MANGALORE
ಯಕ್ಷಗಾನದಿಂದ ನಿವೃತ್ತಿ ಹಿಂಪಡೆದ ಕಲಾವಿದರು
ಯಕ್ಷಗಾನದಿಂದ ನಿವೃತ್ತಿ ಹಿಂಪಡೆದ ಕಲಾವಿದರು
ಮಂಗಳೂರು ಅಕ್ಟೋಬರ್ 03: ಯಕ್ಷಗಾನ ಪ್ರದರ್ಶನದ ವೇಳೆ ಲಿಪ್ ಲಾಕ್ ಪ್ರಕರಣ ವಿವಾದ ಈಗ ಸುಖಾಂತ್ಯಗೊಂಡಿದೆ. ಯಕ್ಷಗಾನ ಪ್ರಸಂಗದ ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಕಲಾವಿದರ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು.
ಈ ವಿವಾದದ ಕುರಿತು ಕಲಾವಿದರು ವಿವರಣೆ ನೀಡಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಕಲಾವಿದರ ವಿರುದ್ಧ ವೈಯಕ್ತಿಕ ಟೀಕೆಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಕಲಾವಿದರಾದ ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಹಾಗೂ ರಾಜೇಶ್ ರೈ ಅಡ್ಕ ಯಕ್ಷಗಾನ ಕ್ಷೇತ್ರದಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದರು.
ಆದರೆ ಈ ನಡುವೆ ಅಭಿಮಾನಿಗಳು, ಹಿತೈಷಿಗಳು ಹಾಗೂ ಹಿರಿಯ ಯಕ್ಷಗಾನ ಕಲಾವಿದರ ಒತ್ತಾಯಕ್ಕೆ ಮಣಿದು ಈ ಹಿಂದಿನ ನಿರ್ಧಾರದಿಂದ ಹಿಂದೆ ಸರಿದು ಮತ್ತೆ ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರಿಯಲು ಕಲಾವಿದರು ನಿರ್ಧರಿಸಿದ್ದಾರೆ. ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಲಾವಿದರಾದ ರಾಜೇಶ್ ರೈ ಅಡ್ಕ ಹಾಗೂ ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಇತ್ತೀಚೆಗೆ ಪ್ರದರ್ಶಿಸಿದ ನಾಟ್ಯ ವೈಭವ ಕಾರ್ಯಕ್ರಮವೊಂದರ ಕುರಿತು ನಾವು ಮಾಡದ ತಪ್ಪನ್ನು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪೆಂದು ಬಿಂಬಿಸುತ್ತಾ ಬಹಳಷ್ಟು ಪ್ರತಿಕ್ರಿಯೆಗಳನ್ನು ಹರಿಬಿಡಲಾಗಿತ್ತು.
ಈ ಪ್ರಸಂಗದ ಸನ್ನಿವೇಶದ ಕುರಿತು ವಿವರಣೆ ಈಗಾಗಲೇ ನೀಡಿದ್ದೇವೆ ಒಂದು ವೇಳೆ ನೋಡುಗರ ಕಣ್ಣಿಗೆ ತಪ್ಪಾಗಿ ಕಂಡರೆ ಅದಕ್ಕೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಿದ್ದೆವು . ಇಷ್ಟಾದರೂ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ತೇಜೋವಧೆ ಮುಂದುವರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಯಕ್ಷಗಾನ ಕ್ಷೇತ್ರದಿಂದ ನಿವೃತ್ತಿ ಪಡೆಯಲು ನಾವು ತೀರ್ಮಾನಿಸಿದ್ದೇವು ಎಂದು ಹೇಳಿದರು.
ಆದರೆ ಈ ನಡುವೆ ಯಕ್ಷಾಭಿಮಾನಿಗಳ ಹಿತೈಷಿಗಳು ಹಾಗೂ ಹಿರಿಯ ಯಕ್ಷಗಾನ ಕಲಾವಿದರು ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರೆಯುವಂತೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಮತ್ತೆ ಯಕ್ಷಗಾನ ಕ್ಷೇತ್ರಕ್ಕೆ ಮರಳಲು ನಿರ್ಧರಿಸಿರುವುದಾಗಿ ಅವರು ತಿಳಿಸಿದರು .
You must be logged in to post a comment Login