LATEST NEWS
ವಯನಾಡಿನ ಈ ವೈರಲ್ ಪೋಟೋ ಹಿಂದಿನ ಕಥೆ ಏನು ಗೊತ್ತಾ…..?
ಕೇರಳ ಅಗಸ್ಟ್ 3: ಕೇರಳದ ವಯನಾಡಿನಲ್ಲಿ ನಡೆದ ಭೀಕರ ಭೂಕುಸಿತದಿಂದಾಗಿ ನೂರಾರು ಜನ ಸಾವನಪ್ಪಿದ್ದಾರೆ. ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎನ್ನುವ ಲೆಕ್ಕ ಇನ್ನೂ ಸರಕಾರದ ಹತ್ತಿರ ಇಲ್ಲ. ಈ ನಡುವ ಬದುಕುಳಿದವರ ರಕ್ಷಣೆ ಮಾಡುತ್ತಿರುವ ಸೇನೆ, ಎನ್ ಡಿಆರ್ ಎಫ್ ಜೊತೆ ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅಧಿಕಾರಿಯೊಬ್ಬರು ಪುಟ್ಟ ಮಗುವನ್ನು ಹಿಡಿದುಕೊಂಡಿರುವ ಪೋಟೋ ವೈರಲ್ ಆಗಿದೆ. ಇದರ ಹಿಂದಿನ ಕಥೆ ಏನು ಗೊತ್ತಾ…
ಕಲ್ಪೆಟ್ಟಾ ರೇಂಜ್ ಫಾರೆಸ್ಟ್ ಆಫೀಸರ್ ಕೆ.ಹಶಿಸ್ ನೇತೃತ್ವದ ನಾಲ್ಕು ಜನರ ತಂಡ ಕೈಗೊಂಡ ಒಂದರಿಂದ ನಾಲ್ಕು ವರ್ಷದೊಳಗಿನ ಪುಟಾಣಿ ಮಕ್ಕಳು ಇರುವ ಬುಡಕಟ್ಟು ಕುಟುಂಬವನ್ನು ರಕ್ಷಣೆ ಮಾಡಲು ಕಾಡಿನೊಳಗೆ ಅಪಾಯಕಾರಿಯಾದ ಚಾರಣ ಕೈಗೊಂಡಿದ್ದರು. ವಯನಾಡ್‌ನ ಪನಿಯಾ ಸಮುದಾಯಕ್ಕೆ ಸೇರಿದ ಕುಟುಂಬವು ಆಳವಾದ ಕಮರಿಯ ಮೇಲಿರುವ ಬೆಟ್ಟದ ಮೇಲಿರುವ ಗುಹೆಯೊಂದರಲ್ಲಿ ಸಿಕ್ಕಿಹಾಕಿಕೊಂಡಿತು ಮತ್ತು ತಂಡವು ಅಲ್ಲಿಗೆ ತಲುಪಲು ನಾಲ್ಕೂವರೆ ಗಂಟೆಗಳ ಕಾಲ ಚಾರಣವನ್ನು ತೆಗೆದುಕೊಂಡಿತು.
ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿ ಹಶಿಸ್ ಗುರುವಾರ ಅರಣ್ಯ ಪ್ರದೇಶದ ಬಳಿ ತಾಯಿ ಮತ್ತು ನಾಲ್ಕು ವರ್ಷದ ಮಗು ಅಲೆದಾಡುತ್ತಿರುವುದನ್ನು ಕಂಡು, ವಿಚಾರಣೆ ನಡೆಸಿದಾಗ, ಆಕೆಯ ಇತರ ಮೂವರು ಮಕ್ಕಳು ಮತ್ತು ಅವರ ತಂದೆ ಆಹಾರವಿಲ್ಲದೆ ಗುಹೆಯಲ್ಲಿ ಸಿಲುಕಿರುವ ಬಗ್ಗೆ ತಿಳಿದುಬಂದಿದೆ. ಈ ಬುಡಕಟ್ಟು ಕುಟುಂಬ ಅರಣ್ಯ ಉತ್ಪನ್ನಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಾರೆ. ಅವರಿಗೆ ಸಿಟಿ ಜನರ ನಡುವಿನ ಯಾವುದೇ ಸಂಪರ್ಕ ಇಲ್ಲ. ಈ ನಡುವೆ ಭೂಕುಸಿತದಿಂದಾಗಿ ಅವರಿಗೆ ಸಂಪರ್ಕ ತಪ್ಪಿಹೋಗಿದ್ದು, ಊಟಕ್ಕೂ ಪರದಾಡು ಸ್ಥಿತಿಯಲ್ಲಿ ಇಡೀ ಕುಟುಂಬ ಇತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಕುಟುಂಬವನ್ನು ರಕ್ಷಣೆ ಮಾಡಲು ಭಾರಿ ಮಳೆಯ ನಡುವೆ ಅರಣ್ಯ ಪ್ರದೇಶವನ್ನು ಏರಬೇಕಾಗಿತ್ತು. ಜಾರು ಬಂಡೆಗಳನ್ನು ಏರಲು ಅಧಿಕಾರಿಗಳು ಮರಗಳು ಮತ್ತು ಬಂಡೆಗಳಿಗೆ ಹಗ್ಗಗಳನ್ನು ಕಟ್ಟಿ ಸಾಹಸ ಪಡಬೇಕಾಗಿತ್ತು. ಸುಮಾರು 7 ಕಿಲೋ ಮೀಟರ್ ಚಾರಣದ ನಂತರ ಅವರು ಈ ಕುಟುಂಬವನ್ನು ರಕ್ಷಣೆ ಮಾಡಿದ್ದಾರೆ.
