ಮಂಗಳೂರು ಜುಲೈ 15: ವ್ಯಕ್ತಿಯೊಬ್ಬರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷ ಮತ್ತು ಸುಳ್ಳು ಆರೋಪಗಳನ್ನು ಪ್ರಚಾರ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಸುರತ್ಕಲ್ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ,

ಬಂಧಿತನನ್ನು ರಾಮ್ ಪ್ರಸಾದ್ @ ಪೋಚ (42) ಎಂದು ಗುರುತಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿ, ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಭಾಗಿಯಾಗಿ ಪ್ರಸಕ್ತ ಉಡುಪಿ ಜಿಲ್ಲಾ ಕಾರಾಗೃಹದಲ್ಲಿರುವ ಸುರತ್ಕಲ್ ಕೋಡಿಕೆರೆ ನಿವಾಸಿ ಲೋಕೇಶ್ ಎಂಬಾತನನ್ನು ಬಾಡಿ ವಾರೆಂಟ್ ಪಡೆದು ಸುರತ್ಕಲ್ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೂರುದಾರ ರಾಜೇಶ್ ಎಂಬವರು ಹೊಸಬೆಟ್ಟು ಸುರತ್ಕಲ್ ನಲ್ಲಿ RV Enterprises ಎಂಬ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದು, ವಾಟ್ಸಪ್ ಗ್ರೂಪ್ ಗಳಲ್ಲಿ ಯಾರೋ ದುಷ್ಕರ್ಮಿಗಳು ಹಿಂದೂ ಜನರಲ್ಲಿ ದೂರುದಾರರ ವಿರುದ್ದ ಕೋಮು ದ್ವೇಷ ಹರಡಿಸುವ ಪ್ರಯತ್ನಪಟ್ಟಿದ್ದಾರೆ. ದೂರುದಾರ ಸುಮಾರು 20 ಕ್ಕೂ ಅಧಿಕ ಯುವತಿಯರನ್ನು ಮತಾಂತರ ಮಾಡಿರುತ್ತಾರೆ ಅಲ್ಲದೇ ಪಿರ್ಯಾದಿದಾರರು ಬ್ಲೂ ಫಿಲಂ ಸಿಡಿ ಮಾರಾಟ ಮಾಡಿ ಸಿಕ್ಕಿಹಾಕಿಕೊಂಡಿರುತ್ತಾರೆ. ಅಲ್ಲದೇ ಅವರ ಕಚೇರಿಯಲ್ಲಿರುವ ಯುವತಿಯರನ್ನು ಮತಾಂತರ ಮಾಡಿರುತ್ತಾರೆ ಹಾಗೂ 24 ವರ್ಷ ಪ್ರಾಯದ ಹಿಂದೂ ಯುವತಿಯನ್ನು ಪಿರ್ಯಾದಿದಾರರು ತನ್ನ ತಮ್ಮನಿಗೆ ಮದುವೆ ಮಾಡಲು ಸಿದ್ದತೆ ನಡೆಸಿದ್ದಾರೆ ,
ಅಲ್ಲದೇ ಆ ಹಿಂದೂ ಯುವತಿ ಹಣೆಗೆ ಕುಂಕುಮ ಹಾಕುವುದನ್ನು ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿರುತ್ತಾಳೆ ಬದಲಿಗೆ ಚರ್ಚ್ ಗೆ ಪ್ರಾರ್ಥನೆಗೆ ತಪ್ಪದೇ ಹಾಜರಾಗುತ್ತಿರುತ್ತಾಳೆ ಎಂದು ಪಿರ್ಯಾದಿದಾರರ ಬಗ್ಗೆ ಇಲ್ಲಸಲ್ಲದ ಸುಳ್ಳು ಆರೋಪವನ್ನು ಮಾಡಿ ಪಿರ್ಯಾದಿದಾರರ ವಿರುದ್ದ ಕೋಮುದ್ವೇಷ ಸಂದೇಶಗಳನ್ನು ವಾಟ್ಸಪ್ ಗ್ರೂಪ್ ಗಳಲ್ಲಿ ಹರಿಬಿಟ್ಟಿದ್ದಾರೆ.
ಈ ಹಿನ್ನಲೆ ರಾಜೇಶ್ ಅವರು ಆರೋಪಿಗಳ ಮೇಲೆ ಸೂಕ್ತ ಕಾನೂನುಕ್ರಮ ಜರುಗಿಸಲು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ರವರ ನೇತೃತ್ವ ತಂಡ ಆರೋಪಿಯನ್ನು ಅರೆಸ್ಟ್ ಮಾಡಿದೆ.