಹರಿದು ಬಂದಿದೆ. ಯಶ್​ ಅವರ ಆಗಮನದ ಹಿನ್ನೆಲೆಯಲ್ಲಿ‌ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ಅಕ್ಕಪಕ್ಕದ ಗ್ರಾಮಸ್ಥರು ಯಶ್ ಅವರನ್ನು ನೋಡಲು ಆಗಮಿಸಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಹಾಸಪಟ್ಟಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply