FILM
ವಿಶ್ವವಿಖ್ಯಾತ ಕಟ್ಟಡ ಬುರ್ಜ್ ಖಲೀಫಾ ಮೇಲೆ ‘ವಿಕ್ರಾಂತ್ ರೋಣ’
ದುಬೈ, ಫೆಬ್ರವರಿ 01: ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲೋಗೋ ಬಿಡುಗಡೆಯಾಗಿದೆ. ಅದರ ಜೊತೆ ಕಿಚ್ಚ ಸುದೀಪ್ ಅವರ ಕಟೌಟ್ ಸಹ ಪ್ರದರ್ಶನವಾಗಿದೆ.
ಸ್ಯಾಂಡಲ್‌ವುಡ್ ಬಾದ್‌ಶಾ ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸಿದ ಹಿನ್ನೆಲೆ ದುಬೈನ ಬುರ್ಜ್ ಖಲೀಫಾದಲ್ಲಿ ಬೆಳ್ಳಿ ಮಹೋತ್ಸವ ಸಂಭ್ರಮಾಚರಣೆ ಮಾಡಲಾಗಿದೆ. ಸುದೀಪ್ ಅವರ ಬೆಳ್ಳಿ ಮಹೋತ್ಸವದ ಹಿನ್ನೆಲೆ 2000 ಅಡಿಗೂ ಎತ್ತರದ ವಿಶ್ವವಿಖ್ಯಾತ ಕಟ್ಟಡದ ಮೇಲೆ ಕಿಚ್ಚನ ಕಟೌಟ್ ಪ್ರದರ್ಶನವಾಗಿದೆ.
ಸುದೀಪ್ ನಟಿಸಿದ ಚಿತ್ರಗಳ ಝಲಕ್, ಕ್ರಿಕೆಟ್, ಗಾಯನ ಸೇರಿದಂತೆ ಕಿಚ್ಚ ನಡೆದು ಬಂದ ಹಾದಿಯನ್ನು ಟೀಸರ್ ಮೂಲಕ ಬಿತ್ತರಿಸಲಾಯಿತು. ಇದೇ ವೇಳೆ ವಿಕ್ರಾಂತ್ ರೋಣ ಟೀಸರ್ ಸಹ ಬಿಡುಗಡೆಯಾಗಿದ್ದು, ಭಾರತದ ಹಲವು ಭಾಷೆಗಳಲ್ಲಿ ಹಾಗೂ ಜಗತ್ತಿನ ಹಲವು ದೇಶಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಪ್ರಕಟಿಸಿದ್ದಾರೆ.
ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಝಲಕ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ದುಬೈನಲ್ಲಿದ್ದ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಕೂಗಿ ಜೈಕಾರ ಹಾಕಿದ್ದಾರೆ.
ದುಬೈನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿರ್ಮಾಪಕ ಜಾಕ್ ಮಂಜು, ನಿರ್ದೇಶಕ ಅನೂಪ್ ಭಂಡಾರಿ, ನಟ ನಿರೂಪ್ ಭಂಡಾರಿ, ಪ್ರಿಯಾ ಸುದೀಪ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ವಿಕ್ರಾಂತ್ ರೋಣ ಸಿನಿಮಾ ಈ ಹಿಂದೆ ಫ್ಯಾಂಟಮ್ ಹೆಸರಿನಿಂದ ಕರೆಯಲಾಗುತ್ತಿತ್ತು. ಇದೀಗ, ಈ ಚಿತ್ರ ಹೆಸರನ್ನು ಅಧಿಕೃತವಾಗಿ ಇಂದಿನಿಂದ ಬದಲಾವಣೆ ಮಾಡಲಾಗಿದೆ.
ಟೈಟಲ್ ಲೋಗೋ ಬಿಡುಗಡೆಗೂ ಮುಂಚೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ರಿಯಲ್ ಸ್ಟಾರ್ ಉಪೇಂದ್ರ, ಬಹುಭಾಷೆ ನಟಿ ರಮ್ಯಾಕೃಷ್ಣ, ಪ್ರಿಯಾಮಣಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ.
ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರದಲ್ಲಿ ಸುದೀಪ್ ಜೊತೆ ನೀತು, ನಿರೂಪ್ ಭಂಡಾರಿ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ. ಜಾಕ್ ಮಂಜು ಈ ಚಿತ್ರ ನಿರ್ಮಿಸಿದ್ದಾರೆ. ಸದ್ಯಕ್ಕೆ ಬಿಡುಗಡೆ ಬಗ್ಗೆ ಮಾಹಿತಿ ಇಲ್ಲ.