LATEST NEWS
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ವಯೋ ಸಹಜ ಅರುಳು ಮರುಳು ಪ್ರಾರಂಭವಾಗಿದೆ – ವೇದವ್ಯಾಸ್ ಕಾಮತ್

ಮಂಗಳೂರು ಜನವರಿ 07: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ವಯೋ ಸಹಜ ಅರುಳು ಮರುಳು ಪ್ರಾರಂಭವಾಗಿದೆ. ಹಾಗಾಗಿ ಅವರು ರಾಷ್ಟ್ರೀಯವಾದ ಮತ್ತು ಉಗ್ರವಾದದ ನಡುವಿನ ಸಾಮ್ಯತೆ ತಿಳಿಯುತ್ತಿಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.
ಪದೇ ಪದೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಅವಮಾನಕರವಾಗಿ ಹೇಳಿಕೆ ನೀಡುವ ಸಿದ್ಧರಾಮಯ್ಯ ವಿರುದ್ಧ ಕಿಡಿ ಕಾರಿರುವ ಶಾಸಕ ಕಾಮತ್, ಇತ್ತೀಚೆಗೆ ಉಗ್ರರ ಸಂಪರ್ಕವಿರುವ ಕಾರಣ ಕಾಂಗ್ರೇಸ್ ಮುಖಂಡನ ಮಗನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ ಬಗ್ಗೆ ಮಾತನಾಡುವ ಧೈರ್ಯ ಸಿದ್ಧರಾಮಯ್ಯ ಅವರಿಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಸರಸಂಘ ಚಾಲಕರಾಗಿದ್ದ ಪೂಜ್ಯ ಗುರೂಜಿ ಅವರು ಮರಣ ಹೊಂದಿದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಕಾಂಗ್ರೇಸ್ ಶ್ರದ್ಧಾಂಜಲಿ ಸಲ್ಲಿಸಿದ್ದನ್ನು ಪಕ್ಷಾಂತರಿ ಸಿದ್ಧರಾಮಯ್ಯ ಮರೆತಿದ್ದಾರೆ. ಇಂಡೋ – ಚೈನಾ ಯುದ್ಧದ ಸಂಧರ್ಭದಲ್ಲಿ ಸಂಘದ ಸ್ವಯಂಸೇವಕರು ಸೈನಿಕರ ಜೊತೆಗಿದ್ದು ಸಹಕಾರ ನೀಡಿದ್ದಾರೆ. ಅದಕ್ಕಾಗಿಯೇ ಅಂದಿನ ಪ್ರಧಾನಿ ರಾಜಪಥದಲ್ಲಿ ಸಂಘದ ಪಥ ಸಂಚಲನಕ್ಕೆ ಅವಕಾಶ ನೀಡಿರುವುದು ಎನ್ನುವುದನ್ನು ಅರಿತುಕೊಳ್ಳಲಿ ಎಂದು ತಿವಿದಿದ್ದಾರೆ.
ಕಾಂಗ್ರೇಸ್ ಪಕ್ಷದ ಮೇಲೆ ನಂಬಿಕೆ ಕಳೆದುಕೊಂಡಿರುವ ಅಲ್ಪಸಂಖ್ಯಾತ ಮತ ಬ್ಯಾಂಕಿನ ಭದ್ರತೆಗಾಗಿ ಸಿದ್ಧರಾಮಯ್ಯ ಆದಿಯಾಗಿ ಎಲ್ಲಾ ನಾಯಕರು ಮತಾಂಧತೆಯನ್ನು ಪ್ರೋತ್ಸಾಹಿಸುತಿದ್ದಾರೆ. ಕಾಂಗ್ರೇಸ್ ಪಕ್ಷ ದೇಶಕ್ಕೆ ಮಾರಕವಾಗಿ ಪರಿಣಮಿಸುತಿದ್ದು ಜನರು ಇದನ್ನು ಸೂಕ್ಷ್ಮವಾಗಿ ಗಮನಿಸುತಿದ್ದಾರೆ ಎಂದು ಕಾಮತ್ ಹೇಳಿದ್ದಾರೆ.
ಕುಕ್ಕರ್ ಬಾಂಬ್ ಸ್ಪೋಟದ ಉಗ್ರನ ಪರವಾಗಿ ಮೃದು ಧೋರಣೆ ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಥವ ಸಿದ್ಧರಾಮಯ್ಯ ಅವರು ಕಾಂಗ್ರೇಸ್ ಉಗ್ರರ ಪರವಾಗಿ ಕೆಲಸ ಮಾಡುತಿದ್ದ ಮಾಜಿ ಶಾಸಕರ ಕುಟುಂಬದ ಸದಸ್ಯರನ್ನ ಎನ್.ಐ.ಎ ಅಧಿಕಾರಿಗಳು ಬಂಧಿಸಿದ ವಿಚಾರದಲ್ಲಿ ಹಾಗೂ ಕಳೆದ ಕೆಲ ದಿನಗಳ ಹಿಂದೆ ಉಗ್ರ ಚಟುವಟಿಕೆಗೆ ಸಂಬಂಧಿಸಿ ಕಾಂಗ್ರೇಸ್ ನಾಯಕರ ಮಗನನ್ನು ಬಂಧಿಸಿರುವ ವಿಚಾರದಲ್ಲಿ ತಮ್ಮ ನಿಲುವು ಏನೆಂಬುದನ್ನು ಜನತೆಯ ಮುಂದಿಡಲಿ ಎಂದು ಶಾಸಕ ಕಾಮತ್ ಹೇಳಿದ್ದಾರೆ.