LATEST NEWS
ಹಾಲಿ ಶಾಸಕರು ಮಾಧ್ಯಮ ಸಂಸ್ಥೆಗಳಿಗೆ ತಡೆಯಾಜ್ಞೆ ತಂದಿದ್ದು ಏಕೆ…..!!

ಮಂಗಳೂರು ಎಪ್ರಿಲ್ 22: ಮಂಗಳೂರು ದಕ್ಷಿಣದ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಮಾಧ್ಯಮಗಳ ವಿರುದ್ದ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ತಂದಿರುವ ತಡೆಯಾಜ್ಞೆ ಕುರಿತಂತೆ ಕಾಂಗ್ರೇಸ್ ವ್ಯಂಗ್ಯವಾಡಿದ್ದು, ಈ ತಡೆಯಾಜ್ಞೆ ಏಕೆ ಎಂಬುದನ್ನು ಹಾಲಿ ಶಾಸಕ ವೇದವ್ಯಾಸ್ ಕಾಮತ್ ಕ್ಷೇತ್ರದ ಮತದಾರರಿಗೆ ತಿಳಿಸಬೇಕು ಎಂದು ಕೆಪಿಸಿಸಿ ವಕ್ತಾರ ಎ ಸಿ ವಿನಯರಾಜ್ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದೆ. ಶಾಸಕರಾದ ಉಮಾನಾಥ ಕೋಟ್ಯಾನ್ ಮತ್ತು ಸಂಜೀವ ಮಠಂದೂರು ಮತ್ತು ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಏಕೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಅವರು ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಭಯ ಪಡಬೇಕೇ? ಎಂದರು.

ಇನ್ನು ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಮಾಧ್ಯಮದ ವಿರುದ್ಧ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ಯಾಕೆ ಎಂದು ವೇದವ್ಯಾಸರು ಜನತೆ ಮತ್ತು ಮತದಾರರಿಗೆ ಉತ್ತರಿಸಬೇಕು. ಯಾವುದೇ ಕಾಂಗ್ರೆಸ್ ನಾಯಕರು ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿಲ್ಲ. ರಾಜಕೀಯ ಪ್ರತಿನಿಧಿಗಳು ಒಳ್ಳೆಯ ಗುಣ ಹೊಂದಿರಬೇಕು. ತಪ್ಪು ಮಾಡದಿದ್ದರೆ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.