LATEST NEWS
ಉಡುಪಿ: ಪ್ರಖ್ಯಾತ ಡ್ಯಾನ್ಸ್ ಶೋನಲ್ಲಿ ಯಕ್ಷಗಾನಕ್ಕೆ ಅವಮಾನ?, ಅದೇ ಕಾರ್ಯಕ್ರಮದಲ್ಲಿ ಕ್ಷಮೆ ಯಾಚಿಸಬೇಕೆಂದು ಆಗ್ರಹ.
ಉಡುಪಿ, ಜುಲೈ 26: ಖಾಸಗಿ ವಾಹಿನಿ ಯಿಂದ ಯಕ್ಷಗಾನಕ್ಕೆ ಅವಮಾನ ಉಂಟಾಗಿದ್ದು, ಕರಾವಳಿಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ.
ಸಾಂಪ್ರದಾಯಿಕ ಆರಾಧನಾ ಕಲೆಯ ಬಗ್ಗೆ ಖಾಸಗಿ ವಾಹಿನಿಯಿಂದ ಯಕ್ಷಗಾನವನ್ನುಅಶ್ಲೀಲವಾಗಿ ಬಿಂಬಿಸಿದ ಆರೋಪವಿದೆ. ಕರಾವಳಿ ಭಾಗದಲ್ಲಿ ದೇವರ ಆರಾಧನೆಯ ಭಾಗವಾಗಿ ಯಕ್ಷಗಾನ ನಡೆಯುತ್ತಿದೆ. ಆದರೆ ವಾಹಿನಿಯಲ್ಲಿ ಪ್ರಸಾರವಾದ ನೃತ್ಯದಲ್ಲಿ ಯಕ್ಷಗಾನದ ವೇಷ ಧರಿಸಿ ಅಶ್ಲೀಲವಾಗಿ ನೃತ್ಯ ಮಾಡಿದ್ದಾರೆ ಎಂಬ ಆರೋಪವಿದೆ.
ಖಾಸಗಿ ವಾಹಿನಿಯಿಂದ ಸತತ ಮೂರನೇ ಬಾರಿ ಯಕ್ಷಗಾನಕ್ಕೆ ಅವಮಾನ!?
ಕರಾವಳಿಯ ಯಕ್ಷಗಾನ ಅಭಿಮಾನಿಗಳಿಂದ ಅಭಿಯಾನ ಆರಂಭವಾಗಿದ್ದು, ಯಾವುದೇ ಖಾಸಗಿ ವಾಹಿನಿಯಲ್ಲೂ ಯಕ್ಷಗಾನಕ್ಕೆ ಅವಮಾನವಾಗಬಾರದು, ಈ ಬಗ್ಗೆ ಪರೀಕ್ಷಿಸಲು ಸಮಿತಿ ರಚನೆ ಮಾಡಬೇಕು ಎಂದು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಗೆ ಯಕ್ಷಗಾನ ಅಭಿಮಾನಿಗಳಿಂದ ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಕರಾವಳಿ ಭಾಗದಲ್ಲಿ ಹರಕೆ ಹೊತ್ತು ಯಕ್ಷಗಾನ ನಡೆಸುತ್ತಾರೆ, ದೇವಾಲಯಗಳು ಯಕ್ಷಗಾನ ಮೇಳ ನಡೆಸುತ್ತವೆ. ಇಲ್ಲಿ ಯಕ್ಷಗಾನ ವೇಷಧಾರಿಗಳಿಗೆ ಸಿನಿಮಾ ನಟರಂತೆ ಅಭಿಮಾನಿಗಳಿದ್ದಾರೆ. ಯಕ್ಷಗಾನ ಕರಾವಳಿಯ ಸಾಂಪ್ರದಾಯಿಕ ಕಲೆಯಾಗಿದ್ದು, ಇನ್ನು ಮುಂದೆ ಯಕ್ಷಗಾನಕ್ಕೆ ಅವಮಾನವಾದರೆ ಸಹಿಸಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕೋಪ ಹೊರ ಹಾಕುತ್ತಿದ್ದಾರೆ.
ನೋವುಂಟು ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರದಹಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ವಾಹಿನಿಯ ಮುಖ್ಯಸ್ಥರು ಮತ್ತು ನೃತ್ಯ ಸಂಯೋಜಕರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಯಕ್ಷಗಾನ ಪ್ರೇಮಿಗಳಿಂದ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.