ಇಂದು ವಿಶ್ವ ಇಡ್ಲಿ ದಿನ ಸ್ವಾದಿಷ್ಟವಾದ ಇಡ್ಲಿಯನ್ನು ಸಾಂಬಾರ ಚಟ್ನಿ ಜೊತೆ ಚಪ್ಪರಿಸಿ ತಿನ್ನಿ…..

ಮಂಗಳೂರು ಮಾರ್ಚ್ 30: ದಕ್ಷಿಣಭಾರತದ ಬಹು ಜನಪ್ರಿಯ ತಿಂಡಿಯಾದ ಇಡ್ಲಿಯ ದಿನ ಇಂದು. ಮಾರ್ಚ್ 30 ರಂದು ವಿಶ್ವ ಇಡ್ಲಿ ದಿನವಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಒಂದ ದಿನಕ್ಕೆ ಲಕ್ಷಗಟ್ಟಲೆ ಇಡ್ಲಿಯನ್ನು ತಿನ್ನುವ ದಕ್ಷಿಣ ಭಾರತದವರಿಗೆ ಈ ದಿನ ವಿಶ್ವ ಇಡ್ಲಿ ದಿನ ಎಂದು ತಿಳಿದಿರುವ ಸಾಧ್ಯತೆ ಕಮ್ಮಿ.

ಇವತ್ತು ವಿಶ್ವ ಇಡ್ಲಿ ದಿನ. ಹಬೆಯಾಡುವ ಇಡ್ಲಿ ಹಾಗೂ ಹದವಾದ ಚಟ್ನಿ, ಮೇಲೊಂದಿಷ್ಟು ಬೆಣ್ಣೆ ಮುಂದೆ ಬಾಗದ ನಾಲಗೆಯುಂಟೆ.?. ಅದ್ರಲ್ಲೂ ಕರಾವಳಿಗರಿಗಂತೂ ಬೆಳಗಿನ ಉಪಹಾರದಲ್ಲಿ ಇಡ್ಲಿ, ಸಾಂಬಾರ್, ಚಟ್ನಿ ಇರಲೇಬೇಕು. ಆರೋಗ್ಯಭರಿತವೂ, ರುಚಿಕರವೂ ಆಗಿರುವ ಇಡ್ಲಿಯನ್ನು ಇಷ್ಟಪಡದವರೇ ಇಲ್ಲ.

ದಕ್ಷಿಣ ಭಾರತದ ಜನರ ಬಹು ಪ್ರೀತಿಯ ಆಹಾರ ಇಡ್ಲಿ ಮತ್ತು ಸಾಂಬಾರ್. ಇದು ಅತ್ಯುತ್ತಮ ಪೌಷ್ಟಿಕ ಆಹಾರ ಕೂಡ ಹೌದು. ಬೆಳಗ್ಗಿನ ತಿಂಡಿ ಸಾಕಷ್ಟು ಪ್ರೋಟಿನ್, ಕಾರ್ಬೋಹೈಡ್ರೇಟ್ಸ್, ಕ್ಯಾಲ್ಸಿಯಂ ಒಳಗೊಂಡಿರಬೇಕು. ದಕ್ಷಿಣ ಭಾರತದ ಜನಪ್ರಿಯ ತಿಂಡಿಯಾಗಿರುವ ಇಡ್ಲಿಯಲ್ಲಿ ಅಧಿಕ ಪೋಷಕಾಂಶಗಳನ್ನು ಹೊಂದಿದ್ದು, ಬೆಳಗ್ಗಿನ ತಿಂಡಿಗೆ ಉತ್ತಮ ಆಯ್ಕೆ.

ಅಕ್ಕಿ, ಉದ್ದು ಒಳಗೊಂಡಿರುವ ಇಡ್ಲಿ ಮತ್ತು ಸಾಂಬರ್ ನಲ್ಲಿರುವ ತರಕಾರಿ ಜನಪ್ರಿಯ ಮತ್ತು ಪರಿಪೂರ್ಣ ಆಹಾರವಾಗಿದೆ. ಸುಲಭವಾಗಿ ತಯಾರಿಸಲ್ಪಡುವ ಈ ಇಡ್ಲಿಯಲ್ಲಿ ಹಲವಾರು ವಿಧಗಳಿವೆ. ರವಾ ಇಡ್ಲಿ, ಮಿನಿ ಇಡ್ಲಿ, ಮಲ್ಲಿಗೆ ಇಡ್ಲಿ.. ಹೀಗೆ ಬಗೆಬಗೆಯ ಆಕಾರ ಮತ್ತು ರುಚಿಗಳಲ್ಲಿ ಇಡ್ಲಿ ಹೊಟ್ಟೆ ಸೇರುತ್ತದೆ.

ಮಾರ್ಚ್ 30ನೇ ತಾರೀಖಿನಂದು ಇಡ್ಲಿ ದಿನ ಆಚರಿಸಬೇಕೆಂದು ತಮಿಳ್ನಾಡು ಕೇಟರಿಂಗ್ ಎಂಪ್ಲಾಯೀಸ್ ಯೂನಿಯನ್ ಪ್ರೆಸಿಡೆಂಟ್ ಎಂ.ಜಿ ರಾಜಾಮಣಿ ಘೋಷಿಸುವುದರ ಮೂಲಕ ಇಡ್ಲಿ ದಿನ ಚಾಲ್ತಿಗೆ ಬಂದಿತ್ತು. ಕಳೆದ ಮೂರು ವರ್ಷಗಳಿಂದ ಈ ದಿನವನ್ನು ಆಚರಿಸಲಾಗುತ್ತಿದೆ.
2013ರಲ್ಲಿ ಕೊಯಂಬತ್ತೂರು ನಿವಾಸಿಯಾದ ಇನಿಯವನ್ ಎಂಬವರು 128 ಕೆಜಿ ತೂಕದ ಇಡ್ಲಿಯೊಂದನ್ನು ತಯಾರಿಸಿ ಗಿನ್ನೆಸ್ ದಾಖಲೆ ಮಾಡಿದ್ದರು. ಅದೇನೇ ಇರಲಿ ಇಡ್ಲಿ ಎಂಬುದು ಬಹುತೇಕ ನಮ್ಮೆಲ್ಲರ ಬ್ರೇಕ್‌ ಫಾಸ್ಟ್ ಮೆನುವಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವುದಕ್ಕೆ ಅದರ ಅದ್ಭುತ ರುಚಿಯೇ ಕಾರಣ ಎಂಬುದನ್ನು ಮಾತ್ರ ಅಲ್ಲಗೆಳೆಯುವಂತಿಲ್ಲ. ಇಂದು ಪ್ರಪಂಚವೇ ಇಡ್ಲಿ ದಿನವನ್ನಾಗಿ ಆಚರಿಸುತ್ತಿದೆ.