LATEST NEWS
ವಾಲಿಬಾಲ್ ಕೋಚ್ ನಾಗೇಶ್ ಸ್ಮರಣಾರ್ಥ ವಾಲಿಬಾಲ್ ಟೂರ್ನಿ ಶನಿವಾರ

ಮಂಗಳೂರು ಜನವರಿ 27: ವಾಲಿಬಾಲ್ ತರಬೇತುದಾರ ದಿ. ನಾಗೇಶ್ ಎ ಸ್ಮರಣಾರ್ಥ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪದವಿಪೂರ್ವ ಕಾಲೇಜು ಬಾಲಕರ ಹಾಗೂ ಬಾಲಕಿಯರ ಆಹ್ವಾನಿತ ತಂಡಗಳ ವಾಲಿಬಾಲ್ ಟೂರ್ನಿಯನ್ನು ನಾಳೆ ಜನವರಿ 28 ರಂದು ಉರ್ವಸ್ಟೋರ್‌ನ ಮಂಗಳಾ ಫ್ರೆಂಡ್ಸ್ ಸರ್ಕಲ್ ವಾಲಿವಾಲ್ ಮೈದಾನದಲ್ಲಿ ಏರ್ಪಡಿಸಲಾಗಿದೆ ಉರ್ವಸ್ಟೋರ್‌ನ ಮಂಗಳಾ ಫ್ರೆಂಡ್ಸ್ ಸರ್ಕಲ್ ಮತ್ತು ಸುರತ್ಕಲ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಈ ಪಂದ್ಯಾಟ ನಡೆಯಲಿದೆ.
ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳಾ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ರಮೇಶ್ ಶೆಟ್ಟಿ, ‘ಟೂರ್ನಿಯನ್ನು ಭಾರತೀಯ ವಾಲಿಬಾಲ್ ತಂಡದ ತರಬೇತುದಾರರಾಗಿದ್ದ ಬಾಲಚಂದ್ರನ್ ಉದ್ಘಾಟಿಸುವರು. ಸಂಜೆ 6ರಿಂದ ಅಂತಿಮ ಪಂದ್ಯಗಳು ನಡೆಯಲಿದ್ದು, ಬಳಿಕ ಸಮಾರೋಪ ನಡೆಯಲಿದೆ’ ಎಂದರು. ಸುರತ್ಕಲ್ ಸ್ಪೋರ್ಟ್ಸ್ ಕ್ಲಬ್‌ನ ಗಿರೀಶ್ ಶೆಣೈ, ‘ಬಾಲಕರ ವಿಭಾಗದಲ್ಲಿ ಆಹ್ವಾನಿತ ಎಂಟು ತಂಡಗಳು ಮತ್ತು ಬಾಲಕಿಯರ ವಿಭಾಗದಲ್ಲಿ (ಮುಕ್ತ) ಐದು ತಂಡಗಳು ಭಾಗವಹಿಸಲಿವೆ. ನಗದು ಬಹುಮಾನವೂ ಇರಲಿದೆ. ಆಟಗಾರರಿಗೆ ಉಚಿತವಾಗಿ ಕ್ರೀಡಾ ಸಮವಸ್ತ್ರವಿತರಿಸಲಿದ್ದೇವೆ’ ಎಂದರು. ಮಹಾಲೇಖಪಾಲರ ಕಚೇರಿ ಅಧಿಕಾರಿ ಹಾಗೂ ಫ್ರೆಂಡ್ಸ್ ಸರ್ಕಲ್ ಸದಸ್ಯ ಸುನಿಲ್ ಬಾಳಿಗಾ, ‘ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆಗಿದ್ದ ನಾಗೇಶ್ ವಾಲ್‌ಬಾಲ್ ಕ್ರೀಡೆಗಾಗಿ ಬದುಕನ್ನೇ ಅರ್ಪಿಸಿಕೊಂಡಿದ್ದರು. ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ನಿಸ್ವಾರ್ಥವಾಗಿ ಅವರನ್ನು ಬೆಳೆಸಿದ್ದರು. ಅವರ ಕೈಂಕರ್ಯ ಮುಂದುವರಿಸುವ ಸಲುವಾಗಿ ಇನ್ನು ಪ್ರತಿ ವರ್ಷ ಟೂರ್ನಿ ಹಮ್ಮಿಕೊಳ್ಳಲಿದ್ದೇವೆ’ ಎಂದರು. ರಾಷ್ಟ್ರೀಯ ವಾಲಿಬಾಲ್ ಆಟಗಾರರಾಗಿದ್ದ ಸುಮಿತ್ ನಂಬಿಯಾರ್, ‘ಕರಾವಳಿಯ ಅನೇಕ ವಾಲಿಬಾಲ್ ಆಟಗಾರರರು ರಾಜ್ಯ ಹಾಗೂ ರಾಷ್ಟ್ರೀಯ ತಂಡಗಳಿಗೆ ಆಯ್ಕೆ ಆಗಿದ್ದರ ಹಿಂದೆ ನಾಗೇಶ್ ಶ್ರಮ ಇದೆ’ ಎಂದರು.
