LATEST NEWS
ಉಕ್ರೇನ್ – ಗ್ಯಾಸ್ ಪೈಪ್‍ಲೈನ್ ಸ್ಫೋಟಿಸಿದ ರಷ್ಯಾ ಸೇನೆ
ಉಕ್ರೇನ್ : ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ದಿನದಿಂದ ದಿನಕ್ಕೆ ಭೀಕರತೆ ಪಡೆಯುತ್ತಿದ್ದು. ಯುದ್ದ ನಾಲ್ಕನೆ ದಿನಕ್ಕೆ ಕಾಲಿಟ್ಟಿದ್ದು, ಉಕ್ರೇನ್‍ನ ಎರಡನೇ ಅತಿ ದೊಡ್ಡ ನಗರ ಕರ್ಕಿವ್‍ನಲ್ಲಿರುವ ಗ್ಯಾಸ್ ಪೈಪ್‍ಲೈನ್ ಅನ್ನು ರಷ್ಯಾ ಸೇನೆ ಸ್ಫೋಟಿಸಿದೆ.
ಈ ವಿಚಾರವನ್ನು ಉಕ್ರೇನ್ ಅಧ್ಯಕ್ಷರ ಕಚೇರಿ ಅಧಿಕೃತವಾಗಿ ತಿಳಿಸಿದೆ. ಸ್ಫೋಟದ ಪರಿಣಾಮ ಆಯಿಲ್ ಟ್ಯಾಂಕ್ ಸ್ಫೋಟಗೊಂಡು ಆಗಸದಲ್ಲಿ ದೊಡ್ಡ ಅಣಬೆಯಾಕಾರದ ಮೋಡ ಆವರಿಸಿಕೊಂಡಿದೆ. ಇದು ಪರಿಸರಕ್ಕೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಲಿದೆ ಎಂದು ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ.
ನಗರದಲ್ಲಿ ವಾಸಿಸುತ್ತಿರುವ ನಿವಾಸಿಗಳು ಮನೆ ಕಿಟಕಿಗಳನ್ನು ಬಟ್ಟೆಯಲ್ಲಿ ಮುಚ್ಚಬೇಕು. ಜೊತೆಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ದ್ರವ ಪದಾರ್ಥಗಳನ್ನು ಹೆಚ್ಚು ಸೇವಿಸುವಂತೆ ಉಕ್ರೇನ್ ಸರ್ಕಾರ ಸೂಚಿಸಿದೆ. ಕರ್ಕಿವ್ ನಗರದಲ್ಲಿ ಉಕ್ರೇನ್ ಹಾಗೂ ರಷ್ಯಾ ಸೇನೆಗಳ ನಡುವೆ ಭಾರೀ ಯುದ್ಧ ನಡೆಯುತ್ತಿದೆ ಎಂದು ತಿಳಿದುಬಂದಿದೆ. ರಷ್ಯಾ ಗಡಿಯಿಂದ ಈ ನಗರ 40 ಕಿಲೋ ಮೀಟರ್ ದೂರದಲ್ಲಿದ್ದು, ಇಲ್ಲಿ ಸುಮಾರು 15 ಲಕ್ಷ ಜನರು ವಾಸಿಸುತ್ತಿದ್ದಾರೆ.