KARNATAKA
ಹಿಜಬ್ ಜೊತೆಗೆ ಇದೀಗ ಕುಂಕುಮ ವಿವಾದ – ಕುಂಕುಮ ಇಟ್ಟುಕೊಂಡು ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ

ವಿಜಯಪುರ: ಹಿಜಬ್ ವಿವಾದ ಇನ್ನೂ ತಣ್ಣಗಾಗುವ ಮೊದಲೆ ಇದೀಗ ಸಿಂಧೂರ ವಿವಾದ ಕಾಣಿಸಿಕೊಂಡಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಕಾಲೇಜುಗಳಲ್ಲಿ ಸಿಂಧೂರ ಹಾಕಿಕೊಂಡು ಬಂದಿದ್ದಕ್ಕೆ ಶಿಕ್ಷಕರು ವಿರೋಧ ವ್ಯಕ್ತಪಡಿಸಿ ತೆಗೆಯುವಂತೆ ಹೇಳಿದ ಘಟನೆ ಇಂದು ಶುಕ್ರವಾರ ಬೆಳಗ್ಗೆ ನಡೆದಿದೆ.
ಇಂಡಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಗೆ ಕುಂಕುಮ ಅಳಿಸಿ ಕಾಲೇಜು ಪ್ರವೇಶಿಸುವಂತೆ ಉಪನ್ಯಾಸಕರು ತಾಕೀತು ಮಾಡಿದ್ದಾರೆ. ಇದಕ್ಕೆ ವಿದ್ಯಾರ್ಥಿ ಒಪ್ಪದಿದ್ದಾಗ ಕಾಲೇಜು ಪ್ರವೇಶ ನಿರಾಕರಿಸಲಾಗಿದೆ.
ಎಂದಿನಂತೆ ಕಾಲೇಜಿಗೆ ಬಂದ ವಿದ್ಯಾರ್ಥಿ ಗಂಗಾಧರ ಬಡಿಗೇರ್ ಹಣೆಗೆ ಸಿಂಧೂರ ಧರಿಸಿದ್ದ ಇದನ್ನು ಗಮನಿಸಿದ ಕಾಲೇಜಿನ ದೈಹಿಕ ಉಪನ್ಯಾಸಕ ಸಂಗಮೇಶ ಗೌಡ ತರಗತಿ ಪ್ರವೇಶಕ್ಕೆ ಅವಕಾಶ ಕೊಟ್ಟಿಲ್ಲ. ಈ ವೇಳೆ ಇವರಿಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ.

ಹಿಜಾಬ್ ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸುವಾಗ ಹಣೆಗೆ ಕುಂಕುಮ, ಸಿಂಧೂರ ಹಚ್ಚಿಕೊಂಡು ಬರುವುದು ಕೂಡ ವಿವಾದಕ್ಕೆ ಮತ್ತಷ್ಟು ಸಮಸ್ಯೆ ಒಡ್ಡಿದಂತಾಗುತ್ತದೆ ಎಂದು ವಿದ್ಯಾರ್ಥಿಗೆ ಕಾಲೇಜಿನ ದೈಹಿಕ ನಿರ್ದೇಶಕರು ಸಲಹೆ ನೀಡಿದಾಗ ವಿದ್ಯಾರ್ಥಿಗಳು-ಉಪನ್ಯಾಸಕರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ.
ಹಿಜಾಬ್ ಮತ್ತು ಕೇಸರಿ ಶಾಲು ಹೊರತುಪಡಿಸಿ ಹಣೆಗೆ ಕುಂಕುಮ, ನಾಮ ಹಾಕಿಕೊಂಡು ಬರಬೇಡಿ ಎಂದರೆ ಹೇಗೆ, ಅದು ನಮ್ಮ ಪಾರಂಪರಿಕ ಸಾಂಸ್ಕೃತಿಕ ಗುರುತು ಸಿಂಧೂರ, ತಿಲಕಕ್ಕೆ ಏಕೆ ಅನುಮತಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿ ಪಟ್ಟು ಹಿಡಿದು ಕೇಳಿದ್ದಾರೆ. ಆಗ ಪೊಲೀಸರು ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಯ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.