LATEST NEWS
ವೈಕುಂಠ ಏಕಾದಶಿ – ಹಸಿರಿನಿಂದ ಕಂಗೊಳಿಸಿದ ಡೊಂಗರಕೇರಿ ವೆಂಕಟರಮಣ ದೇವಸ್ಥಾನ
ಮಂಗಳೂರು ಜನವರಿ 10: ನಾಡಿನೆಲ್ಲೆಡೆ ಶ್ರೀ ವೆಂಕಟೇಶ್ವರ ಸ್ವಾಮಿಗೆ ವೈಕುಂಠ ಏಕಾದಶಿಯ ಸಂಭ್ರಮ ಸಡಗರ ವೈಭವದಿಂದ ನಡೆದಿದೆ. ವೈಕುಂಠ ಏಕಾದಶಿ ಹಿನ್ನೆಲೆ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜಾ-ಕೈಂಕರ್ಯಗಳು ನಡೆಯುತ್ತಿವೆ. ನಗರದ ಡೊಂಗರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ ಹೆಚ್ಚಾಗಿದೆ. ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನೆರವೇರುತ್ತಿದೆ. ದೇವಸ್ಥಾನದ ಮುಂಭಾಗದಲ್ಲಿ ವೈಕುಂಠ ದ್ವಾರವನ್ನು ತೆರೆಯಲಾಗಿದೆ. ವಿವಿಧ ಬಗೆಯ ಹೂಗಳಿಂದ ದೇವಾಲಯವನ್ನು ಸಿಂಗರಿಸಲಾಗಿದೆ.
ಬೆಳಗ್ಗೆಯಿಂದಲೇ ದೇವರಿಗೆ ಸುಪ್ರಭಾತ ಸೇವೆ, ಸಾಮೂಹಿಕ ಪ್ರಾರ್ಥನೆ, ಅಷ್ಟಾಕ್ಷರೀ ಮಂತ್ರ ಜಪ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ನಾಮತ್ರಯ ಮಹಾಮಂತ್ರ ಜಪಯಜ್ಞ ಸೇರಿ ವಿಶೇಷ ಪೂಜೆಗಳು ನಡೆಯುತ್ತಿದೆ. ದೇವರ ಪ್ರೇರಣೆಯಂತೆ ಲೋಕ ಕಲ್ಯಾಣ ಪ್ರಾಪ್ತಿಗಾಗಿ ಪುಷ್ಪಯಾಗ, ಅಷ್ಟಾವಧನ ಸೇವೆ ವೆಂಕಟೇಶ್ವರ ಸ್ವಾಮಿಗೆ ಜರುಗಲಿದೆ. ಏಕಾದಶಿ ಪ್ರಯುಕ್ತ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ವೆಂಕಟೇಶ್ವರ ದೇವರ ದರ್ಶನ ಪಡೆಯುತ್ತಿದ್ದಾರೆ.
ಈ ಬಾರಿಯ ವಿಶೇಷವಾಗಿ ಸಾವಯವ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ 10 ಸಾವಿರ ಮನೆಗಳಿಗೆ ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ ಸೊಪ್ಪಿನ ಗಿಡಗಳನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಈ ಬಾರಿ ದೇವಳವನ್ನು ವಿಶೇಷವಾಗಿ ಸಾವಯವ ವಿವಿಧ ಸೊಪ್ಪುಗಳ ಸಸಿಗಳಿಂದ ಅಲಂಕರಿಸಲಾಗಿದೆ. ಹರಿವೆ, ಪಾಲಕ್, ಬೆಂಡೆ, ಕೆಂಪು ತುಳಸಿ ಸಹಿತ ವಿವಿಧ ಸಸಿಗಳನ್ನು ನೈಸರ್ಗಿಕವಾಗಿ ಬೆಳೆಸಿ ಅಲಂಕಾರಕ್ಕೆ ಬಳಕೆ ಮಾಡಲಾಗಿದೆ.
ಪ್ರತಿ ಏಕಾದಶಿಗಳಿಗಿಂತಲೂ ವೈಕುಂಠ ಏಕಾದಶಿ ವಿಶೇಷವಾದದ್ದು. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದಂದು ಬರುವ ಏಕಾದಶಿ ಅತ್ಯಂತ ವಿಶೇಷವಾದದ್ದು. ಈ ದಿನದಂದು ವೈಕುಂಠದ ಬಾಗಿಲು ತೆರೆದಿರುವ ದಿನ ಎಂಬ ಪ್ರತೀತಿ ಇರುವುದರಿಂದ ವಿಷ್ಣು ದೇವಾಲಯ ದರ್ಶನ ಅತ್ಯಂತ ಮಹತ್ವ ಪಡೆದುಕೊಂಡಿದೆ. ಈ ದಿನ ವಿಷ್ಣು ದೇವಾಲಯಳಲ್ಲಿ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.