ಮಕ್ಕಳು ಇರುವ ಗುಹೆ ತಲುಪಿದ ವೇಳೆ ಮಕ್ಕಳು ಊಟವಿಲ್ಲದೆ ಹಸಿದಿದ್ದರು. ಅವರಿಗೆ ನಾವು ತಿಂಡಿ ನೀಡಿದೆವು. ಬಳಿಕ ನಮ್ಮೊಂದಿಗೆ ಬನ್ನಿ ಎಂದಾಗ ಬರು ಒಪ್ಪಿದ ಅವರನ್ನು ನಾವು ಕರೆದುಕೊಂಡು ಬಂದಿದ್ದೆವೆ ಎಂದರು. ಪುಟಾಣಿ ಮಕ್ಕಳಾದ ಕಾರಣ ಅವರನ್ನು ನಮ್ಮ ದೇಹಕ್ಕೆ ಕಟ್ಟಿಕೊಂಡು ನಮ್ಮ ಚಾರಣವನ್ನು ಪ್ರಾರಂಭಿಸಿದ್ದೇವೆ ಎಂದು ಅರಣಾಧಿಕಾರಿ ಹಶಿಸ್ ಹೇಳಿದರು. ಸದ್ಯಮಕ್ಕಳು ಅರಣ್ಯ ಇಲಾಖೆ ಕಚೇರಿಯಲ್ಲಿದ್ದು ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂದಿದೆ, ಅಧಿಕಾರಿಯೊಬ್ಬರು ಮಗುವನ್ನು ಹತ್ತಿರ ಹಿಡಿದಿರುವ ದೃಶ್ಯ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅರಣ್ಯಾಧಿಕಾರಿಗಳ ಸವಾಲಿನ ಪ್ರಯತ್ನವನ್ನು ಸಾಮಾಜಿಕ ಮಾಧ್ಯಮದಲ್ಲಿ ಶ್ಲಾಘಿಸಿದ್ದಾರೆ. ಹಶಿಸ್, ಸೆಕ್ಷನ್ ಫಾರೆಸ್ಟ್ ಆಫೀಸರ್ ಬಿ.ಎಸ್.ಜಯಚಂದ್ರನ್, ಬೀಟ್ ಫಾರೆಸ್ಟ್ ಆಫೀಸರ್ ಕೆ.ಅನಿಲ್ ಕುಮಾರ್ ಮತ್ತು ಆರ್‌ಆರ್‌ಟಿ ಸದಸ್ಯ ಅನೂಪ್ ಥಾಮಸ್ ಕುಟುಂಬವನ್ನು ರಕ್ಷಿಸಲು ಏಳು ಕಿಲೋಮೀಟರ್ ದೂರದ ಪ್ರಯಾಣದಲ್ಲಿ ಭಾಗವಹಿಸಿದರು. ಮಳೆ ತೀವ್ರಗೊಳ್ಳುತ್ತಿದ್ದಂತೆ, ಅರಣ್ಯ ಇಲಾಖೆಯು ವಯನಾಡ್‌ನಲ್ಲಿರುವ ಬುಡಕಟ್ಟು ಸಮುದಾಯದ ಹೆಚ್ಚಿನ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.