LATEST NEWS
ನಿರ್ಗತಿಕ ಮಹಿಳೆಗೆ ಆಸರೆ ನೀಡಲು ನಿರಾಕರಿಸಿದ ಉಡುಪಿ ಮಹಿಳಾ ನಿಲಯ

ಉಡುಪಿ ಅಗಸ್ಟ್ 9: ಬೆಂಗಳೂರಿನಿಂದ ಬಂದ ನಿರ್ಗತಿಕ ಮಹಿಳೆಯನ್ನು ಉಡುಪಿ ಮಹಿಳಾ ನಿಲಯ ರಕ್ಷಣೆ ನೀಡದ ವಾಪಾಸ್ ಕಳುಹಿಸಿದ ಘಟನೆ ನಡೆದಿದೆ. ಮಹಿಳೆಯರ ರಕ್ಷಣೆಗೆಂದು ಮಾಡಿದ ಈ ಸ್ಟೇಟ್ ಹೋಮ್ ಈಗ ಮಾನವೀಯತೆಯನ್ನು ಕಳೆದುಕೊಂಡು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾದಾಗಿದೆ.
ಭುವನೇಶ್ವರಿ (35)ಎಂಬ ಮಹಿಳೆ ಬೆಂಗಳೂರಿನ ಮನೆ ಬಿಟ್ಟು ಉಡುಪಿಗೆ ಆಗಮಿಸಿದ್ದು, ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದೆ. ಈ ನಡುವೆ ಈ ಮಹಿಳೆ ಮಳೆ ಗಾಳಿಗೆ ಬಸ್ ನಿಲ್ದಾಣದಲ್ಲೇ ತಂಗಿದ್ದರು. ಈ ಅಸಹಾಯಕ ಮಹಿಳೆಯ ನೆರವಿಗೆ ಬಂದ ಸಮಾಜ ಸೇವಕ ವಿಶು ಶೆಟ್ಟಿ ಆಗಮಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆ ಒಬ್ಬಂಟಿ ಮಹಿಳೆಯನ್ನು ಮಹಿಳೆಯನ್ನು ಮಹಿಳಾ ನಿಲಯಕ್ಕೆ ಕಳುಹಿಸಲು ಪೊಲೀಸ್ ಇಲಾಖೆ ಮುಂದಾಗಿತ್ತು. ಅಸಹಾಯಕ ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಕಟ್ಟಲಾಗಿರುವ ಮಹಿಳಾ ನಿಲಯವೇ ಈ ಮಹಿಳೆಗೆ ಆಶ್ರಯ ನೀಡಲು ನಿರಾಕರಿಸಿತು.

ಕೊರೊನಾ ವರದಿ ತರದೇ ಸೇರಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದ ಮಹಿಳಾ ನಿಲಯದ ಅಧಿಕಾರಿಗಳು , ಕೊನೆಗೆ ಕೊರೊನಾ ರಾಪಿಡ್ ಟೆಸ್ಟ್ ವರದಿ ನೆಗೆಟಿವ್ ಬಂದಿದ್ದರೂ ಆಶ್ರಯ ಕೊಡಲು ಅಧಿಕಾರಿಗಳು ನಿರಾಕರಿಸಿದರು. ಪೊಲೀಸರು ಮತ್ತು ವೈದ್ಯರ ಮನವಿಗೂ ಅಧಿಕಾರಿಗಳು ಡೋಂಟ್ ಕೇರ್ ಎಂದು ಕೊರೊನಾ ಹೆಸರಲ್ಲಿ ಮಾನವೀಯತೆಯನ್ನೇ ಮರೆತಿದ್ದರು. ಕೊನೆಗೆ ಒಂಟಿ ಮಹಿಳೆಯನ್ನು ದಾರಿ ಮೇಲೆ ಬಿಡಲಾಗದೆ ಅತಂತ್ರ ಸ್ಥಿತಿಗೆ ಸಿಲುಕಿದ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ , ಖಾಸಗಿ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಿದ್ದಾರೆ, ಕೊರೊನ ಲಿಖಿತ ವರದಿ ಬರುವವರೆಗೂ ಆಸ್ಪತ್ರೆಯಲ್ಲಿ ಉಳಿಯಲು ವ್ಯವಸ್ಥೆ ಮಾಡಿದ್ದಾರೆ.
ಮಹಿಳೆಯರ ರಕ್ಷಣೆಗೆಂದು ಇರುವ ಉಡುಪಿ ಮಹಿಳಾ ನಿಲಯವೇ ಒಬ್ಬಂಟಿ ಮಹಿಳೆಯ ರಕ್ಷಣೆಗೆ ನಿರಾಕರಿಸಿರುವುದು ವಿಪರ್ಯಾಸವಾಗಿದೆ. ಕೊರೊನಾ ಬಂದ ನಂತರ ಜನರಲ್ಲಿ ಮಾನವೀಯತೆ ಸಂಪೂರ್ಣ ಮಾಯವಾಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ.