UDUPI
ಜಿಲ್ಲೆಯ ಅಭಿವೃದ್ಧಿಯ ಮುನ್ನೋಟ ಉಡುಪಿ ವಿಷನ್ 2025
ಜಿಲ್ಲೆಯ ಅಭಿವೃದ್ಧಿಯ ಮುನ್ನೋಟ ಉಡುಪಿ ವಿಷನ್ 2025
ಉಡುಪಿ, ಅಕ್ಟೋಬರ್ 5 : ಮಣಿಪಾಲದಲ್ಲಿ ನಡೆದ ವಿಷನ್ 2025 ಕಾರ್ಯಾಗಾರದಲ್ಲಿ ಐದು ವಿಷಯಗಳ ಬಗ್ಗೆ ಗುಂಪು ರಚಿಸಿ ಸವಿವರ ಚರ್ಚೆ ನಡೆಸಲಾಯಿತು. ಕರ್ನಾಟಕ 2025 ಸ್ವರೂಪ ದರ್ಶನದ ದಾಖಲೆಯಲ್ಲಿ ಮುಂದಿನ ಏಳು ವರ್ಷಗಳಲ್ಲಿ ಕರ್ನಾಟಕಕ್ಕೆ ಆಡಳಿತ ತಂತ್ರವನ್ನು ಒದಗಿಸುವ ಉದ್ದೇಶ ಹೊಂದಿದ್ದು ಪ್ರಾದೇಶಿಕ ಹಾಗೂ ಜಿಲ್ಲಾ ಅಭಿವೃದ್ಧಿಗೆ ಸ್ಪಷ್ಟ ಮುನ್ನುಡಿಯಾಗಲಿದೆ.
ಚರ್ಚೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು
ಎಲ್ಲ ಗುಂಪುಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಸಚಿವರು ಇ ಗವರ್ನೆನ್ಸ್ ಹಾಗೂ ಕಂದಾಯ ಇಲಾಖೆ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳನ್ನು ತಾಂತ್ರಿಕವಾಗಿ ಹಾಗೂ ಮಾನವಸಂಪನ್ಮೂಲಗಳನ್ನು ನೀಡಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. ನೇರವಾಗಿ ಫಲಾನುಭವಿಗಳೊಂದಿಗೆ ಸಂಪರ್ಕ ಹೊಂದುವ ಅತಿ ಪ್ರಮುಖ ಇಲಾಖೆಗಳಾಗಿದ್ದು ಇವುಗಳನ್ನು ಜನಸ್ನೇಹಿಯನ್ನಾಗಿಸುವ ಅಗತ್ಯವನ್ನು ಸಚಿವರು ಪ್ರತಿಪಾದಿಸಿದರು.
ಖಾಸಗಿ ಶಾಲೆಗಳಿಗೆ ಅನುಮತಿ ನಿರಾಕರಿಸಿ
ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಆರೋಗ್ಯದ ಕುರಿತ ಚರ್ಚೆಯಲ್ಲಿ ಶಿಕ್ಷಣದ ಕುರಿತು ನಡೆದ ಚರ್ಚೆಯಲ್ಲಿ ಮಕ್ಕಳಿಗೆ ಉತ್ತಮ ಉತ್ತಮ ಜ್ಞಾನ, ಕೌಶಲ್ಯ ಭರಿತ ಶಿಕ್ಷಣವನ್ನು ನೀಡಬೇಕು ಮತ್ತು ಪ್ರತಿ ಪಂಚಾಯತ್‍ನಲ್ಲಿ 1 ನೇ ತರಗತಿಯಿಂದ ಪಿಯುಸಿವರೆಗಿನ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಬೇಕು, ಪ್ರಾಥಮಿಕ ಶಿಕ್ಷಣದಲ್ಲಿ ಯಾವುದಾದರೂ ಒಂದು ಭಾಷೆಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು, ಆದಷ್ಟು ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಗಮನ ನೀಡಬೇಕು ಮತ್ತು ಖಾಸಗಿ ಶಾಲೆಗಳಿಗೆ ಸರಕಾರ ಅನುಮತಿ ನೀಡುವುದನ್ನು ನಿಲ್ಲಿಸಬೇಕು, ಹಾಗೂ ಪ್ರಾಥಮಿಕ ಶಿಕ್ಷಣದಿಂದ ಪಿ.