Connect with us

    LATEST NEWS

    ಡಿಸೆಂಬರ್ 24 ರಂದು ಉಡುಪಿಯಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಉದ್ಘಾಟನೆ: ಶಾಸಕ ರಘುಪತಿ ಭಟ್

    ಉಡುಪಿ, ಡಿಸೆಂಬರ್ 22 : ಕ್ರೀಡಾಪಟುಗಳು ದೇಹ ಸದೃಢತೆ ಆಧಾರಿತ ಕ್ರೀಡೆಯಲ್ಲಿ ಭಾಗವಹಿಸುವಿಕೆ, ಕ್ರೀಡಾ ಸಂದರ್ಭದಲ್ಲಿ ಆಗುವ ಅವಘಡಗಳ ಚಿಕಿತ್ಸೆಗೆ ನೆರವಾಗುವ ಕ್ರೀಡಾ ವಿಜ್ಞಾನ ಕೇಂದ್ರವನ್ನು 2 ಕೋಟಿ ರೂ. ವೆಚ್ಚದಲ್ಲಿ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ 24 ರಂದು ಕೇಂದ್ರ ಯುವಜನ ಕ್ರೀಡೆ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವರು ಉದ್ಘಾಟಿಸಲಿದ್ದಾರೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.


    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಕ್ರೀಡಾ ವಿಜ್ಞಾನ ಕೇಂದ್ರ ಉದ್ಘಾಟನೆ ಕುರಿತು ನಡೆದ, ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿನ ಕ್ರೀಡಾಪಟುಗಳಿಗೆ ಉತ್ತೇಜಿಸುವುದರೊಂದಿಗೆ ಅವರುಗಳು ರಾಷ್ಟ್ರ  ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ, ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಸ್ಪರ್ಧೆಗಳಲ್ಲಿ ವಿಜೇತರಾಗಿ ಪ್ರಶಸ್ತಿ ಹಾಗೂ ಬಹುಮಾನ ಪಡೆಯುವಂತೆ ಅನುಕೂಲ ಮಾಡುವ ಉದ್ದೇಶದಿಂದ ಉಡುಪಿ ನಗರದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದರು.

    ಈ ಕ್ರೀಡಾ ವಿಜ್ಞಾನ ಕೇಂದ್ರದಿಂದ ಕ್ರೀಡಾಪಟುಗಳು ತಮ್ಮ ದೈನಂದಿನ ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮ ತರಬೇತಿ, ಸೂಕ್ಷ್ಮ ಸಲಹೆ ಸೇರಿದಂತೆ ಮತ್ತಿತರ ಕ್ರೀಡಾ ಕೌಶಲ್ಯಗಳನ್ನು ನೀಡುವುದರ ಜೊತೆಗೆ ಕ್ರೀಡಾ ಪ್ರದರ್ಶನದಲ್ಲಿ ಆಗುವ ಆಕಸ್ಮಿಕ ಅಪಘಾತಗಳ ಚಿಕಿತ್ಸೆಗೆ ಈ ಕೇಂದ್ರ ನೆರವಾಗಲಿದೆ ಎಂದರು.

    ಕ್ರೀಡಾ ಕೇಂದ್ರದ ಉದ್ಘಾಟನೆಯನ್ನು ಕೇಂದ್ರ ಯುವಜನ ಕ್ರೀಡೆ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ಅವರು ಅಂದು ಸಂಜೆ 6 ಕ್ಕೆ ಉದ್ಘಾಟಿಸಲಿದ್ದು, ರಾಜ್ಯ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಮತ್ತಿತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು. ಜಿಲ್ಲೆಯ ಕ್ರೀಡಾ ಪಟುಗಳಿಗೆ ಮತ್ತಷ್ಟು ಸ್ಫೂರ್ತಿ ತುಂಬಲು ಅನುಕೂಲವಾಗುವಂತೆ ನಗರದಲ್ಲಿ ಕ್ರೀಡಾವಿಜ್ಞಾನ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಬೇಡಿಕೆಯ ಪ್ರಸ್ತಾವನೆಯನ್ನು ಕೇಂದ್ರ ಸಚಿವರಿಗೆ ಸಲ್ಲಿಸಲಾಗುವುದು ಎಂದ ಅವರು, ಕೇಂದ್ರ ಕ್ರೀಡಾ ಸಚಿವರು ಕ್ರೀಡಾಪಟುಗಳೊಂದಿಗೆ ಸಂವಾದ ಸಹ ನಡೆಸಲಿದ್ದಾರೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply