ಕರಾವಳಿಗೆ ಬಂದ ಅಪರೂಪದ ಅತಿಥಿ

ಉಡುಪಿ ಮಾರ್ಚ್ 30: ಪಶ್ಚಿಮ ಘಟ್ಟದ ಅಪರೂಪದ ಜೀವಿ ಎಂದೇ ಗುರುತಿಸಲ್ಪಟ್ಟ ಹಾರುವ ಹಾವೊಂದು ಮಲ್ಪೆಯ ಹೋಟೆಲ್ ಒಂದರಲ್ಲಿ ಪತ್ತೆಯಾಗಿದೆ.

ತೀರಾ ಅಪರೂಪವಾಗಿರುವ ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ಕಾಣ ಸಿಗುವ ಹಾರುವ ಹಾವು ಗೋಲ್ಡನ್‌ ಟ್ರೀ ಸ್ನೇಕ್‌ ಇದಾಗಿದ್ದು, ಪಶ್ಚಿಮಘಟ್ಟದ ದಟ್ಟಕಾಡಿನಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇದರ ವೈಜ್ಞಾನಿಕ ಹೆಸರು ಕೈಸೋಪೆಲಿಯ ಆರ್ನೇಟ, ಕನ್ನಡದಲ್ಲಿ ಹಾರುವ ಹಾವು ಹಾಗೂ ತುಳುವಿನಲ್ಲಿ ಪಲ್ಲೀಪುತ್ರ ಎಂದು ಕರೆಯಲಾಗುತ್ತದೆ.

ಮಲ್ಪೆಯ ಹೋಟೆಲ್‌ಗೆ ಪೂರೈಕೆಯಾಗಿದ್ದ ತರಕಾರಿ ಮಧ್ಯೆ ಈ ಹಾವು ಕಾಣಿಸಿಕೊಂಡಿದೆ. ಕರಾವಳಿಯಲ್ಲಿ ತೀರಾ ಅಪರೂಪಕ್ಕೆ ಕಾಣಿಸಿಕೊಳ್ಳುತ್ತದೆ. ಬಹುಶಃ ಮಲೆನಾಡಿನಿಂದ ಸರಬರಾಜಾಗುವ ತರಕಾರಿ ವಾಹನದಲ್ಲಿ ಹಾವು ಕರಾವಳಿಗೆ ಬಂದಿದೆ.

ಗೋಲ್ಡನ್‌ ಟ್ರೀ ಸ್ನೇಕ್‌ ಹೆಸರೇ ಹೇಳುವಂತೆ ಮರಗಳ ಮೇಲೆ ವಾಸಮಾಡುವ ಹಾವು. ಹಲ್ಲಿ, ಓತಿಕ್ಯಾತ, ಪಕ್ಷಿಗಳ ಮೊಟ್ಟೆಗಳನ್ನು ತಿಂದು ಇವು ಜೀವಿಸುತ್ತವೆ. ಹಾರುವುದು ಎಂದರೆ ಪಕ್ಷಿಯಂತೆ ಹಾವು ಹಾರುವುದಿಲ್ಲ. ಮರದಿಂದ ಮರಕ್ಕೆ ಕೆಳಮುಖವಾಗಿ ನೆಗೆಯುತ್ತದೆ. ತನ್ನ ಶರೀರವನ್ನು ಬಾಣದಂತೆ ಹದಗೊಳಿಸಿ ಜಿಗಿಯುವ ಕಲೆಗಾರಿಕೆ ಈ ಹಾವಿಗಿದೆ.

ಬಣ್ಣ ಬಣ್ಣಗಳಿಂದ ಕೂಡಿರುವ ಸುಂದರವಾದ ಈ ಹಾವು ವಿಷಕಾರಿ ಅಲ್ಲ. ಬಹಳಷ್ಟು ಜನರು ಬಣ್ಣದ ಹಾವು ನೋಡಿ, ವಿಷಕಾರಿ, ಕನ್ನಡಿ ಹಾವು ಎಂದೇ ಭಾವಿಸಿ ಸಾಯಿಸುತ್ತಾರೆ.