ಯು.ಸಿ ತನಕದ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ಹೆಚ್ಚಿನ ತಂತ್ರಜ್ಞಾನವನ್ನು ಶಾಲೆಗಳಲ್ಲಿ ಬಳಸಬೇಕು ಮತ್ತು ಇ-ಲೈಬ್ರೆರಿ, ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣವನ್ನು ಸರಕಾರಿ ಶಾಲೆಯಲ್ಲಿ ನೀಡಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಚರ್ಚೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಆರೋಗ್ಯದ ಕುರಿತು ನಡೆದ ಚರ್ಚೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆಯನ್ನು ನೀಡಬೇಕು, ಆಂಬುಲೆನ್ಸ್ ನೀಡಬೇಕು. ಲೈಂಗಿಕ ಶಿಕ್ಷಣದ ಕುರಿತು ಮಕ್ಕಳಿಗೆ ಸರಿಯಾಗಿ ಮಾಹಿತಿಯನ್ನು ನೀಡಬೇಕು. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜನ್ನು ಸ್ಥಾಪಿಸುವಂತಾಗಬೇಕು ಹಾಗೂ ಪ್ರತಿ ಆಸ್ಪತ್ರೆಯಲ್ಲಿ ಎಂ.ಬಿ.ಬಿ.ಎಸ್ ಓದಿದ ವೈದ್ಯರು ಕಡ್ಡಾಯವಾಗಿ ಆಸ್ಪತ್ರೆಯಲ್ಲಿ 24 ಗಂಟೆ ಸೇವೆ ಸಲ್ಲಿಸುವಂತಾಗಬೇಕು, ಹಾಗೂ ಖಾಲಿ ಇರುವ ನರ್ಸ್ ಹುದ್ದೆಯನ್ನು ಭರ್ತಿಗೊಳಿಸಬೇಕೆಂಬ ಬೇಡಿಕೆಗಳು ಬಂದವು.
ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದ ಅಪ್ಲೀಕೇಶನ್(ಆ್ಯಪ್)ಅನ್ನು ಸರ್ಕಾರದಿಂದ ಅಭಿವೃದ್ದಿ ಪಡಿಸಬೇಕು. ತಾಂತ್ರಿಕತೆ ಅಭಿವೃದ್ಧಿಗೆ ಐಟಿ ಪಾರ್ಕ್ ಸಣ್ಣ ಪ್ರಮಾಣದಲ್ಲಿ ಹಾಗೂ ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸುವುದು, ಸಾರ್ವಜನಿಕರಿಗೆ ವೈ-ಫೈ ಸೇವೆಯನ್ನು ಒದಗಿಸಬೇಕು ಬೇಡಿಕೆ ಬಂತು.
ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು, ಚಿಂತಕರು, ಬುದ್ಧಿಜೀವಿಗಳು, ಶಿಕ್ಷಣ ತಜ್ಞರು, ವಿವಿಧ ಸಮುದಾಯಗಳ ಮುಖಂಡರು ಗುಂಪು ಚರ್ಚೆಯಲ್ಲಿ ಪಾಲ್ಗೊಂಡರು. ವಿಷನ್ ಡಾಕ್ಯುಮೆಂಟ್ ಅಭಿವೃದ್ಧಿ ಯೋಜನೆಗಳ ರೂಪುರೇಷೆಗೆ ಮಾರ್ಗದರ್ಶಿ ಸೂತ್ರವಾಗಲಿದೆ ಎಂದು ಕಾರ್ಯಾಗಾರದ ಸಮಾರೋಪದಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹೇಳಿದರು. ಸಿಇಒ ಶಿವಾನಂದ ಕಾಪಶಿ ಧನ್ಯವಾದ ಸಲ್ಲಿಸಿದರು.